Home ನಮ್ಮ ಜಿಲ್ಲೆ ಬಾಗಲಕೋಟೆ ಉಗ್ರ ಸ್ವರೂಪ ತಾಳಿದ ಕಬ್ಬಿನ ಬೆಲೆ ಸಮರ: ಮುಧೋಳ ಬಂದ್ ಯಶಸ್ವಿ

ಉಗ್ರ ಸ್ವರೂಪ ತಾಳಿದ ಕಬ್ಬಿನ ಬೆಲೆ ಸಮರ: ಮುಧೋಳ ಬಂದ್ ಯಶಸ್ವಿ

0

ಬಾಗಲಕೋಟೆ(ಮುಧೋಳ): ಟನ್ ಕಬ್ಬು ಬೆಳೆಗೆ 3500 ದರ ಘೋಷಣೆ ಹಾಗೂ ಹಿಂದಿನ ಬಾಕಿ ನೀಡುವವರೆಗೆ ಕಾರ್ಖಾನೆ ಪ್ರಾರಂಭಿಸದಂತೆ ಒತ್ತಾಯಿಸಿ ನಗರದ ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿಯ ಸಂಗೊಳ್ಳಿ ರಾಯಣ್ಣ ಸರ್ಕಲ್‌ದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಗರದಲ್ಲಿ ಟ್ರ್ಯಾಕ್ಟರ್ ಹಾಗೂ ಆಟೋಗಳ ರ‍್ಯಾಲಿ ನಡೆಸಿದರು. ಅಲ್ಲದೆ ಬಾಕಿ ನೀಡದ ಕಾರ್ಖಾನೆಗಳು ಹಾಗೂ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.  

ಮುಧೋಳ ಯಶಸ್ವಿ: ಸ್ವಯಂ ಪ್ರೇರಿತವಾಗಿ ನಗರದ ಎಲ್ಲ ಅಂಗಡಿ ಮುಂಗಟ್ಟು, ಶಾಲೆಗಳನ್ನು ಬಂದ್ ಮಾಡಿ ರೈತ ಪರ ಶಾಂತ ರೂಪದಿಂದ ಧ್ವನಿ ಎತ್ತಿದರು, ನಗರದ ರಾಯಣ್ಣ ಸರ್ಕಲ್‌ದಿಂದ ಜಡಗಣ್ಣ ಬಾಲಣ್ಣ, ಬಸವೇಶ್ವರ ಸರ್ಕಲ್, ಗಾಂಧಿ ಸರ್ಕಲ್ ಶಿವಾಜಿ ವೃತ್ತ, ಬಸ್ ನಿಲ್ದಾಣ ಸೇರಿದಂತೆ ಬಹುತೇಕ ಸ್ಥಳಗಳು ಜನರಿಲ್ಲದೆ ಬಣಗುಡುತ್ತಿದ್ದವು. ಕೆಲ ಕಡೆ ಹೊಟೇಲ್ ಸಹ ಬಂದ್ ಆಗಿದ್ದರಿಂದ ಹೊಟೇಲ್ ನಂಬಿ ಜೀವನ ಮಾಡುತ್ತಿದ್ದ ಯುವಕರು ಹಾಗೂ ಸಾರ್ವಜನಿಕರು ಪರದಾಡಬೇಕಾಯಿತು. ರೈತ ಸಂಘಟನೆಗಳ ಕರೆಗೆ ಮುಧೋಳದ ಸಮಸ್ತ ವ್ಯಾಪಾರಸ್ಥರು, ಅಂಗಡಿ ಮಾಲೀಕರು ಮತ್ತು ವಿವಿಧ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿದವು. ಬೆಳಗ್ಗೆಯಿಂದಲೇ ಪಟ್ಟಣದ ಪ್ರಮುಖ ವಾಣಿಜ್ಯ ಮಳಿಗೆಗಳು ಮತ್ತು ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು.

