ಬೆಂಗಳೂರು: ಕನ್ನಡದ ಪ್ರಖರ ಚಿಂತಕ, ಸಾಹಿತಿ ಮತ್ತು ಪರಿಸರಪ್ರೇಮಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು–ಬರಹ ವಿಷಯಾಧಾರಿತ 219ನೇ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವು ನಗರದ ಐತಿಹಾಸಿಕ ಲಾಲ್‌ಬಾಗ್ ಉದ್ಯಾನದಲ್ಲಿ ಜನವರಿ 14ರಿಂದ 26ರವರೆಗೆ ನಡೆಯಲಿದೆ.
ವಿಡಿಯೋ ನೋಡಿ : Lalbagh Flower Show 2026: Exclusive Interview with JD Dr. M Jagadhish on ‘Tejaswi Vishmaya’ Theme
ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ ಈ ಬೃಹತ್ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ (ಜನವರಿ 14) ಸಂಜೆ 4 ಗಂಟೆಗೆ ಉದ್ಘಾಟಿಸಲಿದ್ದಾರೆ. ಈ ಬಾರಿ ಪ್ರದರ್ಶನಕ್ಕೆ 10 ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುವ ನಿರೀಕ್ಷೆ ವ್ಯಕ್ತವಾಗಿದೆ.
ಪುಷ್ಪಗಳಲ್ಲಿ ಅರಳುವ ತೇಜಸ್ವಿ ಬದುಕು: ತೇಜಸ್ವಿಯವರ ಸಾಹಿತ್ಯ ಜೀವನ, ಚಿಂತನೆ, ಪ್ರಕೃತಿಯೊಂದಿಗಿನ ಆಳವಾದ ಒಡನಾಟ ಮತ್ತು ಸಾಮಾಜಿಕ ಸಂವೇದನೆಗಳನ್ನು ಪುಷ್ಪಕಲೆಯ ಮೂಲಕ ಜೀವಂತವಾಗಿ ಅನಾವರಣಗೊಳಿಸಲಾಗುತ್ತಿದೆ. ಪ್ರಕೃತಿ ಮತ್ತು ಮಾನವನ ನಡುವಿನ ಸಂಬಂಧವನ್ನು ತೇಜಸ್ವಿ ತಮ್ಮ ಬರಹಗಳಲ್ಲಿ ಹೇಗೆ ಚಿತ್ರಿಸಿದ್ದರು ಎಂಬುದನ್ನು ಪ್ರದರ್ಶನ ಸ್ಪಷ್ಟವಾಗಿ ಪ್ರತಿಬಿಂಬಿಸಲಿದೆ.
ಇದನ್ನೂ ಓದಿ: ಅನ್ನದಾತೆಯ ಸಂಕ್ರಾಂತಿ: ರೈತ ಮಹಿಳೆಯರಿಗೆ ಸಮರ್ಪಿತ ಸಂಭ್ರಮ
ದಟ್ಟ ಕಾಡು–ಜಲಪಾತದ ವಿಶಿಷ್ಟ ಮಾದರಿ: ಲಾಲ್‌ಬಾಗ್‌ನ ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಸುಮಾರು 1,800 ಚದರ ಅಡಿಯಲ್ಲಿ ದಟ್ಟ ಕಾಡಿನ ಮಡಿಲಿನಲ್ಲಿರುವ ಬೃಹತ್ ಬೆಟ್ಟ ಮತ್ತು ಜಲಪಾತದ ಮಾದರಿ ನಿರ್ಮಿಸಲಾಗುತ್ತಿದೆ. ಈ ನೈಸರ್ಗಿಕ ಹಿನ್ನೆಲೆಯ ಮುಂಭಾಗದಲ್ಲಿಯೇ ತೇಜಸ್ವಿಯವರ ನಿರುತ್ತರ ಮನೆಯ ಪುಷ್ಪ ಮಾದರಿ ಗಮನ ಸೆಳೆಯಲಿದೆ.
