Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಸಾಮಾನ್ಯರ ಬ್ಯಾಂಕ್ ಖಾತೆಗಳೇ ಅಪರಾಧಿಗಳ ಆಯುಧ: ಬೆಳಗಾವಿ ಪೊಲೀಸರ ಭರ್ಜರಿ ಬೇಟೆ

ಸಾಮಾನ್ಯರ ಬ್ಯಾಂಕ್ ಖಾತೆಗಳೇ ಅಪರಾಧಿಗಳ ಆಯುಧ: ಬೆಳಗಾವಿ ಪೊಲೀಸರ ಭರ್ಜರಿ ಬೇಟೆ

0
116

ಬೆಳಗಾವಿ: ‘ವರ್ಕ್ ಫ್ರಾಂ ಹೋಮ್’ ಕೆಲಸ ಕೊಡಿಸುತ್ತೇವೆ, ಸರ್ಕಾರದ ಸಾಲ ಮಾಡಿಸಿಕೊಡುತ್ತೇವೆ ಎಂದು ನಂಬಿಸಿ ಅಮಾಯಕ ಜನರ ಹೆಸರಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಸಿ, ಆ ಖಾತೆಗಳನ್ನೇ ಸೈಬರ್ ವಂಚನೆಗೆ ಬಳಸಿದ ಭಾರೀ ಜಾಲವನ್ನು ಬೆಳಗಾವಿ ನಗರ ಸೈಬರ್ ಅಪರಾಧ ಪೊಲೀಸರು ಭೇದಿಸಿದ್ದಾರೆ.

ಈ ಪ್ರಕರಣದಲ್ಲಿ ಇಬ್ಬರು ಪ್ರಮುಖ ಆರೋಪಿತರನ್ನು ಬಂಧಿಸಲಾಗಿದ್ದು, ಸುಮಾರು 72 ಬ್ಯಾಂಕ್ ಖಾತೆಗಳ ಮೂಲಕ ಸಂಘಟಿತ ಸೈಬರ್ ವಂಚನೆ ನಡೆದಿದೆ ಎಂಬ ಅಚ್ಚರಿಯ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ.

ನಗರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ 22 ಫೆಬ್ರವರಿ 2026ರಂದು ದಾಖಲಾಗಿದ್ದ ಪ್ರಕರಣದ ತನಿಖೆ ವೇಳೆ ಈ ಜಾಲ ಬೆಳಕಿಗೆ ಬಂದಿತು. ಪಿರ್ಯಾದಿದಾರ ಕುಮಾರಿ ಮಾನಸಿ ಚವ್ಹಾಣ ಅವರಿಗೆ ಪರಿಚಿತಳಾದ ಮೇಘಾ ಮಾರಡೊಳಕರ, ಪಿರ್ಯಾದಿ ಹಾಗೂ ಹರಿಶ್ಚಂದ್ರ ಅವಿನಾಶ ದಿವಟೆ ಅವರಿಗೆ ಮನೆಯಿಂದಲೇ ಕೆಲಸ ಮತ್ತು ಸಾಲ ಸೌಲಭ್ಯ ಕೊಡಿಸುವುದಾಗಿ ನಂಬಿಕೆ ಮೂಡಿಸಿದ್ದಳು. ಆದರೆ, ಕೆಲಸವೂ ಕೊಡಿಸದೆ, ಸಾಲವೂ ಮಾಡಿಸದೆ, ಅವರ ಹೆಸರಿನಲ್ಲಿ ತೆರೆದ ಬ್ಯಾಂಕ್ ಖಾತೆಗಳನ್ನು ಮೋಸದ ಹಣ ವರ್ಗಾವಣೆಗೆ ಬಳಸಿಕೊಂಡಿರುವುದು ಬಹಿರಂಗವಾಯಿತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು 24 ಫೆಬ್ರವರಿ 2026ರಂದು ನ್ಯಾಯಾಲಯದ ಶೋಧ ವಾರೆಂಟ್ ಪಡೆದು ಆರೋಪಿ ಮೇಘಾ ಮಾರಡೊಳಕರ ನಿವಾಸವನ್ನು ತಪಾಸಣೆ ನಡೆಸಿದರು. ವಿಚಾರಣೆ ವೇಳೆ ಆಕೆ ಬೆಳಗಾವಿಯ ಹಲವು ಅಮಾಯಕ ಜನರನ್ನು ಬಳಸಿ ವಿವಿಧ ಬ್ಯಾಂಕ್‌ಗಳಲ್ಲಿ 72 ಖಾತೆಗಳನ್ನು ತೆರೆಸಿದ್ದಳು ಎಂಬ ಸಂಗತಿ ಪತ್ತೆಯಾಯಿತು.

