ಬಳ್ಳಾರಿ: ಕೇರಳದ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬಂಗಾರ ನಾಪತ್ತೆಯಾಗಿರುವ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ರೊದ್ದಂ ಜ್ಯೂವೆಲರಿ ಮಾಲೀಕ ಗೋವರ್ಧನನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೇರಳ ಎಸ್‌ಐಟಿ (Special Investigation Team) ಅಧಿಕಾರಿಗಳು ವಿಚಾರಣೆಗಾಗಿ ಕರೆಸಿ, ಕೇರಳದಲ್ಲೇ ಗೋವರ್ಧನನನ್ನು ಅಧಿಕೃತವಾಗಿ ಬಂಧಿಸಿರುವುದಾಗಿ ತಿಳಿದುಬಂದಿದೆ.
ಈ ಪ್ರಕರಣವು ದೇವಸ್ಥಾನದ ಬಾಗಿಲು ಬಳಿಯಿರುವ ದ್ವಾರಪಾಲಕ ವಿಗ್ರಹಗಳಿಗೆ ಅಳವಡಿಸಲಾಗಿದ್ದ ಚಿನ್ನದ ಕವಚಕ್ಕೆ ಸಂಬಂಧಿಸಿದೆ. 2019ರಲ್ಲಿ ಚಿನ್ನದ ಮರುಲೇಪನ (re-coating) ಉದ್ದೇಶದಿಂದ ಕವಚಗಳನ್ನು ತೆರವುಗೊಳಿಸಿದ ವೇಳೆ ಸುಮಾರು ನಾಲ್ಕೂವರೆ ಕೆಜಿ ಬಂಗಾರ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣದ ತನಿಖೆ ಹಲವು ವರ್ಷಗಳಿಂದ ನಡೆಯುತ್ತಿದ್ದು, ಇದೀಗ ಮಹತ್ವದ ಬೆಳವಣಿಗೆಯಾಗಿ ಬಳ್ಳಾರಿ ಮೂಲದ ಚಿನ್ನದ ವ್ಯಾಪಾರಿಯ ಬಂಧನ ನಡೆದಿದೆ.
ಇದನ್ನೂ ಓದಿ: “5 ವರ್ಷ ನಾನೇ ಬಾಸ್..!” ಕುರ್ಚಿ ಕದನದ ಗೊಂದಲಕ್ಕೆ ಸಿದ್ದರಾಮಯ್ಯ ಫುಲ್ ಸ್ಟಾಪ್
ಗೋವರ್ಧನನು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಚಿನ್ನದ ಲೇಪಿತ ದ್ವಾರಬಾಗಿಲು (gold-plated door) ನಿರ್ಮಾಣ ಕಾರ್ಯವನ್ನು ಕೈಗೊಂಡಿದ್ದ ಎನ್ನಲಾಗಿದೆ. ದೇವಸ್ಥಾನದ ಅರ್ಚಕ ಉನ್ನಿಕೃಷ್ಣನ್ ಅವರ ಸೂಚನೆ ಮೇರೆಗೆ ಚಿನ್ನದ ಲೇಪಿತ ಡೋರ್ ನಿರ್ಮಿಸಲಾಗಿತ್ತು ಎಂದು ತನಿಖಾ ಮೂಲಗಳು ತಿಳಿಸಿವೆ. ಆದರೆ ಡೋರ್ ನಿರ್ಮಾಣಕ್ಕೂ ಮೊದಲು ಇದ್ದ ದ್ವಾರಪಾಲಕ ವಿಗ್ರಹಗಳ ಚಿನ್ನದ ಕವಚವೇ ನಾಪತ್ತೆಯಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಈ ಸಂಬಂಧ ಕಳೆದ ತಿಂಗಳು ಕೇರಳ ಎಸ್‌ಐಟಿ ಅಧಿಕಾರಿಗಳು ಬಳ್ಳಾರಿಯ ರೊದ್ದಂ ಜ್ಯೂವೆಲರಿ ಅಂಗಡಿ ಹಾಗೂ ಗೋವರ್ಧನನ ನಿವಾಸದಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಆಗಲೇ ಗೋವರ್ಧನನನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. “ಯಾವಾಗ ಕರೆದರೂ ವಿಚಾರಣೆಗೆ ಹಾಜರಾಗುತ್ತೇನೆ” ಎಂದು ಗೋವರ್ಧನ ಹೇಳಿದ್ದರೂ, ಕಳೆದ ಮೂರು ದಿನಗಳ ಹಿಂದೆ ಕೇರಳಕ್ಕೆ ತೆರಳಿ ವಿಚಾರಣೆಗೆ ಒಳಗಾದ ನಂತರ ಇದೀಗ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: 600 ಬಿಲಿಯನ್ ಡಾಲರ್ ಸಂಪತ್ತು: ಜಗತ್ತಿಗೆ ಶ್ರೀಮಂತ ಎಲಾನ್ ಮಸ್ಕ್
ಆದರೆ ದ್ವಾರಪಾಲಕರ ವಿಗ್ರಹದ ಚಿನ್ನಕ್ಕೂ ತಾವು ನಿರ್ಮಿಸಿದ ಚಿನ್ನದ ಲೇಪಿತ ಡೋರ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಗೋವರ್ಧನ ಈ ಹಿಂದೆಯೇ ಸ್ಪಷ್ಟಪಡಿಸಿದ್ದರು. ತನಿಖಾಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ದಾಖಲೆಗಳು, ಚಿನ್ನದ ಪ್ರಮಾಣ, ಲೇಪನ ಪ್ರಕ್ರಿಯೆ ಹಾಗೂ ಸಾಗಣೆ ವಿವರಗಳ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸುತ್ತಿದ್ದಾರೆ.
ಪ್ರಕರಣವು ಧಾರ್ಮಿಕ ಸ್ಥಳದ ಪವಿತ್ರ ಆಸ್ತಿಗೆ ಸಂಬಂಧಿಸಿದ್ದರಿಂದ, ಕೇರಳ ಸೇರಿದಂತೆ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳು ಅಥವಾ ಬಹಿರಂಗಗಳು ನಡೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.























