Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ಆಲಮಟ್ಟಿ ಎತ್ತರ ಹೆಚ್ಚಳಕ್ಕೆ ದಿಟ್ಟ ಹೆಜ್ಜೆ- ರೈತರಿಗೆ ಪರಿಹಾರ ವಿತರಣೆ ಆರಂಭ

ಆಲಮಟ್ಟಿ ಎತ್ತರ ಹೆಚ್ಚಳಕ್ಕೆ ದಿಟ್ಟ ಹೆಜ್ಜೆ- ರೈತರಿಗೆ ಪರಿಹಾರ ವಿತರಣೆ ಆರಂಭ

0
70

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3: ಭೂಸ್ವಾಧೀನ ರೈತರಿಗೆ ಪರಿಹಾರ ವಿತರಣೆಗೆ ಚಾಲನೆ

ಬಾಗಲಕೋಟೆ : ಮಹತ್ವಾಕಾಂಕ್ಷಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3 ಯೋಜನೆಯಡಿ ಭೂಸ್ವಾಧೀನಗೊಳ್ಳಲಾದ ರೈತರ ಜಮೀನುಗಳಿಗೆ ಪರಿಹಾರ ವಿತರಣೆ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ ಪಾಟೀಲ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.

ಈ ಯೋಜನೆಯಡಿ ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸಲಾಗುತ್ತದೆ. ಇದರ ಪರಿಣಾಮವಾಗಿ ಹೆಚ್ಚುವರಿ ಸುಮಾರು 130 ಟಿಎಂಸಿ ನೀರನ್ನು ನೀರಾವರಿ ಹಾಗೂ ಕುಡಿಯುವ ನೀರಿನ ಅಗತ್ಯಗಳಿಗೆ ಬಳಸಿಕೊಳ್ಳಲು ಸಾಧ್ಯವಾಗಲಿದೆ.

ಯೋಜನೆಗೆ ಭೂಮಿ ನೀಡುವ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕು ಎಂಬ ಬೇಡಿಕೆಗೆ ಸ್ಪಂದಿಸಿದ ಸರ್ಕಾರ, ನೀರಾವರಿ ಭೂಮಿಗೆ ಪ್ರತಿ ಎಕರೆಗೆ ₹40 ಲಕ್ಷ ಹಾಗೂ ಒಣಭೂಮಿಗೆ ಪ್ರತಿ ಎಕರೆಗೆ ₹30 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿತ್ತು.

ಸರ್ಕಾರ ನೀಡಿದ ಭರವಸೆಯಂತೆ ಇದೀಗ ಸಾಂಕೇತಿಕವಾಗಿ ಪರಿಹಾರ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಯೋಜನೆಗಾಗಿ ಭೂಮಿ ನೀಡಿದ ಎಲ್ಲಾ ರೈತರಿಗೆ ಹಂತ ಹಂತವಾಗಿ ಪರಿಹಾರ ವಿತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ ಸೇರಿದಂತೆ ಸಚಿವ ಸಂಪುಟದ ಸದಸ್ಯರು, ಶಾಸಕರು, ಅಧಿಕಾರಿಗಳು, ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ–3 ಪೂರ್ಣಗೊಂಡ ಬಳಿಕ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೀರಾವರಿ ಸೌಲಭ್ಯ ವಿಸ್ತಾರವಾಗುವುದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆಗೆ ಸಹ ಶಾಶ್ವತ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.