ಬೆಂಗಳೂರು: ಎಲ್ಪಿಜಿ ಸಿಲಿಂಡರ್ ಸಿಗದ ಹಿನ್ನೆಲೆಯಲ್ಲಿ ಅಕ್ರಮವಾಗಿ ಮರ ಕಡಿಯುವವರ ಸಂಖ್ಯೆ ಹೆಚ್ಚಾಗಿದ್ದು, ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಅಡುಗೆ ಅನಿಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿರುವ ಕಾರಣ ಸೌದೆಯ ಬಳಕೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಪರಿಸ್ಥಿತಿ ದುರುಪಯೋಗಪಡಿಸಿಕೊಂಡು ಕಾಡಿನ ಮರಗಳಿಗೆ ಕೊಡಲಿ ಏಟು ಬೀಳುವ ಭೀತಿ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಹೈ-ಅಲರ್ಟ್ ಘೋಷಿಸಿದೆ.
`ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲವೆಂದು ಮರಗಳನ್ನು ಅಕ್ರಮವಾಗಿ ಕಡಿದರೆ ಸಂಬಂಧಿತ ಪ್ರದೇಶದ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ’ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.
ಎಲ್ಪಿಜಿ ಕೊರತೆ ಹೆಚ್ಚಿರುವ ಕೆಲವು ಪ್ರದೇಶಗಳಲ್ಲಿ ಅಡುಗೆಗಾಗಿ ಸೌದೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಅರಣ್ಯ ಪ್ರದೇಶಗಳು, ಅರಣ್ಯ ಅಂಚುಗಳು ಹಾಗೂ ಸರ್ಕಾರದ ಭೂಮಿಗಳಲ್ಲಿ ಮರಗಳನ್ನು ಅಕ್ರಮವಾಗಿ ಕಡಿತ ತಡೆಯಲು ಕಟ್ಟುನಿಟ್ಟಿನ ನಿಗಾವಹಿಸಿ. ಎಲ್ಲ ಅರಣ್ಯ ವಲಯಗಳಲ್ಲಿ ಗಸ್ತು ಹೆಚ್ಚಿಸಿ. ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಕಣ್ಗಾವಲಿಡಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.






















