ನಮ್ಮ ಸರ್ಕಾರದ ನಿರ್ಣಯಕ್ಕೆ ಸಿಕ್ಕ ಜಯ

0
13
ಬೊಮ್ಮಾಯಿ

ನವದೆಹಲಿ: ಎಸ್ಸಿ ಸಮುದಾಯಗಳಿಗೆ ಒಳ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿರುವುದು ನಮ್ಮ ಸರ್ಕಾರದ ನಿರ್ಣಯಕ್ಕೆ ಸಿಕ್ಕ ಜಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಅತ್ಯಂತ ಹಿಂದುಳಿದ ಎಸ್ಸಿ ಸಮುದಾಯಗಳಿಗೆ ಶತಮಾನಗಳಿಂದಲೂ ಅನ್ಯಾಯ ಆಗಿರುವುದನ್ನು ಮನಗಂಡು, ಎಸ್ಸಿ ಸಮುದಾಯ ಸುಮಾರು ಮೂರು ನಾಲ್ಕು ದಶಕಗಳಿಂದ ಆಂತರಿಕ ಮೀಸಲಾತಿಯನ್ನು ಬೇಡಿಕೆ ಇಟ್ಟು ಹೋರಾಟ ಮಾಡುತ್ತಿದ್ದರು.
ನಮ್ಮ ಸರ್ಕಾರ ಆಂತರಿಕ ಮೀಸಲಾತಿಯನ್ನು ಸಂಪುಟದಲ್ಲಿ ಒಪ್ಪಿ, ಸರ್ಕಾರಿ ಆದೇಶವನ್ನು ಮಾಡಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ನಿಲುವನ್ನು ಇಂದು ಏಳು ನ್ಯಾಯಾಧೀಶರನ್ನೊಳಗೊಂಡ ಸರ್ವೋಚ್ಚ ನ್ಯಾಯಾಲಯದ ಸಂವಿಧಾನಿಕ ಪೀಠ ಎತ್ತಿ ಹಿಡಿದಿರುವುದು ಐತಿಹಾಸಿಕ ತೀರ್ಪು ಮತ್ತು ಎಸ್ಸಿ ಜನಾಂಗದ ಒಳ ಮೀಸಲಾತಿ ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದ್ದಾರೆ.
ಇದಕ್ಕೆ ಸಹಕಾರ ನೀಡಿದ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಂದು ಎಸ್ಸಿ ಸಮುದಾಯದ ಸಚಿವರಾದಂತಹ ಗೋವಿಂದ ಕಾರಜೋಳ ಮತ್ತು ನನ್ನ ಸಚಿವ ಸಂಪುಟದ ಎಲ್ಲ ಸದಸ್ಯರಿಗೆ ಮತ್ತು ರಾಜ್ಯ ಬಿಜೆಪಿಯ ಎಲ್ಲ ನಾಯಕರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ತದ್ವಿರುದ್ಧವಾಗಿ ಸಂವಿಧಾನದ ಆರ್ಟಿಕಲ್ 341ಕ್ಕೆ ತಿದ್ದುಪಡಿ ಮಾಡುವುದು ಅತ್ಯಂತ ಅಗತ್ಯತೆಯೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಅದನ್ನು ಇಂದು ಸರ್ವೋಚ್ಚ ನ್ಯಾಯಾಲಯ ತಳ್ಳಿ ಹಾಕಿ ರಾಜ್ಯ ಸರ್ಕಾರ ಎಸ್ಸಿ ಜನಾಂಗಕ್ಕೆ ವಂಚನೆ ಮಾಡುವ ನಿರ್ಣಯವನ್ನು ತಳ್ಳಿ ಹಾಕಿದೆ. ಈಗ ತಮ್ಮ ಸರ್ಕಾರ ಮಾಡಿರುವ ಶಿಫಾರಸ್ಸಿಗೆ ಜಯ ಸಿಕ್ಕಿದೆ ಎಂಬ ಸುಳ್ಳನ್ನು ಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.
ನನ್ನ ಮುಖ್ಯಮಂತ್ರಿ ಕಾಲದಲ್ಲಿ ಸಾಮಾಜಿಕ ನ್ಯಾಯ ಅತ್ಯಂತ ತಳ ಸಮುದಾಯಕ್ಕೆ ಸಿಗಬೇಕೆನ್ನುವ ನೀತಿಗೆ ಮತ್ತು ನಿರ್ಣಯಕ್ಕೆ ಜಯ ಸಿಕ್ಕಿರುವಂಥದ್ದು ನನಗೆ ಸಮಾಧಾನ ತಂದಿದೆ ಎಂದು ತಿಳಿಸಿದ್ದಾರೆ.

Previous articleರೈತ ಸಂಘಟನೆಗಳಿಂದ ೧೫ರಂದು ಟ್ರ್ಯಾಕ್ಟರ್ ರ‍್ಯಾಲಿ
Next articleಕಂಚು ಗೆದ್ದ ಸ್ವಪ್ನಿಲ್‌ಗೆ ₹ 1ಕೋಟಿ ಬಹುಮಾನ ಘೋಷಣೆ