ರಸ್ತೆ ಗಿಳಿದ ಟ್ರ್ಯಾಕ್ಟರ್, ಆಟೋಗಳು: ಮುಧೋಳ ತಾಲೂಕು ಮಾತ್ರವಲ್ಲದೆ ವಿಜಯಪುರ-ಬಾಗಲಕೋಟೆ ಜಿಲ್ಲೆಯ ಎಲ್ಲ ಕಡೆಯ ರೈತರು ಟ್ರ್ಯಾಕ್ಟರ್ ಜೊತೆಗೆ ಸಾವಿರಾರು ಸಂಖ್ಯೆಯ ರೈತರು ವಿಜಯಪುರ – ಬೆಳಗಾವಿ ರಾಜ್ಯ ಹೆದ್ದಾರಿಯ ಸಂಗೊಳ್ಳಿ ರಾಯಣ್ಣ ಸರ್ಕಲ್‌ದಿಂದ ನಗರದ ಪ್ರಮುಖ ಬೀದಿಯಲ್ಲಿ ಹಾಯ್ದು ರ‍್ಯಾಲಿ ಮಾಡಿದ್ದು ಗಮನ ಸೆಳೆಯಿತು.

ಬಂದ್‌ಗೆ ಬಂದ ವಿದ್ಯಾರ್ಥಿಗಳು: ರೈತರಿಗೆ ನ್ಯಾಯಸಮ್ಮತ ಬೆಲೆ ನೀಡಬೇಕು ಎಂದು ಒತ್ತಾಯಿಸಿ ಇಂದು ಶಾಲೆಗೆ ರಜೆ ನೀಡಿದ ಶಾಲೆಗಳ ಮಕ್ಕಳು ದಿ. ರಮೇಶಣ್ಣ ಗಡದನ್ನವರ ವೇದಿಕೆಗೆ ಬಂದು ನ್ಯಾಯಯುತ ಬೆಲೆ ಸರ್ಕಾರ ನೀಡಲೇಬೇಕು ಎಂದು ಒತ್ತಾಯಿಸಿದರು. ನೂರಾರು ಮಕ್ಕಳ ಜೊತೆಗೆ ಶಿಕ್ಷಕರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ರಸ್ತೆಯಲ್ಲಿ ಓಡಾಡಿದ ಬಸ್‌ಗಳು: ನಗರದಲ್ಲಿ ಕಬ್ಬಿನ ಬೆಲೆಗಾಗಿ ನಡೆದ ಹೋರಾಟ ಇದ್ದರೂ ಇಂದು ವಿವಿಧ ಕಾರ್ಯಕ್ರಮ ಹಾಗೂ ಮದುವೆಗೆ ಹೋಗಲು ಅಡ್ಡಿಯಾಗಬಾರದು ಎಂದು ಯಾವ ರಸ್ತೆಯನ್ನೂ ಬಂದ್ ಮಾಡದೆ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಕೆಲವು ಜನರು ದ್ವಿಚಕ್ರ ವಾಹನ, ಕಾರು, ಬಸ್ಸಿನಲ್ಲಿ ಪ್ರಯಾಣ ಮಾಡಿದರು. ಕೆಲವರು ಎಲ್ಲಿ ರಸ್ತೆ ತಡೆ ಮಾಡಿಯಾರು ಎಂದು ರಸ್ತೆಗೆ ಇಳಿಯದೆ ಇರುವುದು ಕಂಡು ಬಂತು.

