ಬೆಳಗಾವಿ: `ಸಂಯುಕ್ತ ಕರ್ನಾಟಕ’ದಲ್ಲಿ ಗಣೇಶೋತ್ಸವ ಹಿನ್ನೆಲೆಯಲ್ಲಿ ಪ್ರಕಟಗೊಂಡ ಎರಡು ವರದಿ ಮುಂದಿಟ್ಟುಕೊಂಡ ನಗರ ಸೇವಕರು ಪಕ್ಷಬೇಧ ಮರೆತು ಜಿಲ್ಲಾಡಳಿತದ ವಿರುದ್ಧ ಗರಂ ಆದ ಪ್ರಸಂಗ ಇಂದಿಲ್ಲಿ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಆ. 22ರಂದು ಪ್ರಕಟಗೊಂಡ ಲಕ್ಷ ಜನಕ್ಕೆ ಪಾಲಿಕೆಯಿಂದ ಮಹಾಪ್ರಸಾದ, ಡಿಸಿ ಹೇಳಿಕೆ ಚರ್ಚೆಗೆ ಗ್ರಾಸ' ಮತ್ತು 25ರಂದು ಪ್ರಕಟಗೊಂಡ
ಇದ್ದೂ ಇಲ್ಲದಂತಾದ ಮಹಾನಗರ ಪಾಲಿಕೆ’ ಎನ್ನುವ ವರದಿ ಕೈಗೆತ್ತಿಗೊಂಡ ನಗರ ಸೇವಕರು ಜಿಲ್ಲಾಧಿಕಾರಿ ವಿರುದ್ಧ ವಾಗ್ದಾಳಿ ನಡೆಸಿದರು.
ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ಹಿರಿಯ ಸದಸ್ಯ ರವಿ ಧೋತ್ರೆ, ಸರ್ಕಾರಿ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಸೇರಿದಂತೆ ಮುಂತಾದವರು ಡಿಸಿ ವಿರುದ್ಧವೇ ವಾಗ್ದಾಳಿ ನಡೆಸಿದರು. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಸಚಿವರು, ಕಾರ್ಯದರ್ಶಿ, ರಾಜ್ಯಪಾಲರಿಗೆ ಡಿಸಿ ನಡೆ ಬಗ್ಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು.
ಮೊದಲ ಬಾರಿ ಚರ್ಚೆ: ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಜಿಲ್ಲಾಧಿಕಾರಿ ವಿರುದ್ಧ ನಗರ ಸೇವಕರು ಬಹಿರಂಗವಾಗಿ ತಮ್ಮ ಆಕ್ರೋಶ ಹೊರಹಾಕಿದರು. ಸಭೆಯಲ್ಲಿ ಗಣೇಶೋತ್ಸವ ಪೂರ್ವ ಸಿದ್ಧತೆ ವಿಷಯ ಬಂದಾಗ ಜಿಲ್ಲಾಧಿಕಾರಿಗಳ ಮಹಾಪ್ರಸಾದ ಹೇಳಿಕೆ ಮತ್ತು ಗಣೇಶೋತ್ಸವ ಮಂಡಳಗಳ ಸಭೆಗೆ ಮೇಯರ್ ಸೇರಿದಂತೆ ಯಾರನ್ನೂ ಆಹ್ವಾನಿಸದೇ ಇರುವ ಬಗ್ಗೆ ಸದಸ್ಯರು ಪಕ್ಷಬೇಧ ಮರೆತು ಚರ್ಚೆ ನಡೆಸಿದರು.
ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ರವಿ ಧೋತ್ರೆ, ಸರ್ಕಾರಿ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಮುಂತಾದವರು ಜಿಲ್ಲಾಧಿಕಾರಿಗಳ ನಡೆಯ ಬಗ್ಗೆ ಖಾರವಾಗಿ ಪ್ರಶ್ನಿಸಿದರು. ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಅಧಿಕಾರವಿದ್ದಾಗ ಜಿಲ್ಲಾಧಿಕಾರಿ ಶಿಷ್ಟಾಚಾರ ಉಲ್ಲಂಘಿಸಿ ಈ ರೀತಿ ನಡೆದುಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ ಎಂದ ಹನುಮಂತ ಕೊಂಗಾಲಿ ಗರಂ ಆದರು. ಲಕ್ಷಾಂತರ ಜನರಿಗೆ ಪಾಲಿಕೆಯಿಂದ ಮಹಾಪ್ರಸಾದ ಕೊಡಲಾಗುತ್ತದೆ ಎಂದು ಯಾರ ಅನುಮತಿ ಮೇರೆಗೆ ಡಿಸಿ ಹೇಳಿದರೆಂದು ಪ್ರಶ್ನಿಸಿದರು.
ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಇದ್ದಾಗ ಮೇಯರ್, ಉಪಮೇಯರ್ ಆಯುಕ್ತರ ಗಮನಕ್ಕೂ ತಾರದೇ ಈ ರೀತಿಯ ಹೇಳಿಕೆ ನೀಡಿರುವುದು ಶಿಷ್ಟಾಚಾರ ಉಲ್ಲಂಘನೆ ಎಂದು ಜರಿದರು. ಈ ರೀತಿ ಹೇಳಿಕೆಯಿಂದ ಗೊಂದಲ ಸೃಷ್ಟಿಸಿರುವ ಡಿಸಿಯವರು ಸಾರ್ವಜನಿಕವಾಗಿ ಕ್ಷಮೆ ಕೇಳುವುದಲ್ಲದೇ ಪಾಲಿಕೆಗೆ ಪತ್ರದ ಮೂಲಕ ಸ್ಪಷ್ಟನೆ ಕೊಡಬೇಕಿತ್ತು. ಆದರೆ ಅವರು ಟ್ವಿಟ್ಟರ್ ಮೂಲಕ ಸ್ಪಷ್ಟನೆ ಕೊಟ್ಟು ಸುಮ್ಮನಾದರು ಎಂದು ಕೊಂಗಾಲಿ ಆಕ್ರೋಶ ಹೊರಹಾಕಿದರು.
ಡಿಸಿಯವರ ಹೇಳಿಕೆ ಧರ್ಮ ಸೂಕ್ಷ್ಮತೆ ತರುತ್ತದೆ. ಅಧಿಕಾರಿಗಳಾದವರು ಸರ್ಕಾರದ ಕೈಗೊಂಬೆಯಾಗಿ ಬೇಕಾಬಿಟ್ಟಿ ಕೆಲಸ ಮಾಡಿದರೆ ಕೋರ್ಟ ಮೆಟ್ಟಿಲು ಹತ್ತಬೇಕಾಗುತ್ತದೆ ಎಂದು ಎಚ್ಚರಿಸಿದರು. ಇಲ್ಲಿ ಕೊಂಗಾಲಿಯವರ ಡಿಸಿ ಕ್ಷಮೆ ಬಗ್ಗೆ ಸರ್ಕಾರಿ ನಾಮನಿರ್ದೇಶಿತ ಸದಸ್ಯರು ಅಪಸ್ವರ ಎತ್ತಿದರು, ಅಂತಹ ಮಾತು ಬೇಡ ಎಂದರು. ಆದರೆ ಇದಕ್ಕೆ ಉತ್ತರಿಸಿದ ಕೊಂಗಾಲಿ, ತಪ್ಪು ಯಾರೇ ಮಾಡಿದರೂ ಅವರು ಕಾನೂನಿಗಿಂತ ದೊಡ್ಡವರಲ್ಲ. ಡಿಸಿಯವರು ನನ್ನನ್ನೇ ಕ್ಷಮೆ ಕೇಳಲಿ ಎಂದು ಹೇಳಿಲ್ಲ. ಸಾರ್ವಜನಿಕರ ಕ್ಷಮೆ ಕೇಳಬೇಕು ಎಂದ ಹೇಳಿದ್ದೇನೆ ಎಂದು ಹೇಳಿದರು.
ವಿಪ ಸದಸ್ಯ ಸಾಬಣ್ಣ ತಳವಾರ ಮಾತನಾಡಿ, ಬೆಳಗಾವಿ ಗಣೇಶೋತ್ಸವ ನೋಡಲು ಲಕ್ಷಾಂತರ ಜನ ಬರುತ್ತಾರೆ. ಬಂದವರೆಲ್ಲರಿಗೂ ಮಹಾಪ್ರಸಾದ ಕೊಡಲು ಹೇಗೆ ಸಾಧ್ಯ. ಇಲ್ಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಒಂದೇ ಒಂದು ರೂ. ವೆಚ್ಚ ಮಾಡಿದರೂ ಅದಕ್ಕೆ ಆಡಿಟ್ ಆಕ್ಷೇಪಣೆ ಬರುತ್ತದೆ. ಮೇಲಾಗಿ ಪಾಲಿಕೆ ಸ್ವಾಯತ್ತ ಸಂಸ್ಥೆ, ಇದರ ಮೇಲೆ ಡಿಸಿ ಹಿಡಿತ ಸಾಧಿಸಲು ಬರಲ್ಲ ಎಂದು ಹೇಳಿದರು.