ಆ ಖಾತೆಗಳ ಸಂಬಂಧ ದಾಖಲೆಗಳನ್ನು ಟ್ರಾವೆಲ್ಸ್ ಪಾರ್ಸೆಲ್ ಮೂಲಕ ಮುಂಬೈ ಮೂಲದ ಹೈದರಅಲಿ ಗುಲಾಮಅಲಿ ಉಜೈನವಾಲಾ ಅವರಿಗೆ ಕಳುಹಿಸಲಾಗುತ್ತಿತ್ತು ಎನ್ನಲಾಗಿದೆ. ಇದಕ್ಕಿಂತಲೂ ಆತಂಕಕಾರಿ ಅಂಶವೆಂದರೆ, ಈ ಬ್ಯಾಂಕ್ ಖಾತೆಗಳ ಜಾಲವನ್ನು ಸೈಬರ್ ಸಂಘಟಿತ ಅಪರಾಧಕ್ಕಾಗಿ ಬಳಸಲಾಗುತ್ತಿದ್ದು, ಪ್ರಮುಖ ಆರೋಪಿತನಾದ ಹೈದರಅಲಿ ತನ್ನ ಮಗ ಇದ್ರಿಸ್ ಅಲಿ ಹೈದರಅಲಿ, ಮತ್ತೊಬ್ಬ ಆರೋಪಿ ಅಜಿಜ್ ಬೋರಾ ಹಾಗೂ ಮೇಘಾ ಮಾರಡೊಳಕರ ಮಗಳು ಶಿವಾನಿ ನಾರಾಯಣ ಮಾರಡೊಳಕರ ಮೂಲಕ ದೇಶದಾಚೆಗೂ ಸಂಪರ್ಕ ಜಾಲ ಬೆಳೆಸಿದ್ದಾನೆ ಎಂಬ ಶಂಕೆ ಪೊಲೀಸರ ತನಿಖೆಯಲ್ಲಿ ವ್ಯಕ್ತವಾಗಿದೆ.

ಈ ಬೆನ್ನಲ್ಲೇ, ಪೊಲೀಸರು 22 ಮಾರ್ಚ್ 2026ರಂದು ಮುಂಬೈನಲ್ಲಿ ಹೈದರಅಲಿಯನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸಿದರು. ಇದೇ ಪ್ರಕರಣದಲ್ಲಿ ಆರೋಪಿ ಆಗಿರುವ ಮೇಘಾ ಮಾರಡೊಳಕರರನ್ನು 26 ಮಾರ್ಚ್ 2026ರಂದು ಗೋವಾದ ಪೂರ್ವ ಭಾಗದಲ್ಲಿ ವಶಕ್ಕೆ ಪಡೆದು, 27 ಮಾರ್ಚ್ ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಬ್ಬರೂ ಆರೋಪಿಗಳು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತನಿಖೆಯ ಮತ್ತೊಂದು ದೊಡ್ಡ ಬಹಿರಂಗವೆಂದರೆ, 72 ಖಾತೆಗಳ ಪೈಕಿ 47 ಖಾತೆಗಳ ವಿರುದ್ಧವೇ 1930 ಹಾಗೂ ಎನ್‌ಸಿಸಿಆರ್‌ಪಿ ಪೋರ್ಟಲ್‌ನಲ್ಲಿ ಒಟ್ಟು 144 ಪ್ರಕರಣಗಳು ದಾಖಲಾಗಿವೆ. ಇದೇ 47 ಖಾತೆಗಳಲ್ಲಿ ಸೇರಿ ₹1,27,04,678 ಮೊತ್ತದ ಮೋಸದ ಹಣ ಜಮಾ ಆಗಿರುವುದು ಪತ್ತೆಯಾಗಿದೆ. ಇದರಿಂದ ಬೆಳಗಾವಿಯಿಂದ ನಡಿದ ಬ್ಯಾಂಕ್ ಖಾತೆ ತೆರೆಸುವ ನೆಪದ ಜಾಲ, ದೇಶವ್ಯಾಪಿ ಸೈಬರ್ ವಂಚನೆಗೆ ಸೇತುವೆಯಾಗಿತ್ತು ಎಂಬ ಅನುಮಾನ ಗಾಢವಾಗಿದೆ.

ಒಟ್ಟಿನಲ್ಲಿ, ಉದ್ಯೋಗ ಮತ್ತು ಸಾಲದ ಆಮಿಷ ತೋರಿಸಿ ಖಾತೆ ತೆರೆಸುವ ಈ ಮಾದರಿ ಕೇವಲ ಸಾಮಾನ್ಯ ಮೋಸವಲ್ಲ; ಅದು ಸಾಮಾನ್ಯ ನಾಗರಿಕರ ಬ್ಯಾಂಕ್ ಪರಿಚಯವನ್ನೇ ಅಪರಾಧ ಜಾಲದ ಆಯುಧವಾಗಿಸುವ ಅಪಾಯಕಾರಿ ಕುತಂತ್ರ ಎಂಬುದು ಸ್ಪಷ್ಟವಾಗಿದೆ.

ಈ ಕಾರ್ಯಾಚರಣೆ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ), ಬೆಳಗಾವಿ ನಗರ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಸಹಾಯಕ ಪೊಲೀಸ್ ಆಯುಕ್ತ ಬಿ.ಎಸ್. ಮಂಟೂರ, ಪೊಲೀಸ್ ನಿರೀಕ್ಷಕ ಎಸ್.ಎನ್. ಗಾಚಿ ಹಾಗೂ ಸೈಬರ್ ಅಪರಾಧ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಯಶಸ್ವಿ ಕಾರ್ಯಾಚರಣೆಗೆ ಪೊಲೀಸ್ ಆಯುಕ್ತರು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.