Home Advertisement
Home ನಮ್ಮ ಜಿಲ್ಲೆ ಬೆಂಗಳೂರು ವಿಧಾನಸೌಧದಲ್ಲೇ 300 ಗ್ರಾಂ ಚಿನ್ನಾಭರಣ, 1.5 ಲಕ್ಷ ನಗದು ಕಳವು

ವಿಧಾನಸೌಧದಲ್ಲೇ 300 ಗ್ರಾಂ ಚಿನ್ನಾಭರಣ, 1.5 ಲಕ್ಷ ನಗದು ಕಳವು

0
22

ಬೆಂಗಳೂರು: ಅತಿಭದ್ರತೆಯ ಮತ್ತು ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧದಲ್ಲಿರುವ ನಗರಾಭಿವೃದ್ಧಿ ಸಚಿವ ಸುರೇಶ್ ಅವರ ಕಚೇರಿಯಲ್ಲೇ ಕಳ್ಳತನ ನಡೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಕೆಲಸದ ನಿಮಿತ್ತ ಸಚಿವರ ಕಚೇರಿಗೆ ನವೀನ್ ಎಂಬವರು ಚಿನ್ನಾಭರಣ ಹಾಗೂ ಹಣವಿದ್ದ ಕೈ ಚೀಲ (ಲ್ಯಾಪ್‌ಟಾಪ್ ಬ್ಯಾಗ್)ದೊಂದಿಗೆ ಬಂದಿದ್ದರು. ಕೆಲಸ ಮುಗಿಸಿ ತೆರಳುವಾಗ ಬ್ಯಾಗ್ ಮರೆತು ಹೋಗಿದ್ದರು. ಮಾರನೇ ದಿನ ಬಂದು ನೋಡಿದಾಗ ಕೈ ಚೀಲ ನಾಪತ್ತೆಯಾಗಿತ್ತು. 300 ಗ್ರಾಂ ಚಿನ್ನಾಭರಣ ಹಾಗೂ 1.5 ಲಕ್ಷ ರೂ. ಹಣವಿದ್ದ ಬ್ಯಾಗ್ ಕಳ್ಳತನವಾದ ಬೆನ್ನಲ್ಲೇ ಗಾಬರಿಗೊಂಡ ನವೀನ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸಚಿವರ ಕಚೇರಿಯಲ್ಲೇ ಕಳ್ಳತನ ನಡೆದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ವಿಧಾನಸೌಧದ ಆಡಳಿತಾತ್ಮಕ ಮತ್ತು ಭದ್ರತಾ ವಿಷಯಗಳಿಗೆ ಸಂಬಂಧಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಯ (ಡಿಪಿಎಆರ್) ಡಿ ಗ್ರೂಪ್ ನೌಕರನ ಪಾತ್ರ ಇರುವುದು ಗೊತ್ತಾಗಿದೆ. ನೌಕರ ಬ್ಯಾಗ್ ಹಿಡಿದುಕೊಂಡು ಹೋಗುವುದು ಸಿಸಿಟಿವಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಭದ್ರತಾ ವ್ಯವಸ್ಥೆ ವೈಫಲ್ಯವೇ?: ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದರೂ ಈ ಸಂಬಂಧ ಹಲವು ಪ್ರಶ್ನೆಗಳು ಎದ್ದಿದೆ. ಪರಿಶೀಲನೆ ನಡೆಸದೇ ಚಿನ್ನಾಭರಣ, ನಗದನ್ನು ವಿಧಾನಸೌಧದ ಒಳಗಡೆ ಭದ್ರತಾ ಸಿಬ್ಬಂದಿ ಬಿಟ್ಟಿದ್ದು ಯಾಕೆ? ಮೆಟಲ್ ಡಿಟೆಕ್ಟರ್, ತಪಾಸಣೆ ಕೇವಲ ನೆಪಕ್ಕೆ ಮಾತ್ರ ಇದೆಯೇ? ಸಚಿವರ ಕಚೇರಿಯಲ್ಲಿನ ಕಳ್ಳತನ ಭದ್ರತಾ ವೈಫಲ್ಯದ ಪ್ರತೀಕವೇ ಎಂಬ ಗಂಭೀರ ಪ್ರಶ್ನೆ ಎದ್ದಿದೆ.

Previous articleಭಾರತ – ಪಾಕಿಸ್ತಾನ ಪಂದ್ಯ ಕನ್ಫರ್ಮ್‌: ನಷ್ಟದಿಂದ ಐಸಿಸಿ ಪಾರು