ಟೆಕ್ ಶೃಂಗಸಭೆ 2025:ಬೃಹತ್ ತಂತ್ರಜ್ಞಾನ ಉತ್ಸವಕ್ಕೆ ಸಜ್ಜಾದ ಬೆಂಗಳೂರು

0
33

ಬೆಂಗಳೂರು: ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ-ತಂತ್ರಜ್ಞಾನ ಇಲಾಖೆಯು ಆಯೋಜಿಸುವ “ಬೆಂಗಳೂರು ಟೆಕ್ ಶೃಂಗಸಭೆ (Bengaluru Tech Summit – BTS) 2025” ಈ ಬಾರಿ ನವೆಂಬರ್ 18ರಿಂದ 20ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ (BIEC) ನಲ್ಲಿ ನಡೆಯಲಿದೆ.

“FUTURISE” ಈ ವರ್ಷದ ಶೃಂಗಸಭೆಯು ‘ಭವಿಷ್ಯೋದಯ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಈ ಬೃಹತ್ ಸಮ್ಮೇಳನವು ತಂತ್ರಜ್ಞಾನ, ನವೀನತೆ ಮತ್ತು ಉದ್ಯಮದ ಭವಿಷ್ಯ ರೂಪಿಸುವ ವೇದಿಕೆಯಾಗಲಿದೆ. ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಶೃಂಗಸಭೆಗಳಲ್ಲಿ ಒಂದಾದ ಈ ಕಾರ್ಯಕ್ರಮವು ವಿಶ್ವದಾದ್ಯಂತದ ತಂತ್ರಜ್ಞಾನ ವಲಯದ ಗಣ್ಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಲಿದ್ದು, 60 ಕ್ಕೂ ಹೆಚ್ಚು ದೇಶಗಳಿಂದ 1 ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು, 600 ಕ್ಕೂ ಹೆಚ್ಚು ಭಾಷಣಕಾರರು ಮತ್ತು ನವೀನತೆಯ ತಜ್ಞರು ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಶೃಂಗಸಭೆ ಕುರಿತು ಹರ್ಷ ವ್ಯಕ್ತಪಡಿಸಿದ್ದು, “ತಂತ್ರಜ್ಞಾನದ ಭವಿಷ್ಯವನ್ನು ರೂಪಿಸಲು ಭಾರತದ ನಾವೀನ್ಯತೆ ರಾಜಧಾನಿಯಾದ ಬೆಂಗಳೂರಿನಲ್ಲಿ ನಮ್ಮೊಂದಿಗೆ ಸೇರಲು ನಾನು ಉದ್ಯಮದ ಮುಖಂಡರು, ಸಂಶೋಧಕರು, ಉದ್ಯಮಿಗಳು ಮತ್ತು ಹೂಡಿಕೆದಾರರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ” ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸಿಎಂ ಅವರು ಈ ಸಂದರ್ಭದಲ್ಲಿ ಅಧಿಕೃತ ನೋಂದಣಿಯ ಲಿಂಕ್‌ https://bengalurutechsummit.com ಹಂಚಿಕೊಂಡಿದ್ದು, ದೇಶ-ವಿದೇಶದ ತಂತ್ರಜ್ಞಾನ ಕ್ಷೇತ್ರದ ತಜ್ಞರು, ಸಂಸ್ಥೆಗಳು ಹಾಗೂ ಸ್ಟಾರ್ಟಪ್‌ಗಳು ಈ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಹ್ವಾನಿಸಿದ್ದಾರೆ.

ಪ್ರತಿ ವರ್ಷ ನಡೆಯುವ ಈ ಶೃಂಗಸಭೆ ಭಾರತದಲ್ಲಿ ತಂತ್ರಜ್ಞಾನ ಮತ್ತು ನವೀನತೆಯ ಮುಂದಿನ ದಿಕ್ಕನ್ನು ನಿರ್ಧರಿಸುವ ಪ್ರಮುಖ ವೇದಿಕೆಯಾಗಿದೆ. ಬೃಹತ್ ಟೆಕ್ ಕಂಪನಿಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಸ್ಟಾರ್ಟಪ್‌ಗಳು ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸಲು ಈ ವೇದಿಕೆಯನ್ನು ಬಳಸಿಕೊಳ್ಳಲಿವೆ.

Previous articleಅಡಿಕೆ ಬೆಳೆಗಾರರಿಗೆ ಸಿಹಿ-ಕಹಿ: ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ?
Next article“ಮದುವೆ ಆಗಬೇಕಿದ್ದರೆ ಮುಸ್ಲಿಂ ಆಗು”: ಬೆಂಗಳೂರಿನಲ್ಲಿ ಪ್ರೀತಿಯ ಹೆಸರಲ್ಲಿ ಯುವತಿಗೆ ವಂಚನೆ

LEAVE A REPLY

Please enter your comment!
Please enter your name here