Home Advertisement
Home ನಮ್ಮ ಜಿಲ್ಲೆ ಬೆಂಗಳೂರು ದರೋಡೆ: ATMಗೆ ಹಣ ಹಾಕಲು ಹೋದವರು ನಗದು ಸಮೇತ ಪರಾರಿ

ದರೋಡೆ: ATMಗೆ ಹಣ ಹಾಕಲು ಹೋದವರು ನಗದು ಸಮೇತ ಪರಾರಿ

0
22

ಬೆಂಗಳೂರು: ಬೆಂಗಳೂರಿನಲ್ಲಿ ಕೆಲವೇ ತಿಂಗಳ ಅಂತರದಲ್ಲಿ ಮತ್ತೊಮ್ಮೆ ಭಾರಿ ಮೊತ್ತದ ಎಟಿಎಂ ಹಣ ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು, ನಗರದಲ್ಲಿ ಎಟಿಎಂ ಹಣ ಸಾಗಣೆ ವ್ಯವಸ್ಥೆಯ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳು ಮೂಡಿವೆ. ಎಸ್‌ಬಿಐ ಹಾಗೂ ಎಕ್ಸಿಸ್ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬುವ ಹೊಣೆ ಹೊತ್ತಿದ್ದ ಹಿಟಾಚಿ (HITACHI) ಕಂಪನಿ ಸಿಬ್ಬಂದಿಯಿಂದಲೇ ಎಟಿಎಂ ಹಣ ಸಾಗಿಸುತ್ತಿದ್ದ ವಾಹನಗಳನ್ನು ದರೋಡೆ ಮಾಡಿರುವುದು ಪ್ರಕರಣಕ್ಕೆ ಮತ್ತಷ್ಟು ಸಂಚಲನ ತಂದಿದೆ.

ಜನವರಿ 19ರಂದು ನಡೆದ ಈ ದರೋಡೆ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದ್ದು, ಎರಡು ತಂಡಗಳು ಸೇರಿ ಒಟ್ಟು 1 ಕೋಟಿ 37 ಲಕ್ಷ ರೂ. ಹಣವನ್ನು ಲೂಟಿ ಮಾಡಿರುವುದು ಪತ್ತೆಯಾಗಿದೆ. ಒಂದೇ ಕಂಪನಿಗೆ ಸೇರಿದ ಎರಡು ಎಟಿಎಂ ಹಣ ಸಾಗಣೆ ವಾಹನಗಳನ್ನು ಗುರಿಯಾಗಿಸಿಕೊಂಡಿರುವುದು, ಇದು ಪೂರ್ವಯೋಜಿತ ದರೋಡೆ ಎಂಬ ಅನುಮಾನವನ್ನು ಬಲಪಡಿಸಿದೆ.

ಇದನ್ನೂ ಓದಿ:  ಕೊನೆಗೂ ಸೆರೆಯಾದ ಚಿರತೆ: ಒಂದೂವರೆ ತಿಂಗಳ ಭಯಕ್ಕೆ ಮುಕ್ತಿ

ಮಾಹಿತಿ ಪ್ರಕಾರ, ಒಂದು ತಂಡವು 57 ಲಕ್ಷ ರೂ. ಹಣವನ್ನು ದೋಚಿದ್ದರೆ, ಮತ್ತೊಂದು ತಂಡ 80 ಲಕ್ಷ ರೂ. ಹಣವನ್ನು ದರೋಡೆ ಮಾಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರವೀಣ್, ಧನಶೇಖರ್, ರಾಮಕ್ಕ ಹಾಗೂ ಹರೀಶ್ ಕುಮಾರ್ ಎಂಬವರು ದರೋಡೆ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಆರೋಪಿಗಳ ನಿಕಟ ಸಂಪರ್ಕದಲ್ಲಿರುವವರ ಮೇಲೂ ನಿಗಾ ವಹಿಸಲಾಗಿದೆ. ಹಣ ಸಾಗಿಸುವ ಜವಾಬ್ದಾರಿ ಹೊತ್ತಿದ್ದ ಒಂದೇ ಕಂಪನಿಯ ಎರಡು ವಾಹನಗಳು ದರೋಡೆಗೆ ಒಳಗಾಗಿರುವುದರಿಂದ, ಇನ್ನಷ್ಟು ಮಂದಿ ಈ ಪ್ರಕರಣದಲ್ಲಿ ಶಾಮೀಲಾಗಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ:  ಜೀವ ಬೆದರಿಕೆ ಪ್ರಕರಣ: ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ಕೇರಳದಲ್ಲಿ ಅರೆಸ್ಟ್

ಗಮನಾರ್ಹವೆಂದರೆ, ಕಳೆದ ನವೆಂಬರ್ ತಿಂಗಳಲ್ಲಷ್ಟೇ ಬೆಂಗಳೂರಿನಲ್ಲಿ ಇಂಥದ್ದೇ ಮತ್ತೊಂದು ಭಾರೀ ದರೋಡೆ ಪ್ರಕರಣ ನಡೆದಿತ್ತು. ಡೈರಿ ಸರ್ಕಲ್ ಫ್ಲೈಓವರ್ ಮೇಲೆ ನಡುಮಧ್ಯಾಹ್ನ 1 ಗಂಟೆ ಸುಮಾರಿಗೆ ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನವನ್ನು ತಡೆಗಟ್ಟಿದ ಗ್ಯಾಂಗ್, 7 ಕೋಟಿ 11 ಲಕ್ಷ ರೂ. ಹಣವನ್ನು ದೋಚಿತ್ತು. ಆ ಸಂದರ್ಭದಲ್ಲಿ ಆರ್‌ಬಿಐ ಅಧಿಕಾರಿಗಳೆಂದು ನಟಿಸಿ ಬಂದಿದ್ದ ಗ್ಯಾಂಗ್ ಈ ಹೈ-ಪ್ರೊಫೈಲ್ ದರೋಡೆ ನಡೆಸಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ 9 ಆರೋಪಿಗಳನ್ನು ಬಂಧಿಸಿ, ದೋಚಿದ ಹಣವನ್ನು ವಶಪಡಿಸಿಕೊಂಡಿದ್ದಾರೆ.

ನಿರಂತರವಾಗಿ ಎಟಿಎಂ ಹಣ ದರೋಡೆ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು, ಹಣ ಸಾಗಣೆ ವ್ಯವಸ್ಥೆಯಲ್ಲಿನ ಒಳಸೂತ್ರ ಹಾಗೂ ಭದ್ರತಾ ಲೋಪಗಳ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.

Previous articleಕೊನೆಗೂ ಸೆರೆಯಾದ ಚಿರತೆ: ಒಂದೂವರೆ ತಿಂಗಳ ಭಯಕ್ಕೆ ಮುಕ್ತಿ