Home Advertisement
Home ನಮ್ಮ ಜಿಲ್ಲೆ ಬೆಂಗಳೂರು METRO ದರ ಏರಿಕೆ ವಿರುದ್ಧ ಖಾಲಿ ಟ್ರಂಕ್‌ ಹಿಡಿದು ತೇಜಸ್ವಿ ಪ್ರತಿಭಟನೆ

METRO ದರ ಏರಿಕೆ ವಿರುದ್ಧ ಖಾಲಿ ಟ್ರಂಕ್‌ ಹಿಡಿದು ತೇಜಸ್ವಿ ಪ್ರತಿಭಟನೆ

0
70

ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರು ಆರ್‌ವಿ ರೋಡ್ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದ ಘಟನೆ ಇಂದು ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯ ಸರ್ಕಾರ ಏಕಾಏಕಿ ಮೆಟ್ರೋ ದರ ಹೆಚ್ಚಿಸಿರುವುದನ್ನು ಖಂಡಿಸಿ ಬಿಜೆಪಿ ವತಿಯಿಂದ ಮೌನ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ತೇಜಸ್ವಿ ಸೂರ್ಯ ಅವರು ಖಾಲಿ ಟ್ರಂಕ್‌ ಹಿಡಿದು ಬಂದು, ಅದನ್ನು ಸಾರ್ವಜನಿಕವಾಗಿ ತೆರೆದು “ರಾಜ್ಯ ಸರ್ಕಾರ ಖಾಲಿಯಾಗಿದೆ” ಎಂದು ವ್ಯಂಗ್ಯವಾಡಿದರು. ಇದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Metro ದರ ಏರಿಕೆಗೆ ತಾತ್ಕಾಲಿಕ ಬ್ರೇಕ್: ಬೆಂಗಳೂರಿಗರಿಗೆ ರಿಲೀಫ್‌

ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ, “ನಾನು ಪ್ರತಿಭಟನೆ ನಡೆಸುತ್ತಿಲ್ಲ. ಕೇವಲ ಖಾಲಿ ಟ್ರಂಕ್‌ ಹಿಡಿದು ನನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೇನೆ. ನನ್ನನ್ನು ಯಾರೂ ತಡೆಯಬಾರದು” ಎಂದು ಹೇಳಿದರು. ಪೊಲೀಸರು ತಡೆದಾಗ, “ಸಂಸತ್ತಿನ ಅಧಿವೇಶನ ನಡೆಯುತ್ತಿರುವ ವೇಳೆ ನನ್ನನ್ನು ವಶಕ್ಕೆ ಪಡೆಯುವ ಅಧಿಕಾರ ನಿಮಗೆ ಇಲ್ಲ. ಕಾನೂನು ತಿಳಿದುಕೊಂಡು ಕ್ರಮ ಕೈಗೊಳ್ಳಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದರೆ ಪೊಲೀಸರು ಪರಿಸ್ಥಿತಿ ತೀವ್ರವಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತೇಜಸ್ವಿ ಸೂರ್ಯ ಅವರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದುಕೊಂಡು ಹೋದರು. ಈ ವೇಳೆ ಟ್ರಂಕ್‌ ಮೇಲೆ ಅಂಟಿಸಿದ್ದ ‘ಕಾಂಗ್ರೆಸ್ ಸರ್ಕಾರ – ಖಾಲಿ ಟ್ರಂಕ್ ಸರ್ಕಾರ’ ಎಂಬ ಪೋಸ್ಟರ್‌ ಅನ್ನು ಪೊಲೀಸರು ತೆರವುಗೊಳಿಸಿದರು.

ಇದನ್ನೂ ಓದಿ: ಮೆಟ್ರೋ ದರ ಹೆಚ್ಚಳ: ಕೇಂದ್ರ ಸಚಿವ ವಿ. ಸೋಮಣ್ಣ ಆಕ್ರೋಶ

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಸಿ.ಕೆ. ರಾಮಮೂರ್ತಿ ಅವರು, “ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಿರುವುದು ಸಾಕಾಗುವುದಿಲ್ಲ. ದರ ಏರಿಕೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ಈಗಿರುವ ದರವನ್ನೂ ಕಡಿಮೆ ಮಾಡಬೇಕು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಜನರಿಗೆ ಸುಳ್ಳು ಹೇಳುತ್ತಿದೆ” ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಬಿಜೆಪಿ ಪ್ರತಿಭಟನೆ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಆರ್‌ವಿ ರೋಡ್ ಮೆಟ್ರೋ ನಿಲ್ದಾಣದ ಬಳಿ ಭದ್ರತೆ ಹೆಚ್ಚಿಸಿದ್ದರು. 20ಕ್ಕೂ ಹೆಚ್ಚು ಪೊಲೀಸರು, ಒಂದು ಕೆಎಸ್‌ಆರ್‌ಪಿ ತುಕಡಿ ಹಾಗೂ ಬಿಎಂಆರ್‌ಸಿಎಲ್‌ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇದರಿಂದ ಕೆಲಕಾಲ ನಿಲ್ದಾಣದ ಸುತ್ತಮುತ್ತ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಇದನ್ನೂ ಓದಿ: ‘ATM ಸರ್ಕಾರ’ದ ಭ್ರಷ್ಟರಿಗೆ ಕಾಂಗ್ರೆಸ್ ಹೈಕಮಾಂಡ್ ರಕ್ಷಣೆ: R ಅಶೋಕ್

ನಮ್ಮ ಮೆಟ್ರೋ ದರ ಏರಿಕೆ ಈಗಾಗಲೇ ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ದಿನನಿತ್ಯ ಮೆಟ್ರೋ ಅವಲಂಬಿಸುವ ಪ್ರಯಾಣಿಕರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ.

Previous articleಮೆಟ್ರೋ ದರ ಏರಿಕೆ: ರಾಜ್ಯ ಸರ್ಕಾರದಿಂದ ಜನರಿಗೆ ಅನ್ಯಾಯ
Next articleಕನ್ನಡ ಚಿತ್ರರಂಗಕ್ಕೆ ರೀ-ಎಂಟ್ರಿ ಕೊಟ್ಟ ‘ಯಾರೇ ನೀನು ಚೆಲುವೆ’ ನಟಿ