ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಪ್ರಕ್ರಿಯೆ ಆಮೆಗತಿಯಲ್ಲಿಸಾಗುತ್ತಿರುವದು ಇಂದು ನಿನ್ನೆಯದಲ್ಲ. ಆದರೂ ಜಮಖಂಡಿ ಹಾಗು ರಬಕವಿ-ಬನಹಟ್ಟಿ ತಾಲೂಕಿನ ಗ್ರಾಮಗಳ ರೈತರಿಂದ ಪಡೆದ ಭೂಸ್ವಾಧೀನ ಪ್ರಕ್ರಿಯೆಯ ಹಲವಾರು ಸಭೆಗಳು ಅಂತ್ಯಗೊಂಡು ಇದೀಗ ಆಯಾ ರೈತರಿಗೆ ಸರ್ಕಾರದ ಕೆ-2 ಫೈಲ್ ಮೂಲಕ ನೇರವಾಗಿ ರೈತರ ಖಾತೆಗೆ ಹಣ ವರ್ಗಾವಣೆ ಮಾಡುವಲ್ಲಿ ಕಾರಣವಾಗಿದ್ದು, ಜಗದಾಳ ಗ್ರಾಮದಲ್ಲಿ 61 ಫಲಾನುಭವಿಗಳ ಪೈಕಿ 24 ಫಲಾನುಭವಿಗಳಿಗೆ ಸುಮಾರು 3 ಕೋಟಿ ರೂ.ಗಳಷ್ಟು ಪರಿಹಾರವನ್ನು ಒದಗಿಸುವಲ್ಲಿ ಕಾರಣವಾಯಿತು.
ಜಗದಾಳ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಫಲಾನುಭವಿ ರೈತರಿಗೆ ಮಾಹಿತಿ ಒದಗಿಸಿದ ಜಮಖಂಡಿ ವಿಭಾಗಾಧಿಕಾರಿ ಸಂತೋಷ ಕಾಮಗೌಡ ಮಾತನಾಡಿ, ಯಾವದೇ ಗೊಂದಲ ಹಾಗು ಮಧ್ಯವರ್ತಿಗಳಿಲ್ಲದೆ ನೇರವಾಗಿ ಆಯಾ ಫಲಾನುಭವಿ ರೈತರಿಗೆ ಪರಿಹಾರವನ್ನು ಒದಗಿಸುವ ಸಲುವಾಗಿ ಗ್ರಾಮಕ್ಕೆ ಆಗಮಿಸಿ ಸರ್ಕಾರದ ಮುಖೇನ ಒದಗಿಸಲಾಗುತ್ತಿದೆ ಎಂದರು.
ಜಗದಾಳ ಗ್ರಾಮದಲ್ಲಿ ಒಟ್ಟು 61 ಫಲಾನುಭವಿಗಳಿದ್ದು, ಕೆಲವರು ಬ್ಯಾಂಕ್ ಹೊಂದದೆ, ವಯಕ್ತಿಕ ತಕರಾರು ಸೇರಿದಂತೆ ಇತರೆ ಸಮಸ್ಯೆಗಳಿಂದ ಪರಿಹಾರ ಒದಗಿಸುವಲ್ಲಿ ವಿಳಂಬವಾಗಿದೆ. ವಾರದೊಳಗಾಗಿ ಅವುಗಳನ್ನೂ ಸರಿಪಡಿಸಿ ಪರಿಹಾರ ಒದಗಿಸುವದಾಗಿ ಕಾಮಗೌಡ ತಿಳಿಸಿದರು.
ರಬಕವಿ-ಬನಹಟ್ಟಿ ತಾಲೂಕಿನ ಒಟ್ಟು ಏಳು ಗ್ರಾಮಗಳಲ್ಲಿನ 600 ಕ್ಕೂ ಅಧಿಕ ರೈತರಿಗೆ 75 ರಿಂದ 80 ಕೋಟಿ ರೂ.ಗಳಷ್ಟು ಪರಿಹಾರ ದೊರಕಲಿದೆ.
ಈಗಾಗಲೇ ಪರಿಹಾರ ಒದಗಿಸುವ ಪ್ರಕ್ರಿಯೆ ಪ್ರಾರಂಭವಿದ್ದು, ನಾಳೆ ಶುಕ್ರವಾರ ಹೊಸೂರಿನ ಫಲಾನುಭವಿಗಳಿಗೆ ಒದಗಿಸಲಿದ್ದು, ಫೆ.13 ರಂದು ಸಿದ್ಧಾಪೂರ, ಫೆ.15 ರಂದು ಜಾಲಗೇರಿ, ಫೆ.17 ರಂದು ತೇರದಾಳದಲ್ಲಿ ಕೆ-2 ಮೂಲಕ ನೇರವಾಗಿ ರೈತರ ಖಾತೆಗೆ ಹಣ ಜಮಾವಣೆಯಾಗಲಿದೆ ಎಂದರು. ಸರ್ಕಾರಕ್ಕೆ 10 ದಾಖಲೆಗಳನ್ನು ಒದಗಿಸಬೇಕಾಗಿರುವ ರೈತರಿಗೆ ಸುಲಭವಾಗುವ ನಿಟ್ಟಿನಲ್ಲಿ ಋಣಭಾರ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆಯಿಂದ ನೇರವಾಗಿ ರೈತರಿಗೆ ಒಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.