ಬಿಗಿ ಮಾಡಿದರೂ ನಿಲ್ಲದ ಅಕ್ರಮ ಅಕ್ಕಿ ಸಾಗಣೆ

0
6

ಬಾಗಲಕೋಟೆ: ಬಡವರಿಗಾಗಿ ಸರ್ಕಾರವು ಹಂಚುವ ಅನ್ನ ಭಾಗ್ಯ ಯೋಜನೆಯ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿ ರವಾನಿಸುವವರ ವಿರುದ್ಧ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿ ಪ್ರಕರಣಗಳ್ನು ದಾಖಲಿಸುತ್ತಿದ್ದರೂ, ಅಕ್ರಮ ಸಾಗಣೆ ಮಾತ್ರ ಕೊನೆಯಾಗುತ್ತಿಲ್ಲ.
ಶನಿವಾರ ರಾತ್ರಿ ಹೊತ್ತು ಮತ್ತೇ ಓರ್ವ ಆರೋಪಿಯೊಂದಿಗೆ ಲಾರಿ ಸಮೇತ 15 ಟನ್‌ನಷ್ಟು ಅಕ್ಕಿ ವಶಪಡಿಸಿಕೊಂಡಿರುವ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಕಳೆದೆರಡು ವರ್ಷಗಳಿಂದಲೂ ಅಕ್ರಮ ಅಕ್ಕಿ ಸಾಗಾಟ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಅಕ್ಕಿಗೆ ಸಾಕ್ಷಿ ಸಮೇತ ಪುಷ್ಟಿ ದೊರಕುತ್ತಿದ್ದರೂ ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಾರ್ವಜನಿಕರು ತಾಲೂಕಾಡಳಿತವನ್ನು ಆಗ್ರಹಿಸಿದ್ದಾರೆ.
ಉಚಿತವಾಗಿ ದೊರಕುವ ಅಕ್ಕಿಯನ್ನು ಪಡಿತರ ಫಲಾನುಭವಿಗಳು ಸ್ವಂತಕ್ಕೆ ಬಳಸಿಕೊಳ್ಳದೆ ಅವುಗಳನ್ನು ಕಾಳಸಂತೆಯಲ್ಲಿ ಕೆಜಿಗೆ 14 ರೂ.ನಂತೆ ಮಾರಾಟ ಮಾಡುತ್ತಿರುವ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಬಿಸಿ ಮುಟ್ಟಿದರೂ ನಿಲ್ಲದ ವ್ಯವಹಾರ
ಹಲವಾರು ಬಾರಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಹೊರ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು, ಆಹಾರ ಇಲಾಖೆ ಅಧಿಕಾರಿಗಳು ಹಿಡಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರಲ್ಲಿ ಸಿಕ್ಕಿ ಹಾಕಿಕೊಂಡವರು ಇನ್ನೂ ಕೋರ್ಟಗೆ ಅಲೆದಾಡುತ್ತಿದ್ದಾರೆ. ಹೀಗಿದ್ದರೂ ಅಕ್ರಮ ಸಾಗಾಟ ನಿಯಂತ್ರಣಕ್ಕೆ ಬಂದಿಲ್ಲವೆನ್ನುವದು ಇಂದಿನ ಘಟನೆಯಿಂದ ದೃಢಪಟ್ಟಂತಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಅಕ್ರಮದಲ್ಲಿ ಭಾಗಿಯಾದವರನ್ನು ಮಟ್ಟ ಹಾಕಿದರೆ ಮಾತ್ರ ಗೋಲ್‌ಮಾಲ್ ತಡೆಗಟ್ಟಬಹುದು ಎಂದು ಕೆಲವು ಅಂತ್ಯೋದಯ ಫಲಾನುಭವಿಗಳು ಹೇಳುತ್ತಿದ್ದಾರೆ.

Previous articleನೂತನ ಶಾಸಕರಿಗೆ ನಾಳೆಯಿಂದ ತರಬೇತಿ ಶಿಬಿರ
Next articleಮಹಿಷವಾಡಗಿ ಸೇತುವೆ ವಿಳಂಬಕ್ಕೆ ಆಕ್ರೋಶ