Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ 22 ವರ್ಷದಿಂದ ಇವರಿಬ್ಬರ ಕೈಯಲ್ಲೇ ಬಾಗಲಕೋಟೆ ವಿಧಾನಸಭಾ ಕ್ಷೇತ್ರ‌; ಈ ಬಾರಿ ಯಾರಿಗೆ ಗೆಲುವು?

22 ವರ್ಷದಿಂದ ಇವರಿಬ್ಬರ ಕೈಯಲ್ಲೇ ಬಾಗಲಕೋಟೆ ವಿಧಾನಸಭಾ ಕ್ಷೇತ್ರ‌; ಈ ಬಾರಿ ಯಾರಿಗೆ ಗೆಲುವು?

0
39

ಬಾಗಲಕೋಟೆ: ಎಚ್‌.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದ್ದು, ರಾಜಕೀಯ ವಲಯದಲ್ಲಿ ಅಭ್ಯರ್ಥಿಗಳ ಲೆಕ್ಕಾಚಾರಗಳು ಜೋರಾಗಿವೆ.

2025ರ ನವೆಂಬರ್ 4ರಂದು ಕಾಂಗ್ರೆಸ್‌ನ ಹಿರಿಯ ಎಚ್‌.ವೈ. ಮೇಟಿ ನಿಧನರಾಗಿದ್ದು, ಸದ್ಯ ಉಪಚುನಾವಣೆಗೆ ಸಿದ್ಧತೆ ನಡೆದಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ಮತದಾರ ಆಶೀರ್ವಾದ ಮಾಡುತ್ತ ಬಂದಿದ್ದಾನೆ.

ಕಳೆದ 1999ರಿಂದ ಇಲ್ಲಿಯವರೆಗೆ ನಡೆದ ಒಟ್ಟು 6 ಚುನಾವಣೆಗಳಲ್ಲಿ ಬಿಜೆಪಿ 4 ಬಾರಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ ಎರಡು ಬಾರಿ ಮಾತ್ರ ಗೆಲುವು ಕಂಡಿದ್ದು, ಆ ಗೆಲುವು ಎಚ್‌.ವೈ. ಮೇಟಿ ಅವರದ್ದೇ ಆಗಿರುವುದು ವಿಶೇಷ.

1999 ರಲ್ಲಿ ಬಿಜೆಪಿಯ ಪ್ರಹ್ಲಾದ ಪೂಜಾರ 40,418 ಮತಗಳನ್ನು ಪಡೆದಿದ್ದು, 40,280 ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ. ಕಾಂತಿ ರಾಜಶೇಖರ ಕಡಿಯಪ್ಪ ಅವರ ವಿರುದ್ಧ ಕೇವಲ 138 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

2004 ರಲ್ಲಿ ಪ್ರಹ್ಲಾದ ಪೂಜಾರ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 29,075 ಮತಗಳನ್ನು ಪಡೆದರು. ಆದರೆ ಬಿಜೆಪಿಯ ಅಭ್ಯರ್ಥಿಯಾಗಿದ್ದ ವೀರಣ್ಣ ಚರಂತಿಮಠ 34,597 ಮತಗಳನ್ನು ಪಡೆಯುವ ಮೂಲಕ 5,522 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು.

2008 ಬಿಜೆಪಿ ಅಭ್ಯರ್ಥಿಯಾಗಿ ವೀರಣ್ಣ ಚರಂತಿಮಠ ಸತತ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ. ಆದರೆ ಈ ಚುನಾವಣೆಯಲ್ಲಿ ಎಚ್‌.ವೈ ಮೇಟಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 37,206 ಮತಗಳನ್ನು ಪಡೆದು 9,246 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು.