ಅದರ ಮುಂದೆ, ನಾಲ್ಕು ಅಡಿ ಎತ್ತರದ ತೇಜಸ್ವಿ–ರಾಜೇಶ್ವರಿ ಅವರ ಪ್ರತಿಮೆಗಳು. ತೇಜಸ್ವಿಯವರ ಸ್ಕೂಟರ್. ಕರ್ವಾಲೊ ಕಾದಂಬರಿಯ ಪಾತ್ರಗಳಾದ ಕಿವಿ ನಾಯಿ, ಕರಿಯಪ್ಪ, ಮಂದಣ್ಣ ತೇಜಸ್ವಿಯವರ ಆಸಕ್ತಿಯನ್ನು ನೆನಪಿಸುವ ಹಾರುವ ಓತಿ, ಮಿಡತೆ, ಜೇನುಹುಳು ಸೇರಿದಂತೆ ವಿವಿಧ ಪ್ರಾಣಿ–ಪಕ್ಷಿಗಳ ಮಾದರಿಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ.
ಇದನ್ನೂ ಓದಿ: BRICS ಶೃಂಗಸಭೆಯ ಲೋಗೋ, ಥೀಮ್, ವೆಬ್‌ಸೈಟ್ ಬಿಡುಗಡೆ
ಸಾಹಿತ್ಯದ ಮಹನೀಯರಿಗೆ ಪುಷ್ಪ ಗೌರವ: ಗಾಜಿನ ಮನೆಯೊಳಗೆ ಕುವೆಂಪು–ಹೇಮಾವತಿ, ಶಿವರಾಮ ಕಾರಂತ, ರಾಮಮನೋಹರ ಲೋಹಿಯಾ ಹಾಗೂ ರಾಜೇಶ್ವರಿ ತೇಜಸ್ವಿ ಅವರ ಪ್ರತಿಮೆಗಳು ರಾರಾಜಿಸಲಿವೆ. ಇವು ತೇಜಸ್ವಿಯವರ ಸಾಹಿತ್ಯ ಮತ್ತು ಚಿಂತನೆಗೆ ಪ್ರೇರಣೆ ನೀಡಿದ ವ್ಯಕ್ತಿತ್ವಗಳ ಸ್ಮರಣೆಯಾಗಿ ಮೂಡಿಬರಲಿವೆ.
ವ್ಯಂಗ್ಯಚಿತ್ರ–ಪಾತ್ರಗಳ ಲೋಕ: ಗಾಜಿನ ಮನೆಯ ಬಲಭಾಗದಲ್ಲಿ ತೇಜಸ್ವಿಯವರ ವ್ಯಂಗ್ಯಚಿತ್ರಗಳು, ಪ್ರತಿಮೆಗಳು ಹಾಗೂ ಅವರ ಕೃತಿಗಳ ಪಾತ್ರಗಳು ಇರಲಿವೆ. ಇನ್ನು ಎಡಭಾಗದಲ್ಲಿ ‘ಮಂತ್ರ ಮಾಂಗಲ್ಯ’ ಪರಿಕಲ್ಪನೆಯ ವರ್ಟಿಕಲ್ ಗಾರ್ಡನ್ ನಿರ್ಮಿಸಲಾಗುತ್ತಿದ್ದು, ಇದು ಪ್ರಕೃತಿ, ಸಂಸ್ಕೃತಿ ಮತ್ತು ಆಧ್ಯಾತ್ಮದ ಸಂಗಮವನ್ನು ಪ್ರತಿನಿಧಿಸಲಿದೆ.
ಇದನ್ನೂ ಓದಿ: ‘ಜನ ನಾಯಗನ್’ಗೆ ಬೆಂಬಲ ನೀಡಿದ ರಾಹುಲ್ ಗಾಂಧಿ
ಸಾಹಿತ್ಯ–ಪ್ರಕೃತಿಯ ಸಂಗಮ: ಸಾಹಿತ್ಯ ಮತ್ತು ಪರಿಸರ ಸಂವೇದನೆಯ ಅಪೂರ್ವ ಮೇಳವನ್ನೇ ಕಟ್ಟಿಕೊಡುತ್ತಿರುವ ಈ ಫಲಪುಷ್ಪ ಪ್ರದರ್ಶನವು ತೇಜಸ್ವಿ ಅವರ ಚಿಂತನೆಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವ ವೇದಿಕೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.









