ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ, ಮಾಲೀಕ, ಉದ್ಯಮಿ ಸಿ.ಜೆ. ರಾಯ್ ಎದೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ.
ಬೆಂಗಳೂರಿನ ಹೊಸೂರು ರಸ್ತೆಯ ಲ್ಯಾಂಗ್‌ಫರ್ಡ್ ಟೌನ್‌ನಲ್ಲಿರುವ ಕಂಪನಿಯ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಿ.ಜೆ. ರಾಯ್ ಬರೀ ರಿಯಲ್ ಎಸ್ಟೇಟ್ ಉದ್ಯಮಿಯಲ್ಲ. 1997ರಲ್ಲಿ ಕೇರಳದಿಂದ ಬಂದ ಈ ಸಾಮಾನ್ಯ ವ್ಯಕ್ತಿ ಇಂದು ಅನೇಕ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದರು.
ದೊಡ್ಡ ಉದ್ಯಮಿಯಾಗಿ ಬೆಳೆದ ಸಿ.ಜೆ. ರಾಯ್ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದರು. ಸಿನಿಮಾ, ಕಿರುತೆರೆ ಮತ್ತು ರಿಯಾಲಿಟಿ ಶೋ ಗಳಿಗೂ ಪ್ರಾಯೋಜಕತ್ವ ನೀಡುತ್ತಿದ್ದರು.
ಕನ್ನಡ ಮತ್ತು ಮಲಯಾಳ ಬಿಗ್‌ಬಾಸ್ ಶೋಗೆ ಪ್ರಾಯೋಜಕತ್ವ ನೀಡಿದ್ದರು. ಸರಿಗಮಪ ವಿಜೇತರುಗಳಿಗೆ 50 ಲಕ್ಷ ರೂಪಾಯಿ ಬೆಲೆಯ ಮನೆ ಪ್ರಾಯೋಕತ್ವ ಮಾಡಿದ್ದರು. ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿಯ ಅತ್ಯಂತ ಪ್ರತಿಷ್ಠಿತ ಸೈಮಾ ಪ್ರಶಸ್ತಿಯ ಮುಖ್ಯ ಪ್ರಾಯೋಜಕರಾಗಿದ್ದರು.
ಸಿನಿಮಾ ನಿರ್ಮಾಣದಲ್ಲಿಯೂ ಮುಂದಾಗಿದ್ದ ರಾಯ್ ಅವರು 2012ರಲ್ಲಿ ಮೋಹನ್‌ಲಾಲ್ ನಟನೆ ʼಕ್ಯಾಸನೋವಾʼ ಸಿನಿಮಾವನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಿಸಿದ್ದರು. ಅಲ್ಲದೇ ಮಲಯಾಳದಲ್ಲಿ ಹಲವು ಸಿನಿಮಾ ನಿರ್ಮಾಣ ಮಾಡಿದ್ದಾರೆ.























