ಬಾಗಲಕೋಟೆ: ಬಾಗಲಕೋಟೆಯ ಜಿಲ್ಲಾ ನ್ಯಾಯಾಲಯವನ್ನು ಸ್ಫೋಟಿಸುವುದಾಗಿ ಜಿಲ್ಲಾ ನ್ಯಾಯಾಧೀಶರಿಗೆ ಇಮೇಲ್ ಮೂಲಕ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಮಂಗಳವಾರ ನ್ಯಾಯಾಲಯದ ಎಲ್ಲಾ ಕಲಾಪಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಮಂಗಳವಾರ ಬೆಳಗ್ಗೆ ಜಿಲ್ಲಾ ನ್ಯಾಯಾಧೀಶರ ಅಧಿಕೃತ ಇಮೇಲ್ ಐಡಿಗೆ ಬಂದಿರುವ ಈ ಬೆದರಿಕೆ ಸಂದೇಶದಲ್ಲಿ, ನ್ಯಾಯಾಲಯದ ಆವರಣದ ಸೂಕ್ಷ್ಮ ಸ್ಥಳದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಮಧ್ಯಾಹ್ನದ ಊಟದ ವಿರಾಮದ ಸಮಯದಲ್ಲಿ ಸ್ಫೋಟ ನಡೆಸಲಾಗುತ್ತದೆ ಎಂಬ ಸ್ಪಷ್ಟ ಎಚ್ಚರಿಕೆ ನೀಡಿರುವುದು ಅಧಿಕಾರಿಗಳನ್ನು ಆತಂಕಕ್ಕೀಡು ಮಾಡಿದೆ.
ಇದನ್ನೂ ಓದಿ: ಹರಿಯಿತು ನೆತ್ತರು: ವಿವಾಹಿತ ಮಹಿಳೆಯ ಕತ್ತು ಕೊಯ್ದು ಭೀಕರ ಕೊಲೆ
ಇಮೇಲ್‌ನ ಗಂಭೀರತೆಯನ್ನು ಗಮನಿಸಿದ ಜಿಲ್ಲಾ ನ್ಯಾಯಾಧೀಶರು ತಕ್ಷಣವೇ ನ್ಯಾಯಾಲಯದ ಕಲಾಪಗಳನ್ನು ಸ್ಥಗಿತಗೊಳಿಸಿ, ನ್ಯಾಯಾಲಯದಲ್ಲಿದ್ದ ಸಿಬ್ಬಂದಿ, ವಕೀಲರು ಹಾಗೂ ಸಾರ್ವಜನಿಕರನ್ನು ಹೊರಗೆ ಕಳುಹಿಸುವಂತೆ ಸೂಚಿಸಿದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಯಿತು.
ಬಾಗಲಕೋಟೆ ಡಿವೈಎಸ್ಪಿ ಗಜಾನನ ಸುತಾರ ಅವರ ನೇತೃತ್ವದಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಹಾಗೂ ಪೊಲೀಸ್ ಸಿಬ್ಬಂದಿ ನ್ಯಾಯಾಲಯದ ಆವರಣದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ನ್ಯಾಯಾಲಯದ ಒಳಭಾಗ, ಆವರಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸೂಕ್ಷ್ಮವಾಗಿ ತಪಾಸಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಧಾರವಾಡ: ಬೆಂಕಿ ಅನಾಹುತಕ್ಕೆ ಮೂರು ಅಂಗಡಿ ಭಸ್ಮ
ಇದೇ ವೇಳೆ ಬೆದರಿಕೆ ಇಮೇಲ್ ಕಳುಹಿಸಿದ ವ್ಯಕ್ತಿ ಅಥವಾ ಸಂಘಟನೆಯ ಪತ್ತೆಗೆ ಸೈಬರ್ ಕ್ರೈಂ ವಿಭಾಗದ ಸಹಾಯ ಪಡೆದು ತನಿಖೆ ಕೈಗೊಳ್ಳಲಾಗಿದೆ. ಈ ಘಟನೆ ನ್ಯಾಯಾಲಯದ ಭದ್ರತೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕ ವಲಯದಲ್ಲೂ ಆತಂಕ ಮೂಡಿಸಿದೆ.
ಪರಿಶೀಲನೆ ಪೂರ್ಣಗೊಂಡ ನಂತರವೇ ನ್ಯಾಯಾಲಯದ ಮುಂದಿನ ಕಾರ್ಯಾಚರಣೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.























