ಉದ್ಯಮ ಕ್ಷೇತ್ರದಲ್ಲಿ ನಂಬಿಕೆ ಅತಿ ಮುಖ್ಯ: ಉದ್ಯಮಿಗಳು ಕೇವಲ ತಮ್ಮ ಬದುಕನ್ನು ಕಟ್ಟಿಕೊಳ್ಳುವುದಿಲ್ಲ
ಬೆಂಗಳೂರು: “ಒಕ್ಕಲುತನದ ಹೆಸರೇ ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿ” ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಹೇಳಿದರು. ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಉದ್ಯಮಿ ಒಕ್ಕಲಿಗ ಎಕ್ಸ್‌ಪೋ–2026’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಯಲ್ಲಿ ಉದ್ಯಮಿಗಳ ಪಾತ್ರ ಅತ್ಯಂತ ಮಹತ್ವದ್ದೆಂದು ತಿಳಿಸಿದರು.
ಭೂಮಿಯೊಂದಿಗೆ ನಂಟು ಹೊಂದಿರುವ ಒಕ್ಕಲಿಗ ಸಮುದಾಯದವರು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಭೂಮಿ ಮಕ್ಕಳಾಗಿರುವ ನೀವು ಶ್ರಮದ ಮೂಲಕ ಬದುಕು ಕಟ್ಟಿಕೊಂಡವರು ಎಂದು ಅವರು ಪ್ರಶಂಸಿಸಿದರು. ಹೊಸ ಉದ್ಯಮಿಗಳಾಗಿ ತಯಾರಾಗುತ್ತಿರುವ ಯುವಕರನ್ನು ಅಭಿನಂದಿಸಿದ ಅವರು, ಇಂದು ಅನೇಕರು ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದು, ರಾಜಕಾರಣದ ಹೊರಗೆಯೂ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಇದನ್ನೂ ಓದಿ: ಬಡವರ ಸೇಬು ಖ್ಯಾತಿಯ ಬಾರೆ ಹಣ್ಣು: ರೈತರ ಬದುಕಿಗೆ ಹೊಸ ದಿಕ್ಕು
ಶ್ರಮ, ನಂಬಿಕೆ ಮತ್ತು ಅವಕಾಶ : “ಎಲ್ಲಿ ಶ್ರಮವಿದೆಯೋ, ಅಲ್ಲಿ ಫಲವಿದೆ” ಎಂದು ಹೇಳಿದ ಡಿ.ಕೆ. ಶಿವಕುಮಾರ, “ದೇವರು ವರವೂ ಕೊಡಲ್ಲ, ಶಾಪವೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ದೇವರು ಕೊಟ್ಟ ಅವಕಾಶವನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು” ಎಂದು ಹೇಳಿದರು.
ಉದ್ಯಮ ಕ್ಷೇತ್ರದಲ್ಲಿ ನಂಬಿಕೆ ಅತಿ ಮುಖ್ಯ: ನಂಬಿಕೆ ಉಳಿಸಿಕೊಂಡಾಗ ಮಾತ್ರ ಗ್ರಾಹಕರು (ಕ್ಲೈಂಟ್ಸ್) ಬರುತ್ತಾರೆ ಎಂದು ಅಭಿಪ್ರಾಯಪಟ್ಟರು. “ನೀವು ಶಾಲೆ ನಡೆಸುತ್ತಿರಬಹುದು, ಕಟ್ಟಡ ನಿರ್ಮಿಸುತ್ತಿರಬಹುದು, ಎಲೆಕ್ಟ್ರಿಕ್ ಕೆಲಸ ಮಾಡುತ್ತಿರಬಹುದು ಅಥವಾ ಯಾವುದೇ ಉದ್ಯಮ ಮಾಡುತ್ತಿರಬಹುದು. ಯಾವ ಉದ್ಯಮವಾದರೂ ಗ್ರಾಹಕರಿಗೆ ನಿಮ್ಮ ಮೇಲಿನ ನಂಬಿಕೆ ಉಳಿಯಬೇಕು” ಎಂದು ತಿಳಿಸಿದರು.
ಇದನ್ನೂ ಓದಿ: ಭಾರತೀಯ ಅಂತರಿಕ್ಷ ನಿಲ್ದಾಣಕ್ಕೆ ಶತಪ್ರಯತ್ನ
ಉದ್ಯಮಿಗಳ ಪಾತ್ರ ಸಮಾಜದಲ್ಲಿ ಮಹತ್ವದ್ದು: ಉದ್ಯಮಿಗಳು ಕೇವಲ ತಮ್ಮ ಬದುಕನ್ನು ಕಟ್ಟಿಕೊಳ್ಳುವುದಲ್ಲ, ಸರ್ಕಾರಕ್ಕೂ ಸಹಕಾರ ನೀಡುತ್ತಾರೆ, ಉದ್ಯೋಗ ಸೃಷ್ಟಿಸಿ ಕೆಲಸಗಾರರಿಗೆ ಸಹಾಯ ಮಾಡುತ್ತಾರೆ ಹಾಗೂ ತಮ್ಮನ್ನು ನಂಬಿರುವ ಅನೇಕರ ಜೀವನಕ್ಕೂ ಆಸರೆಯಾಗುತ್ತಾರೆ ಎಂದು ಡಿ.ಕೆ. ಶಿವಕುಮಾರ ಹೇಳಿದರು. “ಎಷ್ಟೊಂದು ಶ್ರಮವಹಿಸಿ ಯಶಸ್ಸು ಗಳಿಸುತ್ತಿರುವ ಉದ್ಯಮಿಗಳಿಗೆ ನಾನು ಹೃದಯಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ” ಎಂದ ಅವರು, “ನಿಮ್ಮ ಎಲ್ಲಾ ಉದ್ಯಮಗಳು ಯಶಸ್ವಿಯಾಗಲಿ” ಎಂದು ಆಶಿಸಿದರು.
‘ಉದ್ಯಮಿ ಒಕ್ಕಲಿಗ ಎಕ್ಸ್‌ಪೋ–2026’ ಮೂಲಕ ಉದ್ಯಮಶೀಲತೆ, ನವೋದ್ಯಮಗಳು ಹಾಗೂ ಸ್ವಾವಲಂಬನೆಯ ಮಹತ್ವವನ್ನು ಸಮಾಜಕ್ಕೆ ತಲುಪಿಸುವ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.









