ಬೆಂಗಳೂರು: ಸಾಕ್ಷ್ಯ ನಾಶ ಪ್ರಕರಣದಲ್ಲಿ ಮತ್ತೆ ಕಾರಾಗೃಹ ಸೇರಿರುವ ಧಾರವಾಡ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ.
ಬಿಜೆಪಿ ಮುಖಂಡ ಯೋಗೇಶ್‌ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಜಾಮೀನು ಕೋರಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಶುಕ್ರವಾರ ವಿಚಾರಣೆ ನಡೆಸಿದರು.
ನಿನ್ನೆಯಿಂದ ಆರಂಭಿಸಿದ್ದ ವಾದವನ್ನು ಶುಕ್ರವಾರ ಮುಂದುವರೆಸಿದ ಕುಲಕರ್ಣಿ ಪರ ವಕೀಲರು, ಕೊಲೆ ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ಪಾತ್ರವಿಲ್ಲ. ಕೊಲೆಯಾದ ಸ್ಥಳದಲ್ಲಿಯೂ ಹಾಜರಿರಲಿಲ್ಲ. ಪ್ರಕರಣದಲ್ಲಿ ಇತರೆ ಆರೋಪಿಗಳಿಗೆ ಈಗಾಗಲೇ ಜಾಮೀನು ಮಂಜೂರಾಗಿದೆ. ಜಾಮೀನು ರದ್ದುಪಡಿಸಿ ಆದೇಶಿಸುವುದಕ್ಕೂ ಜಾಮೀನು ನೀಡುವ ಸಂದರ್ಭದಲ್ಲಿ ವಿಧಿಸುವ ಷರತ್ತುಗಳನ್ನು ಉಲ್ಲಂಘಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದರು.
ಇದನ್ನೂ ಓದಿ: ಬೆಳಗಾವಿ ಅಧಿವೇಶನದ ಪ್ರತಿಗಂಟೆಗೆ 24 ಲಕ್ಷ ಪೋಲು
ಅಲ್ಲದೆ, ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಿರುವುದು ತಪುö್ಪ ಎಂದು ಸುಪ್ರೀಂ ಕೋರ್ಟ್ ತಿಳಿಸಿಲ್ಲ. ಆದರೆ, ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಮಾತ್ರ ಜಾಮೀನು ರದ್ದುಮಾಡಿ ಆದೇಶಿಸಿದ್ದು, ಆದೇಶದಲ್ಲಿ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಬಹುದು ಎಂಬುದಾಗಿ ತಿಳಿಸಿದೆ. ಆದ್ದರಿಂದ ಅರ್ಜಿದಾರರ ವಿರುದ್ಧ ಇಬ್ಬರು ಅಧಿಕಾರಿಗಳ ಪಾಟಿ ಸವಾಲು ಬಾಕಿ ಇದೆ. ಹಾಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.