2013 ರಲ್ಲಿ ಹ್ಯಾಟ್ರಿಕ್‌ ಗೆಲುವಿನ ಕನಸಿನೊಂದಿಗೆ ಕಣಕ್ಕಿಳಿದಿದ್ದ ವೀರಣ್ಣ ಚರಂತಿಮಠ ಅವರನ್ನು ಎಚ್‌.ವೈ ಮೇಟಿಯವರು ಕೇವಲ 2,900 ಮತಗಳ ಅಂತರದಲ್ಲಿ ಸೋಲಿಸಿ ಚರಂತಿಮಠರಿಗೆ ಸೋಲಿನ ರುಚಿಯನ್ನು ತೋರಿಸಿದರು.

2018 ರಲ್ಲಿಯೂ ಕೂಡ ಬಿಜೆಪಿಯಿಂದ ವೀರಣ್ಣ ಚರಂತಿಮಠ ಅವರೇ ಎಚ್‌.ವೈ ಮೇಟಿ ಅವರ ವಿರುದ್ಧ ಸ್ಪರ್ಧಿಸಿದರು. ಆಗ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ವೈ ಮೇಟಿ 15,934 ಮತಗಳ ಅಂತರದಲ್ಲಿ ಚರಂತಿಮಠ ವಿರುದ್ಧ ಸೋಲನ್ನು ಕಂಡಿದ್ದರು.

2023 ರಲ್ಲಿ ಮತ್ತೆ ಬಿಜೆಪಿಯಿಂದ ವೀರಣ್ಣ ಚರಂತಿಮಠ ಹಾಗೂ ಕಾಂಗ್ರೆಸ್‌ನಿಂದ ಎಚ್‌.ವೈ ಮೇಟಿ ಇವರಿಬ್ಬರ ಮಧ್ಯೆಯೇ ಸ್ಪರ್ಧೆ ಏರ್ಪಟಿತ್ತು. ಆದರೆ, ಈ ಬಾರಿ ಮತದಾರ ಆಶೀರ್ವಾದಿಸಿದ್ದು ಎಚ್‌.ವೈ ಮೇಟಿ ಅವರಿಗೆ ಈ ಚುನಾವಣೆಯಲ್ಲಿ 5,878 ಮತಗಳ ಅಂತರದಲ್ಲಿ ವೀರಣ್ಣ ಚರಂತಿಮಠ ಸೋಲನ್ನು ಕಂಡಿದ್ದರು.

2008 ರಿಂದ ಇಲ್ಲಿಯವರೆಗೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಎಚ್‌.ವೈ ಮೇಟಿ ಮತ್ತು ಬಿಜೆಪಿಯಿಂದ ವೀರಣ್ಣ ಚರಂತಿಮಠ ಹೊರತುಪಡಿಸಿದರೆ ಬೇರೆ ಯಾವ ಅಭ್ಯರ್ಥಿಯೂ ಈ ಪಕ್ಷಗಳಿಂದ ಕಣಕ್ಕೆ ಇಳಿಯಲಿಲ್ಲ.

ನಾಲ್ಕು ಬಾರಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಎಚ್‌.ವೈ ಮೇಟಿ ಮತ್ತು ವೀರಣ್ಣ ಚರಂತಿಮಠ ಎದುರಾಳಿಗಳಾಗಿ ಸ್ಪರ್ಧೆ ಮಾಡಿ ಇಬ್ಬರೂ ತಲಾ ಎರಡು ಬಾರಿ ಸೋಲು ಕಂಡಿದ್ದರೂ, ಎರಡು ಬಾರಿ ಗೆಲುವು ಸಾಧಿಸಿದ್ದು ಈ ಕ್ಷೇತ್ರದ ವಿಶೇಷ.

ಈ ಬಾರಿ ಕಾಂಗ್ರೆಸ್‌ ಶಾಸಕ ಎಚ್‌.ವೈ ಮೇಟಿ ಅವರ ನಿಧನದಿಂದಾಗಿ ಉಪ ಚುನಾವಣೆ ಜರುಗಲಿದ್ದು, ಮತದಾರ ಪ್ರಭು ಯಾರ ಕೊರಳಿಗೆ ವಿಜಯಮಾಲೆ ಹಾಕಲಿದ್ದಾನೆ ಎನ್ನುವುದನ್ನು ಕಾದುನೋಡಬೇಕಿದೆ.