ಕೆಲಸ ಪಾಲಿಕೆಯದ್ದು: ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯಲ್ಲಿ ಪ್ರಸ್ತಾಪಿತಗೊಂಡ ಎಲ್ಲ ಅಂಶಗಳನ್ನು ವಿವರಿಸಿದ ಸದಸ್ಯ ರಮೇಶ ಸೊಂಟಕ್ಕಿ ಹಬ್ಬಗಳಲ್ಲಿ ಬೆಳಗಾವಿ ನೋಡುವ ಜವಾಬ್ದಾರಿ ಪಾಲಿಕೆ ಮೇಲಿರುತ್ತದೆ. ಆದರೆ ಗಣೇಶೋತ್ಸವ ಸಂದರ್ಭದಲ್ಲಿ ಜಿಲ್ಲಾಡಳಿತ ಪಾಲಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಈ ಹಿಂದೆ ಗಣೇಶೋತ್ಸವ ಮಂಡಳಗಳ ಸಭೆ ಪಾಲಿಕೆ ಮೇಯರ್ ಅಧ್ಯಕ್ಷತೆಯಲ್ಲಿ ಆಗುತ್ತಿತ್ತು, ಅದಕ್ಕೆ ಉಪಮೇಯರ್, ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರನ್ನು ಆಮಂತ್ರಿಸುವ ಕೆಲಸ ಆಗುತ್ತಿತ್ತು. ಈಗ ಆ ಪ್ರತೀತಿ ಇಲ್ಲದಾಗಿರುವುದು ಖೇದಕರ ಎಂದರು.
ರೌಂಡ್ ಯಾಕಿಲ್ಲ…?: ಪ್ರತಿಬಾರಿ ಗಣೇಶೋತ್ಸವ ಬರುವುದಕ್ಕಿಂತ ಮುಂಚಿತವಾಗಿ ಪಾಲಿಕೆ ಅಧಿಕಾರಿಗಳು ಮೇಯರ್, ಉಪಮೇಯರ್ರನ್ನು ಕರೆದುಕೊಂಡು ಮೆರವಣಿಗೆ ಮಾರ್ಗ ಪರಿಶೀಲನೆ ನಡೆಸುತ್ತಿದ್ದರು. ಈ ಬಾರಿ ಅಧಿಕಾರಿಗಳು ಅದನ್ನೂ ಮಾಡಿಲ್ಲ ಎಂದು ಹಿರಿಯ ಸದಸ್ಯ ರವಿ ಧೋತ್ರೆ ಹೇಳಿದರು. ಆದರೆ ಯಾರೋ ಒಬ್ಬರನ್ನು ಪೊಲೀಸರು ಎಸ್ಕಾರ್ಟದಲ್ಲಿ ಕರೆದುಕೊಂಡು ಹೋದಂತೆ ಮಾರ್ಗಪರಿಶೀಲನೆಗೆ ಹೋಗುತ್ತಿರುವ ಉದ್ದೇಶವಾದರೂ ಏನು ಎಂದು ಧೋತ್ರೆ ಪ್ರಶ್ನೆ ಮಾಡಿದರು.
ಹೆಸರು ಬಹಳ ಬರ್ತಿದೆ..!: ಅಧಿಕಾರಿಗಳು ನಿಮ್ಮನ್ನು ಸಭೆಗೆ ಕರೆದಿಲ್ಲವೇ ಎಂದು ಸದಸ್ಯರು ಪ್ರಶ್ನೆ ಮಾಡಿದರು, ಅದಕ್ಕೆ ವ್ಯಂಗ್ಯವಾದ ರೀತಿಯಲ್ಲೇ ಉತ್ತರಿಸಿದ ಮೇಯರ್ ಮಂಗೇಶ ಪವಾರ್, ನನ್ನ ಹೆಸರು ಬಹುತೇಕ ಮಾಧ್ಯಮದಲ್ಲಿ ಬಹಳ ಬರ್ತಿದೆ. ರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಿಂಚುತ್ತಿದೆ, ಇನ್ನೂ ಹೆಸರು ಬಹಳ ಬರಬಾರದು ಅಂತ ಅಧಿಕಾರಿಗಳು ಕರೆದಿರಕ್ಕಿಲ್ಲ ಎಂದು ಹೇಳಿದರು.
ಆಯುಕ್ತರ ಸ್ಪಷ್ಟನೆ: ಡಿಸಿಯವರ ಮಹಾಪ್ರಸಾದ ಹೇಳಿಕೆ ಮತ್ತು ಗಣೇಶೋತ್ಸವ ಸಭೆಗೆ ಮೇಯರ್, ಉಪಮೇಯರ್ ಅವರನ್ನು ಆಮಂತ್ರಿಸದೇ ಇರುವ ಬಗ್ಗೆ ಕೊನೆಗೆ ಮೌನ ಮುರಿದರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿಯೇ ಗಣೇಶೋತ್ಸವ ಮಂಡಳಗಳ ಸಭೆ ನಿಗದಿ ಮಾಡಲಾಗಿದೆ. ಅದಕ್ಕೆ ಮಂಡಳಗಳಿಗೆ ಕರೆತರಲು ಡಿಸಿ ಕಚೇರಿಯಿಂದ ಪತ್ರ ಬಂದಿತ್ತು. ಅದರ ಪ್ರಕಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮೇಯರ ಅಧ್ಯಕ್ಷತೆಯಲ್ಲಿಯೇ ಸಭೆ ನಡೆಸಲಾಗುತ್ತದೆ. ನಂತರ ಅದರ ಬಗ್ಗೆ ಡಿಸಿಯವರು ಕರೆದ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಆಯುಕ್ತೆ ಶುಭ ಬಿ ಹೇಳಿದರು.