ಮಾಧ್ಯಮಗಳ ಮೇಲೆ ಗಂಭೀರ ಆರೋಪ: ಸದನದಲ್ಲಿ ಮುಂದುವರಿದ ರಾಜಕೀಯ ಬಿಸಿ
ಬೆಂಗಳೂರು: ಇಂಧನ ಇಲಾಖೆಯ ಕಾರ್ಯಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡಿದ್ದಾರೆ, ಇದರಿಂದಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ದೃಶ್ಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ, ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿ ಶಾಸಕ ಸುನೀಲ ಕುಮಾರ್ ಪ್ರಶ್ನೆ ಎತ್ತಿದ್ದಾರೆ.
ಈ ವಿಷಯ ಸದನದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ವಿರೋಧ ಪಕ್ಷದ ನಾಯಕರು ಈ ಬಗ್ಗೆ ಸಚಿವ ಕೆ.ಜೆ. ಜಾರ್ಜ್ ಅವರು ಸದನದಲ್ಲೇ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಜಾರ್ಜ್, ತಮ್ಮ ರಾಜೀನಾಮೆ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: UGC ಇಕ್ವಿಟಿ ನಿಯಮಗಳು ‘ವಿಳಂಬವಾದರೂ ಸ್ವಾಗತಾರ್ಹ’ : ಸ್ಟಾಲಿನ್
“ಮುಖ್ಯಮಂತ್ರಿಗಳ ಮೇಲೆ ಸಂಪೂರ್ಣ ನಂಬಿಕೆ ಇದೆ”: ಸದನದಲ್ಲಿ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, “ನಾನು ರಾಜೀನಾಮೆ ನೀಡುವ ಯಾವುದೇ ವಿಚಾರವೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ನಾನು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇನೆ,” ಎಂದು ಹೇಳಿದರು. ತಮ್ಮ ಹಾಗೂ ಮುಖ್ಯಮಂತ್ರಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ರಾಜೀನಾಮೆ ಕುರಿತ ಸುದ್ದಿಗಳನ್ನು ಕೇವಲ ವದಂತಿ ಎಂದು ತಳ್ಳಿಹಾಕಿದರು.
ಮಾಧ್ಯಮಗಳ ಮೇಲೆ ಗಂಭೀರ ಆರೋಪ: ಈ ಸಂದರ್ಭದಲ್ಲಿ ಮಾಧ್ಯಮಗಳ ವರದಿಗಾರಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಸಚಿವ ಜಾರ್ಜ್, “ಹಿಂದೆ ದಿನಕ್ಕೆ ಮೂರು ಸುದ್ದಿಗಳು ಪ್ರಸಾರವಾಗುತ್ತಿದ್ದವು. ಈಗ ಪ್ರತಿ ಗಂಟೆಗೂ ಬ್ರೇಕಿಂಗ್ ನ್ಯೂಸ್ ಬೇಕಾಗಿದೆ. ಹೀಗಾಗಿ ಕೆಲವು ಮಾಧ್ಯಮಗಳು ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಸೃಷ್ಟಿಸುತ್ತಿವೆ,” ಎಂದು ಹೇಳಿದರು.
ಇದನ್ನೂ ಓದಿ: ಮಂಗಳೂರು ದಸರಾಕ್ಕೆ ₹5 ಕೋಟಿ ಅನುದಾನ ಘೋಷಿಸಲು ಮನವಿ
ರಾಜಕೀಯ ಅಸ್ಥಿರತೆ ಸೃಷ್ಟಿಸುವ ಉದ್ದೇಶದಿಂದ ಇಂತಹ ವರದಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ತಮ್ಮ ರಾಜೀನಾಮೆಯ ಪ್ರಶ್ನೆಯೇ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಸದನದಲ್ಲಿ ಮುಂದುವರಿದ ರಾಜಕೀಯ ಬಿಸಿ: ಇಂಧನ ಇಲಾಖೆಗೆ ಸಂಬಂಧಿಸಿದ ಈ ವಿಚಾರವು ಸದನದಲ್ಲಿ ರಾಜಕೀಯ ಬಿಸಿಗೆ ಕಾರಣವಾಗಿದ್ದು, ಬಿಜೆಪಿ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ಮಾಡುತ್ತಿದೆ ಎಂಬ ಆರೋಪಗಳು ಆಡಳಿತ ಪಕ್ಷದಿಂದ ಕೇಳಿಬಂದವು. ಇನ್ನು ಆಡಳಿತ ಪಕ್ಷದ ಸದಸ್ಯರು, ಇದು ಮಾಧ್ಯಮ ಸೃಷ್ಟಿಸಿದ ವಿಚಾರ ಎಂದು ಹೇಳಿ ಪ್ರತಿಪಕ್ಷದ ಆರೋಪಗಳನ್ನು ತಳ್ಳಿಹಾಕಿದರು.






















