ಬೆಂಗಳೂರು: ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡದು ಹಾಕಬೇಕು ಎಂದು ನೀಡಿದ್ದ ಹೇಳಿಕೆಯನ್ನು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಸಮರ್ಥಿಸಿಕೊಂಡಿದ್ದಾರೆ. ಇಂದು ಟ್ವೀಟ್ ಮಾಡಿರುವ ಅಶ್ವಥ್ ನಾರಾಯಣ್ ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಾರಿ ಕಾಂಗ್ರೆಸ್ಸನ್ನು ಸೋಲಿಸಬೇಕು ಎಂಬರ್ಥದಲ್ಲಿ ಹೇಳಿದ ಮಾತಿಗೆ “ಕೋವಿ ಹಿಡಿದು ಬನ್ನಿ” ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ನಮಗೆ ಮತಯಂತ್ರವೇ ಕೋವಿ, ಮತದಾರರು ಕಾಂಗ್ರೆಸ್ ವಿರುದ್ದ ಒತ್ತುವ ಒಂದೊಂದು ಮತಗಳೂ ಒಂದೊಂದು ಬುಲೆಟ್‌ಗಳೇ. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಅಂತಿಮ ಮೊಳೆ ಹೊಡೆಯಲು ಜನತೆಯೇ ತೀರ್ಮಾನಿಸಿದ್ದಾರೆ.
ಇತಿಹಾಸ ತಿರುಚಿ, ಮತಾಂಧ ಟಿಪ್ಪುವಂಥವರನ್ನು ಸ್ವಾತಂತ್ರ್ಯ ಹೋರಾಟಗಾರರನ್ನಾಗಿ ಬಿಂಬಿಸಿದ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರಿಗೆ ನನ್ನ ಮಾತನ್ನು ತಿರುಚಿ ಬಿತ್ತರಿಸುವುದು ಐದು ನಿಮಿಷದ ಕೆಲಸ. ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಕ್ಷೇತ್ರ ಸಿಗದೇ, ಮಾನಸಿಕವಾಗಿ ಕುಗ್ಗಿರುವ ಸಿದ್ದರಾಮಯ್ಯ ಅವರಿಗೆ ಕ್ಷುಲ್ಲಕ ವಿಷಯಗಳೇ ಆಸರೆಯಾಗಿದೆ ಎಂದಿದ್ದಾರೆ.