ಬೆಂಗಳೂರು: ಬೆಂಗಳೂರು ಮತ್ತೊಮ್ಮೆ ತನ್ನ ತಂತ್ರಜ್ಞಾನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ. ಇತ್ತೀಚೆಗೆ ಪ್ರಕಟವಾದ ವರದಿ ಪ್ರಕಾರ, ವಿಶ್ವದ ಪ್ರಮುಖ 10 ಟೆಕ್ ಹಬ್‌ಗಳ ಪಟ್ಟಿಯಲ್ಲಿ ಬೆಂಗಳೂರು 6ನೇ ಸ್ಥಾನ ಪಡೆದಿದೆ. ಸ್ಯಾನ್ ಫ್ರಾನ್ಸಿಸ್ಕೋ, ಲಂಡನ್, ನ್ಯೂಯಾರ್ಕ್ ಮತ್ತು ಬೀಜಿಂಗ್ ಮುಂತಾದ ಶಕ್ತಿಶಾಲಿ ನಗರಗಳ ಪೈಕಿ ಬೆಂಗಳೂರು ಸ್ಥಾನ ಪಡೆದಿರುವುದು ಕರ್ನಾಟಕ ಹಾಗೂ ಭಾರತದ ಹೆಮ್ಮೆ ಹೆಚ್ಚಿಸಿದೆ.
ಈ ಕುರಿತಂತೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರು ವಿಶ್ವದ ಟಾಪ್ 10 ಟೆಕ್ ಹಬ್‌ಗಳಲ್ಲಿ 6ನೇ ಸ್ಥಾನ ಗಳಿಸಿದೆ. ಸ್ಯಾನ್ ಫ್ರಾನ್ಸಿಸ್ಕೋ, ಲಂಡನ್, ನ್ಯೂಯಾರ್ಕ್ ಮತ್ತು ಬೀಜಿಂಗ್ ಮುಂತಾದ ಪ್ರಮುಖ ನಗರಗಳ ಪೈಕಿ ಬೆಂಗಳೂರು ಸ್ಥಾನ ಪಡೆದಿರುವುದು ನಾಡಿನ ಎಲ್ಲರಿಗೂ ಹೆಮ್ಮೆಯ ಸಂಗತಿ.
ಏಷ್ಯಾ-ಪೆಸಿಫಿಕ್ (APAC) ನಲ್ಲಿ ಪ್ರಥಮ ಸ್ಥಾನ: ಭಾರತ ಮತ್ತು ಅಮೆರಿಕಾ ಒಟ್ಟಾರೆ ಜಾಗತಿಕ ಟೆಕ್ ಪ್ರತಿಭೆಯ 36% ಶಕ್ತಿಯನ್ನು ಹೊಂದಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಏಷ್ಯಾ–ಪೆಸಿಫಿಕ್ ಪ್ರದೇಶದಲ್ಲಿ ಟೆಕ್ ಪ್ರತಿಭೆ ಆಕರ್ಷಣೆಯಲ್ಲಿ 1ನೇ ಸ್ಥಾನ ಗಳಿಸಿದೆ. ಇದು ಭಾರತೀಯ ಐಟಿ ಮತ್ತು ಸ್ಟಾರ್ಟ್ಅಪ್ ವಲಯಕ್ಕೆ ದೊಡ್ಡ ಸಾಧನೆಯಾಗಿದೆ.
ಸಾಧನೆಗೆ ಕಾರಣವಾದ ಅಂಶಗಳು
15 ಲಕ್ಷಕ್ಕೂ ಹೆಚ್ಚು ವೃತ್ತಿಪರರು : ವಿಶ್ವದ ಅತಿ ದೊಡ್ಡ ತಂತ್ರಜ್ಞಾನದ ಕಾರ್ಯಬಲದ ನಗರಗಳಲ್ಲಿ ಒಂದು.
ಚುರುಕು ಸ್ಟಾರ್ಟ್ಅಪ್ ಎಕೋಸಿಸ್ಟಂ: ಸಾವಿರಾರು ಸ್ಟಾರ್ಟ್ಅಪ್‌ಗಳು ಬೆಂಗಳೂರನ್ನು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡಿವೆ.
ಜಾಗತಿಕ R&D ಕೇಂದ್ರಗಳು: ಅನೇಕ ಅಂತರರಾಷ್ಟ್ರೀಯ ಕಂಪನಿಗಳ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಇಲ್ಲಿವೆ.
ಉದ್ಯಮ–ಸ್ನೇಹಿ ನೀತಿಗಳು: ಕರ್ನಾಟಕ ಸರ್ಕಾರದ ಪ್ರೋತ್ಸಾಹದಿಂದ ತಂತ್ರಜ್ಞಾನ ಮತ್ತು ಆವಿಷ್ಕಾರ ನಿರಂತರ ಬೆಳವಣಿಗೆ ಕಾಣುತ್ತಿದೆ.
ಹೆಮ್ಮೆಯ ಜೊತೆಗೆ ಹೊಣೆಗಾರಿಕೆಗೊ ಕೂಡ: ಬೆಂಗಳೂರು ಈಗಾಗಲೇ “India’s Tech Capital” ಎಂದು ಹೆಸರಾಗಿದ್ದು, ಈ ಹೊಸ ಜಾಗತಿಕ ಮಾನ್ಯತೆ ಆ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ಕರ್ನಾಟಕವನ್ನು ಜಾಗತಿಕ ಪೇಟೆಂಟ್‌ಗಳು, ಆವಿಷ್ಕಾರಗಳು ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರಿಸುತ್ತಿವೆ. ಉದ್ಯಮ–ಸ್ನೇಹಿ ನೀತಿಗಳ ಮೂಲಕ ಕರ್ನಾಟಕ ಸದಾ ಪ್ರತಿಭೆ, ಆವಿಷ್ಕಾರ ಮತ್ತು ಉದ್ಯಮಶೀಲತೆಯನ್ನು ಪೋಷಿಸಿದೆ. ಈ ಸಾಧನೆ ಬೆಂಗಳೂರಿನ ಟೆಕ್ ಕ್ಯಾಪಿಟಲ್ ಆಫ್ ಇಂಡಿಯಾ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ನಾವೀನ್ಯತೆ, ಉದ್ಯಮಶೀಲತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದನ್ನು ಇದು ದೃಢಪಡಿಸುತ್ತದೆ ಎಂದಿದ್ದಾರೆ.