ಜಿಲ್ಲಾ ಅಧ್ಯಕ್ಷ ಬಸವಂತಪ್ಪ ಕಾಂಬಳೆ ಮಾತನಾಡಿ, ನಾವು ಮಧ್ಯಾಹ್ನ 3ರ ವರೆಗೆ ಗಡುವು ಕೊಟ್ಟಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕರು ನಮಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಆದರೆ ಸರ್ಕಾರ, ಕಾರ್ಖಾನೆ, ಮಾಲೀಕರು, ಜಿಲ್ಲಾಡಳಿತ ಏನು ಮಾಡಿದರೂ ನಾವು 3500 ಪಡೆದೇ ತೀರುತ್ತೇವೆ ಹಳೆಯ ಬಾಕಿ ಹಣ ಹಾಗೂ ಹೊಸ ದರ 3500 ರೂ. ಕೊಡದೆ ಹೋದರೆ ಯಾವುದೇ ಕಾರ್ಖಾನೆ ಪ್ರಾರಂಭಿಸಲು ನಾವು ಬಿಡುವದಿಲ್ಲ. ರೈತರು ಕಾರ್ಖಾನೆ ಮಾಲೀಕರು ಸರಿಯಾದ ದರ ನೀಡಬೇಕು ಹಾಗೂ ಬಾಕಿ ಹಣವನ್ನು ಕೂಡಲೇ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಈರಪ್ಪ ಹಂಚನಾಳ ಮಾತನಾಡಿ, ಕಬ್ಬು ಬೆಳೆಯಲು ತಗಲುವ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಗೊಬ್ಬರ, ಇಂಧನ ಮತ್ತು ಕೃಷಿ ಕಾರ್ಮಿಕರ ಕೂಲಿ ದುಪ್ಪಟ್ಟಾಗಿದೆ. ಇಂತಹ ಸಂದರ್ಭದಲ್ಲಿ ರು 3,300 ಬೆಲೆ ನಮಗೆ ಯಾವುದೇ ಕಾರಣಕ್ಕೂ ನ್ಯಾಯಯುತವಲ್ಲ. ನಮ್ಮ ಕನಿಷ್ಠ ಬೇಡಿಕೆ ರು 3,500. ಈ ಬೆಲೆ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಸರ್ಕಾರದ ಈ ಬಂಡತನ ಸರಿಯಲ್ಲ. ರೈತ ರೊಚ್ಚಿಗೆದ್ದರೆ ಏನೆಲ್ಲ ನಡೆಯುತ್ತದೆ ಕೂಡಲೆ ಸರ್ಕಾರ ಬೆಲೆ ಘೋಷಣೆ ಮಾಡಬೇಕು ಎಂದು ಹೇಳಿದರು. ಸಂಗೊಳ್ಳಿ ರಾಯಣ್ಣ ಸರ್ಕಲ್‌ದಲ್ಲಿ ನಿರಂತರವಾಗಿ ರೈತರ ಸಂಖ್ಯೆ ಇಮ್ಮಡಿಯಾಯಿತು. ನಂತರ ಟ್ರ್ಯಾಕ್ಟರ್ ಹಾಗೂ ಆಟೋಗಳ ರ‍್ಯಾಲಿ ನಡೆದ ನಂತರ ಮುಧೋಳ ಬೂದಿ ಮುಚ್ಚಿದ ಕೆಂಡದಂತೆ ಗೋಚರಿಸಿತು.   
 
ಕಬ್ಬು ಪ್ರಮುಖ ಬೆಳೆಯಾಗಿರುವ ಈ ಭಾಗದಲ್ಲಿ ಬೆಂಬಲ ಬೆಲೆಯ ವಿಚಾರ ನೇರವಾಗಿ ಸಾವಿರಾರು ಕುಟುಂಬಗಳ ಮೇಲೆ ಪರಿಣಾಮ ಬೀರುತ್ತದೆ. ರೈತರ ಈ ಬೇಡಿಕೆಗೆ ವ್ಯಾಪಾರ ಸಮುದಾಯವು ನೀಡಿರುವ ಬೆಂಬಲ, ಸ್ಥಳೀಯ ಮಟ್ಟದಲ್ಲಿ ಈ ವಿಷಯದ ಗಂಭೀರತೆಯನ್ನು ಮನವರಿಕೆ ಮಾಡಿದೆ. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ರೈತರೊಂದಿಗೆ ಮಾತುಕತೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ರೈತರುತಮ್ಮ ಬೆಲೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಬಂದ್ ಮೂಲಕ ರವಾನಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version