ಬಾಗಲಕೋಟೆ ಜಿಲ್ಲಾಡಳಿತ ಭವನಕ್ಕೆ ಬಾಂಬ್ ಬೆದರಿಕೆ ಕರೆ

0
3

ಇ-ಮೇಲ್ ಮೂಲಕ ಬೆದರಿಕೆ: ಬಾಂಬ್ ನಿಷ್ಕ್ರೀಯ ದಳ–ಶ್ವಾನದಳದಿಂದ ತಪಾಸಣೆ

ಬಾಗಲಕೋಟೆ: ಬಾಗಲಕೋಟೆ ನಗರದ ನವನಗರದಲ್ಲಿರುವ ಜಿಲ್ಲಾಡಳಿತ ಭವನವನ್ನು ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಬಂದಿರುವ ಘಟನೆ ಬುಧವಾರ ಆತಂಕಕ್ಕೆ ಕಾರಣವಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಅಧಿಕೃತ ಇ-ಮೇಲ್ ಐಡಿಗೆ “Bomb planted in DC Office, set to blast” ಎಂಬ ವಿಷಯದೊಂದಿಗೆ ಸಂದೇಶ ಬಂದಿದ್ದು, ತಕ್ಷಣವೇ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣ ವಿಳಂಬ: ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

ಈ ವಿಷಯವನ್ನು ಜಿಲ್ಲಾಧಿಕಾರಿಗಳು ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಅವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಬಾಂಬ್ ನಿಷ್ಕ್ರೀಯ ದಳ (BDS) ಹಾಗೂ ಶ್ವಾನದಳವನ್ನು ಕರೆಸಿ ಜಿಲ್ಲಾಡಳಿತ ಭವನದ ಎಲ್ಲಾ ಕೊಠಡಿಗಳು, ಕಚೇರಿಗಳು ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ಸೂಕ್ಷ್ಮವಾಗಿ ತಪಾಸಣೆ ನಡೆಸಲಾಯಿತು.

ಸಂಪೂರ್ಣ ಪರಿಶೀಲನೆ – ಆತಂಕಕ್ಕೆ ಅವಕಾಶ ಇಲ್ಲ: ಭದ್ರತಾ ದಳಗಳು ಜಿಲ್ಲಾಡಳಿತ ಭವನದ ಒಳಭಾಗ ಹಾಗೂ ಹೊರಭಾಗವನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದ್ದು, ಯಾವುದೇ ಶಂಕಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಕೆಲಕಾಲ ಜಿಲ್ಲಾಡಳಿತ ಭವನದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

ಇದನ್ನೂ ಓದಿ: ಹೈಕಮಾಂಡ್ ಸೂಚಿಸುವವರೆಗೂ ನಾನೇ ಮುಖ್ಯಮಂತ್ರಿ

ತನಿಖೆ ಮುಂದುವರಿಕೆ: ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, “ಇ-ಮೇಲ್ ಮೂಲಕ ಬಂದಿರುವ ಬಾಂಬ್ ಬೆದರಿಕೆ ಕುರಿತು ಗಂಭೀರ ತನಿಖೆ ನಡೆಸಲಾಗುತ್ತಿದೆ. ಸೈಬರ್ ಅಪರಾಧ ವಿಭಾಗದ ಸಹಾಯದಿಂದ ಮೇಲ್ ಮೂಲ ಪತ್ತೆ ಹಚ್ಚಲಾಗುವುದು. ಜಿಲ್ಲಾಡಳಿತ ಭವನವನ್ನು ಸಂಪೂರ್ಣವಾಗಿ ತಪಾಸಣೆ ಮಾಡಲಾಗಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬೇಕಾಗಿಲ್ಲ” ಎಂದು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಮನವಿ: ಪೊಲೀಸರು ಈ ಬೆದರಿಕೆಯನ್ನು ಹುಸಿ ಕರೆ ಅಥವಾ ಇ-ಮೇಲ್ ಆಗಿರುವ ಸಾಧ್ಯತೆಯನ್ನೂ ಪರಿಶೀಲಿಸುತ್ತಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಸಹಕರಿಸಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

Previous articleಗೃಹಲಕ್ಷ್ಮಿ ಯೋಜನೆ ಹಣ ವಿಳಂಬ: ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