ಗೌರಿ ಗಣೇಶ ಹಬ್ಬ: ಖಾಸಗಿ ಬಸ್ ಪ್ರಯಾಣ ದರ ದುಪ್ಪಟ್ಟು

0
48

ಬೆಂಗಳೂರು: ವಾರಾಂತ್ಯದ ರಜೆ ಮತ್ತು ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳಲು ಸಜ್ಜಾಗಿರುವ ಜನರಿಗೆ ಖಾಸಗಿ ಬಸ್ ಮಾಲೀಕರು ದರವನ್ನು ಬೇಕಾಬಿಟ್ಟಿ ಏರಿಸಿದ್ದಾರೆ. ಖಾಸಗಿ ಬಸ್ಸುಗಳ ದರ ಏರಿಸಬಾರದು ಎಂದು ಸರ್ಕಾರದ ಕಟ್ಟುನಿಟ್ಟಿನ ಆದೇಶವಿದ್ದರೂ ಖಾಸಗಿ ಬಸ್ಸುಗಳ ಮಾಲಿಕರು ಕ್ಯಾರೇ ಅನ್ನುತ್ತಿಲ್ಲ.

ಹಬ್ಬದ ರಜೆಯನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ಖಾಸಗಿ ಬಸ್ ಕಂಪನಿಗಳು ಪ್ರಯಾಣದ ದರವನ್ನು ದುಪ್ಪಟ್ಟುಗೊಳಿಸಿವೆ. ಇದರಿಂದಾಗಿ ಪ್ರಯಾಣಿಕರು ಕಂಗಾಲಾಗಿದ್ದಾರೆ. ಬೆಂಗಳೂರಿನಿಂದ ಹೊರಡುವ ಪ್ರಮುಖ ಮಾರ್ಗಗಳಾದ ಧರ್ಮಸ್ಥಳ, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಮೈಸೂರು, ಕೊಡಗು, ಚಿಕ್ಕಮಗಳೂರು, ಕಲಬುರಗಿ ಮತ್ತು ಕಾರವಾರಕ್ಕೆ ಹೋಗುವ ಬಸ್​ಗಳ ದರಗಳು ಗಗನಕ್ಕೆ ಏರಿವೆ.

ಖಾಸಗಿ ಬಸ್ ಮಾಲೀಕರ ಈ ದರ ದರೋಡೆಗೆ ಕಡಿವಾಣ ಹಾಕಬೇಕಾದ ಸಾರಿಗೆ ಇಲಾಖೆ ಮೌನಕ್ಕೆ ಜಾರಿದ್ದು, ಶೀಘ್ರವೇ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಇಲ್ಲವಾದರೆ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹಬ್ಬ ಆಚರಿಸುವುದೇ ಕಷ್ಟವಾಗಲಿದೆ.

ಸಾಮಾನ್ಯವಾಗಿ ರೂ. 600-1100 ಇರುವ ಬೆಂಗಳೂರು-ಧರ್ಮಸ್ಥಳ ಬಸ್ ಟಿಕೆಟ್ ದರ ಈಗ ರೂ. 1499-2600ಕ್ಕೆ ಏರಿಕೆಯಾಗಿದೆ. ಅದೇ ರೀತಿ, ಇನ್ನು, ಬೆಂಗಳೂರು-ಕೊಡಗು, ಬೆಂಗಳೂರು-ಚಿಕ್ಕಮಗಳೂರು, ಬೆಂಗಳೂರು-ಮಂಗಳೂರು, ಬೆಂಗಳೂರು-ಧಾರವಾಡ, ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಕಾರವಾರ, ಬೆಂಗಳೂರು-ಕಲಬುರಗಿ ಮತ್ತು ಬೆಂಗಳೂರು-ಶಿವಮೊಗ್ಗ ಸೇರಿದಂತೆ ರಾಜ್ಯದ ಬಹುತೇಕ ಪ್ರಮುಖ ನಗರಗಳಿಗೆ ಪ್ರಯಾಣದ ದರ ಗಗನಕ್ಕೇರಿದೆ.

ಕೆಎಸ್‌ಆರ್‌ಟಿಸಿ 1,500 ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದ್ದು, ಆಗಸ್ಟ್ 25 ಮತ್ತು 26ರಂದು ಬೆಂಗಳೂರಿನಿಂದ ವಿವಿಧ ಪ್ರದೇಶಗಳಿಗೆ ಹಾಗೂ ಆಗಸ್ಟ್ 27 ಮತ್ತು 31ರಂದು ವಿವಿಧೆಡೆಯಿಂದ ಬೆಂಗಳೂರಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಇರಲಿದೆ. ಆದರೂ ಊರಿಗೆ ತೆರಳುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸರ್ಕಾರಿ ಸಾರಿಗೆ ವ್ಯವಸ್ಥೆಗಳಲ್ಲಿ ಕಾಯ್ದಿರಿಸುವಿಕೆ ಭರ್ತಿಯಾಗಿದೆ.

ಇದರಿಂದಾಗಿ ಪ್ರಯಾಣಿಕರು ಖಾಸಗಿ ಬಸ್‌ಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಇದನ್ನೇ ದುರುಪಯೋಗಪಡಿಸಿಕೊಂಡಿರುವ ಖಾಸಗಿ ಬಸ್ ಮಾಲೀಕರು, ಮನಬಂದಂತೆ ದರ ಏರಿಕೆ ಮಾಡಿ ಹಣ ಗಳಿಸುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ಇಂತಹ ದರ ಏರಿಕೆಗಳು ಪ್ರತಿ ವರ್ಷವೂ ನಡೆಯುತ್ತಿದ್ದು, ಇದನ್ನು ನಿಯಂತ್ರಿಸಲು ಸಾರಿಗೆ ಇಲಾಖೆ ಮತ್ತು ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದು ಪ್ರಯಾಣಿಕರ ಪ್ರಮುಖ ಆರೋಪವಾಗಿದೆ.

“ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೋಗಲು ಸರ್ಕಾರಿ ಬಸ್‌ಗಳು ಸಿಗುತ್ತಿಲ್ಲ. ಖಾಸಗಿ ಬಸ್‌ಗಳಲ್ಲಿ ಅಧಿಕ ದರ ವಸೂಲಿ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಹಬ್ಬಕ್ಕೆ ಊರಿಗೆ ಹೋಗಲು ಆಗುತ್ತಿಲ್ಲ. ಇಂತಹ ಸಮಯದಲ್ಲಿ ಸರ್ಕಾರವು ಹೆಚ್ಚುವರಿ ಬಸ್ ಸೌಲಭ್ಯವನ್ನು ಒದಗಿಸಬೇಕು” ಎಂದು ಬೆಂಗಳೂರಿನ ಕೂಲಿ ಕಾರ್ಮಿಕ ನರಸಿಂಹಪ್ಪ ಮನವಿ ಮಾಡಿದ್ದಾರೆ.

ಖಾಸಗಿ ಬಸ್‌ಗಳು ಹಬ್ಬದ ಸಂದರ್ಭದಲ್ಲಿ ಸಾಮಾನ್ಯ ದರವನ್ನು ಹೆಚ್ಚಿಸಿದ್ದು, ಅದರ ವಿವರ ಇಲ್ಲಿದೆ.
ಬೆಂಗಳೂರು-ಧರ್ಮಸ್ಥಳ
ಸಾಮಾನ್ಯ ದರ 600-1100 ಇದ್ದು, ಹಬ್ಬದ ಸಂದರ್ಭದಲ್ಲಿ 1499-2600 ಕ್ಕೆ ಏರಿಕೆಯಾಗಿದೆ.
ಬೆಂಗಳೂರು-ಕೊಡಗು ಸಾಮಾನ್ಯ ದರ 494-849 ಇದ್ದು, ಹಬ್ಬದ ಸಂದರ್ಭದಲ್ಲಿ 680-5000 ಕ್ಕೆ ಏರಿಕೆಯಾಗಿದೆ.
ಬೆಂಗಳೂರು-ಚಿಕ್ಕಮಗಳೂರು ಸಾಮಾನ್ಯ ದರ 575-800 ಇದ್ದು, ಹಬ್ಬದ ಸಂದರ್ಭದಲ್ಲಿ 950-1600 ಕ್ಕೆ ಏರಿಕೆಯಾಗಿದೆ.
ಬೆಂಗಳೂರು-ಮಂಗಳೂರು ಸಾಮಾನ್ಯ ದರ 349-2750 ಇದ್ದು, ಹಬ್ಬದ ಸಂದರ್ಭದಲ್ಲಿ 1019-3000 ಕ್ಕೆ ಏರಿಕೆಯಾಗಿದೆ.
ಬೆಂಗಳೂರು-ಧಾರವಾಡ ಸಾಮಾನ್ಯ ದರ 684-3600 ಇದ್ದು, ಹಬ್ಬದ ಸಂದರ್ಭದಲ್ಲಿ 1000-2400 ಕ್ಕೆ ಏರಿಕೆಯಾಗಿದೆ.
ಬೆಂಗಳೂರು-ಹುಬ್ಬಳ್ಳಿ ಸಾಮಾನ್ಯ ದರ 609-1800 ಇದ್ದು, ಹಬ್ಬದ ಸಂದರ್ಭದಲ್ಲಿ 1200-2700 ಕ್ಕೆ ಏರಿಕೆಯಾಗಿದೆ.
ಬೆಂಗಳೂರು- ಕಾರವಾರ ಸಾಮಾನ್ಯ ದರ 740-1600 ಇದ್ದು, ಹಬ್ಬದ ಸಂದರ್ಭದಲ್ಲಿ 1500-3499 ಕ್ಕೆ ಏರಿಕೆಯಾಗಿದೆ.
ಬೆಂಗಳೂರು-ಕಲಬುರಗಿ ಸಾಮಾನ್ಯ ದರ 570-1300 ಇದ್ದು, ಹಬ್ಬದ ಸಂದರ್ಭದಲ್ಲಿ 950-2200 ಕ್ಕೆ ಏರಿಕೆಯಾಗಿದೆ.
ಬೆಂಗಳೂರು-ಶಿವಮೊಗ್ಗ ಸಾಮಾನ್ಯ ದರ 375-1199 ಇದ್ದು, ಹಬ್ಬದ ಸಂದರ್ಭದಲ್ಲಿ 799-2100 ಕ್ಕೆ ಏರಿಕೆಯಾಗಿದೆ.

Previous articlekarnataka: ಆರು ಸಾವಿರ ವೈದ್ಯರಿಗೆ ಗ್ರಾಮೀಣ ಸೇವೆ ವಿನಾಯ್ತಿ
Next articleCheteshwar Pujara: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಚೇತೇಶ್ವರ ಪೂಜಾರ ವಿದಾಯ

LEAVE A REPLY

Please enter your comment!
Please enter your name here