ಬೆಳಗಾವಿ: ಗೋಮಾಂಸ ಸಾಗಿಸುತ್ತಿದ್ದ ಲಾರಿಗೆ ಗುಂಪೊಂದು ಬೆಂಕಿ ಹಚ್ಚಿದ ಘಟನೆ ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಐನಾಪುರ ಬಳಿ ತಡರಾತ್ರಿ ನಡೆದಿದೆ.
ಇದರಿಂದ ರಾತ್ರಿ ಐನಾಪೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಕುಡಚಿಯಿಂದ ಕಲಬುರ್ಗಿಗೆ ಹಸುವಿನ ಮಾಂಸ ಸಾಗಿಸುತ್ತಿದೆ ಎಂಬ ಆರೋಪದ ಮೇರೆಗೆ ಕೆಲವರು ಟ್ರಕನ್ನು ತಡೆದು ನಿಲ್ಲಿಸಿದರು. ತಪಾಸಣೆಯ ವೇಳೆ ಟ್ರಕ್‌ನಲ್ಲಿ ಐದು ಟನ್‌ಗಿಂತ ಹೆಚ್ಚು ಹಸುವಿನ ಮಾಂಸ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಇದರಿಂದ ಆಕ್ರೋಶಗೊಂಡ ಜನರು ವಾಹನಕ್ಕೆ ಬೆಂಕಿ ಹಚ್ಚಿದರು. ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲೇ ಟ್ರಕ್ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಉಗರ ಶುಗರ್ ಫ್ಯಾಕ್ಟರಿ ಹಾಗೂ ಅಥಣಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಕಾಗವಾಡ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.