ಬೆಳಗಾವಿ: ಮುರಗೋಡ ಸಮೀಪದ ಮುರಗೋಡ–ಬೈಲಹೊಂಗಲ ಮುಖ್ಯ ರಸ್ತೆಯಲ್ಲಿ ಟಿಪ್ಪರ್ ಹಾಗೂ ಮೋಟಾರ್‌ಸೈಕಲ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜನವರಿ 12ರಂದು ನಡೆದಿದೆ.
ಅರಳಿಕಟ್ಟಿ ಗ್ರಾಮದ ನಿವಾಸಿ ಸಿದ್ಧಾರೂಢ ಉಪ್ಪಾರ (30) ಎಂಬವರು ತಮ್ಮ ಹಿರೋ ಎಕ್ಸ್‌ಟ್ರೀಮ್ ಮೋಟಾರ್‌ಸೈಕಲ್‌ನಲ್ಲಿ ಬೈಲಹೊಂಗಲ ಕಡೆಯಿಂದ ಮುರಗೋಡದತ್ತ ಸಾಗುತ್ತಿದ್ದ ವೇಳೆ, ಮುರಗೋಡದಿಂದ ಬೈಲಹೊಂಗಲ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಟಿಪ್ಪರ್ ಲಾರಿ ವಿರುದ್ಧ ದಿಕ್ಕಿಗೆ ಹೋಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಡಿಕ್ಕಿಯ ಪರಿಣಾಮ ಸಿದ್ಧಾರೂಢ ಅವರಿಗೆ ತಲೆಗೆ ಗಂಭೀರ ಗಾಯಗಳಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಬಹಿಷ್ಕಾರಕ್ಕೆ ಕಡಿವಾಣ: ರಾಜ್ಯಪಾಲರ ಅಂಕಿತ
ಮೃತನ ತಂದೆ ಮಹಾದೇವ ಉಪ್ಪಾರ (63) ಅವರು ಮುರಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಟಿಪ್ಪರ್ ಚಾಲಕ ಮಲ್ಲಿಕಾರ್ಜುನ ಕೆಂಪಣ್ಣ ಹಳ್ಳಿ (ಬೈಲಹೊಂಗಲ ನಿವಾಸಿ) ಅವರ ನಿರ್ಲಕ್ಷ್ಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆಯ ಮಾಹಿತಿ ಪಡೆದ ಮುರಗೋಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಟಿಪ್ಪರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.






















