ಟಿಕೆಟ್ ಹಣಕ್ಕೆ ‘ಕತ್ತರಿ’ ಹಾಕಿದ ಇಂಡಿಗೋ: ಭಾಗಶಃ ರೀಫಂಡ್ ನೀಡಿ ಕೈತೊಳೆದುಕೊಂಡ ಸಂಸ್ಥೆ!

0
5

ಬೆಂಗಳೂರು: ರದ್ದುಗೊಂಡ ವಿಮಾನಗಳ ಟಿಕೆಟ್ ದರವನ್ನು ಸಂಪೂರ್ಣವಾಗಿ ಮರುಪಾವತಿ ಮಾಡದ ಇಂಡಿಗೊ ವಿಮಾನಯಾನ ಸಂಸ್ಥೆಯ ವಿರುದ್ಧ ಬೆಂಗಳೂರಿನಲ್ಲಿ ಹಲವು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೂರ್ಣ ಮರುಪಾವತಿಯ ಭರವಸೆಯ ಹೊರತಾಗಿಯೂ, ಟಿಕೆಟ್ ರದ್ದತಿ ಸಮಯದಲ್ಲಿ ₹400 ರಿಂದ ₹3,000 ರವರೆಗೆ ಹಣ ಕಡಿತಗೊಂಡಿದೆ ಎಂದು ಆರೋಪಿಸಿದ್ದಾರೆ.

ಕಡಿತ ಶುಲ್ಕ ಮತ್ತು ಗುಪ್ತ ಶುಲ್ಕಗಳು: ಕಂಪನಿಯು ಡಿಸೆಂಬರ್ 15 ರವರೆಗೆ ಟಿಕೆಟ್ ರದ್ದತಿಗೆ ಪೂರ್ಣ ಮರುಪಾವತಿಯನ್ನು ಪ್ರಕಟಿಸಿತ್ತು. ಆದರೆ, ವಾಸ್ತವದಲ್ಲಿ ವಿಮಾನಯಾನ ಸಂಸ್ಥೆಯ ವೆಬ್‌ಸೈಟ್ ಹಾಗೂ MakeMyTrip, Cleartrip, ಮತ್ತು Ixigo ಯಂತಹ ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳು ರದ್ದತಿ ಶುಲ್ಕ ಮತ್ತು ‘ಅನುಕೂಲ ಸೇವಾ ಶುಲ್ಕ’ಗಳನ್ನು ವಿಧಿಸುವುದನ್ನು ಮುಂದುವರೆಸಿವೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಹಾಗೇ ಐಟಿ ಉದ್ಯೋಗಿ ಆದಿತ್ಯ ಎಂಬುವವರು, “ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದ್ದರೂ ಸಹ, ಈ ವೆಬ್‌ಸೈಟ್‌ಗಳಲ್ಲಿ ಗುಪ್ತ ಶುಲ್ಕಗಳನ್ನು (Hidden Charges) ವಿಧಿಸಲಾಗಿದೆ. ಈ ಕಾರಣದಿಂದಾಗಿ ನಾನು ಮೂರು ಟಿಕೆಟ್‌ಗಳಿಗೆ ಸುಮಾರು ₹3,000 ಕಳೆದುಕೊಂಡಿದ್ದೇನೆ,” ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ಪ್ರಯಾಣಿಕರಾದ ಕವಿತಾ ಅವರು, ಡಿ. 8ರಂದು ಬೆಂಗಳೂರಿನಿಂದ ಭುವನೇಶ್ವರಕ್ಕೆ ₹8,147 ಕೊಟ್ಟು ಟಿಕೆಟ್ ಬುಕ್ ಮಾಡಿದ್ದರು. ವಿಮಾನ ಹಾರಾಟ ರದ್ದಾಗಿದ್ದರಿಂದ ಅವರಿಗೆ ಮರುಪಾವತಿಯ ಸಂದೇಶ ಬಂದಿತ್ತು. ಆದರೆ, ಅವರಿಗೆ ಮರುಪಾವತಿಯಾದ ಮೊತ್ತ ಕೇವಲ ₹7,712 ಆಗಿದ್ದು, ₹435 ಕಡಿತಗೊಳಿಸಲಾಗಿದೆ. “ಉಳಿದ ಮೊತ್ತ ಏನಾಯಿತು? ಈ ಕುರಿತು ಕಾಲ್‌ಸೆಂಟರ್‌ಗೆ ಕರೆ ಮಾಡಿದಾಗ, ನಿಮ್ಮ ವಿಮಾನ ರದ್ದಾಗಿಲ್ಲ ಎಂದು ತಿಳಿಸಿದರು. ಇದು ಗಂಭೀರ ಸಮಸ್ಯೆ,” ಎಂದು ಕವಿತಾ ತಿಳಿಸಿದ್ದಾರೆ.

ಇಂಡಿಗೊ ಪ್ರತಿಕ್ರಿಯೆ: ಇದೇ ಸಮಯದಲ್ಲಿ, ಕೆಲ ಪ್ರಯಾಣಿಕರಿಗೆ ಟಿಕೆಟ್‌ ದರವು ಪೂರ್ಣವಾಗಿ ಮರುಪಾವತಿಯಾಗಿರುವುದಾಗಿಯೂ ವರದಿಯಾಗಿದೆ. ಈ ಕುರಿತು ಇಂಡಿಗೊ ಮೂಲವೊಂದು ಸ್ಪಷ್ಟನೆ ನೀಡಿದ್ದು, “ವಿಮಾನಯಾನ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸಲಾಗುತ್ತದೆಯಾದರೂ, ಟಿಕೆಟ್ ಬುಕಿಂಗ್ ಸಮಯದಲ್ಲಿ ವಿಧಿಸಲಾಗಿದ್ದ ಅನುಕೂಲ ಸೇವಾ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ,” ಎಂದು ಹೇಳಿದೆ.

ಹೀಗಾಗಿ ಶುಲ್ಕಗಳ ಕುರಿತು ಸರಿಯಾದ ಪಾರದರ್ಶಕತೆ ಇಲ್ಲದಿರುವುದು ಮತ್ತು ಕೆಲವು ಪ್ರಯಾಣಿಕರಿಗೆ ವಿಮಾನ ರದ್ದಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಸರಿಯಾದ ಮಾಹಿತಿ ನೀಡದಿರುವುದು ಗ್ರಾಹಕರಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ.

Previous articleಕೋರ್ಟ್ ಮೆಟ್ಟಿಲೇರಿದ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ. ಕ.ಸಾ.ಪ ಅಜೀವ ಸದಸ್ಯರ ಅಪಸ್ವರ ?