ಬಾಗಲಕೋಟೆ: ಬಾಲಕಲಾವಿದೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರೆಂಡಿಂಗ್ ಸ್ಟಾರ್ ಮ್ಯೂಸಿಕ್ ಮೈಲಾರಿ(ಮೈಲಾರಪ್ಪ ಸಣಕಳ್ಳಕಪ್ಪ ಮಡಿವಾಳರ)ಯನ್ನು ಪೊಲೀಸರು ವಿಜಯಪುರ ಜಿಲ್ಲೆಯ ತಿಕೋಟಾ ಬಳಿ ಬಂಧಿಸಿ ಬುಧವಾರ ಇಲ್ಲಿನ ಪೊಕ್ಸೋ ವಿಶೇಷ ನ್ಯಾಯಾಲಯದೆದುರು ಹಾಜರುಪಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಡಿ. 30ರ ವರೆಗೆ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದರು.
ಕಾರ್ಯಕ್ರಮವೊಂದಕ್ಕೆ ತೆರಳಿದಾಗ ತನ್ನ ಮೇಲೆ ಮ್ಯೂಸಿಕ್ ಮೈಲಾರಿ ಅತ್ಯಾಚಾರ ಎಸಗಿದ್ದು, ಇತರ ಆರು ಜನ ಆತನೊಂದಿಗೆ ಶಾಮೀಲಾಗಿರುವ ಬಗ್ಗೆ ಅಪ್ರಾಪ್ತ ವಯಸ್ಕ ಸಂತ್ರಸ್ತೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ದೂರು ದಾಖಲಿಸಿದ್ದಳು.
ಇದನ್ನೂ ಓದಿ: ಗಾಯಕ ಮ್ಯೂಸಿಕ್ ಮೈಲಾರಿ ಸೇರಿ ನಾಲ್ವರ ವಿರುದ್ಧ ಪೋಕ್ಸೋ ಕೇಸ್..!
ಘಟನೆ ಅಕ್ಟೋಬರ್ 24 ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಲಾಡ್ಜ್‌ವೊಂದರಲ್ಲಿ ನಡೆದಿದೆ ಎಂದು ದೂರಿದ್ದರಿಂದ ಬೆಳಗಾವಿ ಪೊಲೀಸರು ಪ್ರಕರಣವನ್ನು ಬಾಗಲಕೋಟೆ ಪೊಲೀಸರಿಗೆ ಡಿ. 15ರಂದು ವರ್ಗಾಯಿಸಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಬಾಗಲಕೋಟೆ ಪೊಲೀಸರು ಮ್ಯೂಸಿಕ್ ಮೈಲಾರಿ ಬಂಧನಕ್ಕೆ ಜಾಲ ಬೀಸಿದ್ದರು. ತೇರದಾಳ ಠಾಣೆ ಪಿಎಸ್‌ಐ ನೇತೃತ್ವದ ತಂಡ ಆತನನ್ನು ವಿಜಯಪುರ ಜಿಲ್ಲೆ ತಿಕೋಟಾ ಬಳಿ ಬುಧವಾರ ನಸುಕಿನ ಜಾವ 5ಕ್ಕೆ ಬಂಧಿಸಿ ಕರೆತಂದಿತು.
ಬುಧವಾರ ಬೆಳಗ್ಗೆಯಿಂದ ಬನಹಟ್ಟಿ ಠಾಣೆಯಲ್ಲಿ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ಮಧ್ಯಾಹ್ನ ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ಕರೆ ತಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.
ನಂತರ ಜಿಲ್ಲಾ ನ್ಯಾಯಾಲಯದ ವಿಶೇಷ ಪೋಕ್ಸೋ ಕೋರ್ಟಿಗೆ ಆತನನ್ನು ಹಾಜರಪಡಿಸಿದಾಗ ನ್ಯಾಯಾಧೀಶರಾದ ಪ್ರೀತಿ ಸದರಜೋಶಿ ವಿಚಾರಣೆ ಮಾಡಿದ್ದು, 14 ದಿನಗಳ ನ್ಯಾಯಾಂಗ ವಶಕ್ಕೆ ನೀಡಲು ಆದೇಶಿಸಿದ್ದಾರೆ.























