ಮುಜರಾಯಿ ಇಲಾಖೆಯ 4,170 ದೇವಾಲಯಗಳು ನಾಪತ್ತೆ ಎಂದರೇನು?: ಸಚಿವ ರಾಮಲಿಂಗಾ ರೆಡ್ಡಿಗೆ ಮಾಜಿ ಸಚಿವ ಸಿ.ಟಿ. ರವಿ ಕಠಿಣ ಪ್ರಶ್ನೆ
ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯ ಅಧಿಕೃತ ದಾಖಲೆಗಳಲ್ಲಿರುವ 4,170 ದೇವಾಲಯಗಳು ನಾಪತ್ತೆಯಾಗಿವೆ ಎಂಬ ವರದಿ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ ಅವರು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಕಠಿಣ ಪ್ರಶ್ನೆಗಳನ್ನು ಎಸೆದಿದ್ದಾರೆ.
ಸರಣಿ ಪ್ರಶ್ನೆಗಳು: ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಿ.ಟಿ. ರವಿ, “ದಾಖಲೆಯಲ್ಲಿರುವ ದೇವಸ್ಥಾನಗಳು ವಾಸ್ತವವಾಗಿ ಎಲ್ಲಿಗೆ ಹೋದವು?” ಎಂದು ಪ್ರಶ್ನಿಸಿದ್ದಾರೆ? ದೇವಸ್ಥಾನಗಳು ನಾಪತ್ತೆಯಾಗಿದ್ದು ಹೇಗೆ? ಪೋಸ್ಟ್‌ನಲ್ಲಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿರುವ ಅವರು, ದೇವಾಲಯಗಳನ್ನು ಇಲ್ಲವಾಗಿಸಿದವರು ಯಾರು? ಮುಜರಾಯಿ ಇಲಾಖೆಯ ಅಧೀನದಲ್ಲಿದ್ದ ದೇವಸ್ಥಾನಗಳ ಆಸ್ತಿಗಳು ಏನಾದವು? ಒತ್ತುವರಿ ಆಗಿದ್ದರೆ, ಇಷ್ಟೊಂದು ಭಾರೀ ಪ್ರಮಾಣದ ಒತ್ತುವರಿ ಹೇಗೆ ನಡೆದಿದೆ? ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಇದನ್ನೂ ಓದಿ: ಲಕ್ಕುಂಡಿ ನಿಧಿ ಸರ್ಕಾರಕ್ಕೆ ನೀಡಿದ ಪ್ರಾಮಾಣಿಕತೆಗೆ ಗೌರವ: ಉಚಿತ ಶಿಕ್ಷಣ – ಕುಟುಂಬಕ್ಕೆ ಮನೆ–ಉದ್ಯೋಗದ ಭರವಸೆ
ಸಮಗ್ರ ತನಿಖೆಗೆ ಆಗ್ರಹ: ಇಷ್ಟು ದೊಡ್ಡ ಪ್ರಮಾಣದಲ್ಲಿ ದೇವಾಲಯಗಳು ದಾಖಲೆಗಳಿಂದ ನಾಪತ್ತೆಯಾಗಿರುವುದು ಸಾಮಾನ್ಯ ವಿಷಯವಲ್ಲ ಎಂದು ಹೇಳಿರುವ ಸಿ.ಟಿ. ರವಿ, “ಈ ಕುರಿತು ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಯಬೇಕು. ಸರ್ಕಾರ ಜವಾಬ್ದಾರಿಯುತವಾಗಿ ಜನತೆಗೆ ಉತ್ತರ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಧಾರ್ಮಿಕ ಶ್ರದ್ಧೆಯ ವಿಷಯದಲ್ಲಿ ಸರ್ಕಾರ ಗಂಭೀರವಾಗಿರಲಿ: ಮುಂದುವರಿದು ಮಾತನಾಡಿದ ಅವರು, “ನಮ್ಮ ಧಾರ್ಮಿಕ ಶ್ರದ್ಧೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಟದ ವಸ್ತುವಲ್ಲ. ದೇವಾಲಯಗಳು ಮತ್ತು ಅವುಗಳ ಆಸ್ತಿಗಳ ವಿಚಾರದಲ್ಲಿ ಸರ್ಕಾರ ಅತ್ಯಂತ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು” ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ತೇಜಸ್ವಿ – ವಿಸ್ಮಯ : ಲಾಲ್‌ಬಾಗ್‌ನಲ್ಲಿ ಜ.14ರಿಂದ ಫಲಪುಷ್ಪ ಪ್ರದರ್ಶನ
ಸರ್ಕಾರದ ಪ್ರತಿಕ್ರಿಯೆ ನಿರೀಕ್ಷೆ: ರಾಜ್ಯ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ದೇವಾಲಯಗಳ ಸಂಖ್ಯೆ, ಅವುಗಳ ಆಸ್ತಿ, ಆದಾಯ ಮತ್ತು ನಿರ್ವಹಣೆ ಕುರಿತಾಗಿ ಈಗಾಗಲೇ ಹಲವು ಬಾರಿ ಚರ್ಚೆಗಳು ನಡೆದಿವೆ. ಆದರೆ 4,170 ದೇವಸ್ಥಾನಗಳು ದಾಖಲೆಗಳಲ್ಲಿ ಇದ್ದು ವಾಸ್ತವದಲ್ಲಿ ಪತ್ತೆಯಾಗದಿರುವುದು ಗಂಭೀರ ವಿಷಯವಾಗಿದ್ದು, ಈ ಕುರಿತು ಸರ್ಕಾರ ಯಾವ ರೀತಿಯ ಸ್ಪಷ್ಟನೆ ನೀಡಲಿದೆ ಎಂಬುದನ್ನು ರಾಜ್ಯ ಜನತೆ ಕಾತರದಿಂದ ಕಾಯುತ್ತಿದೆ.






















