ದೇಶಭ್ರಷ್ಟರು ಪ್ರಭುತ್ವ-ಸರ್ಕಾರಕ್ಕೆ ಸವಾಲು ಹಾಕುತ್ತಿದ್ದಾರೆ. ಕ್ರಿಮಿನಲ್‌ಗಳು, ರೇಪಿಸ್ಟ್‌ಗಳು ಕಾನೂನು, ನ್ಯಾಯ ಅಣಕಿಸುತ್ತಿದ್ದಾರೆ. ಜನ ಸರ್ಕಾರದ ನೀತಿ ನಿರ್ಧಾರ, ದಮನಕಾರಿ ಪ್ರವೃತ್ತಿಯ ಬಗ್ಗೆ ಅಸಹ್ಯಪಟ್ಟುಕೊಳ್ಳುತ್ತಿದ್ದಾರೆ!
ಕಳೆದೊಂದು ವಾರದ ಮೂರು ವಿದ್ಯಮಾನಗಳು ದೇಶಾದ್ಯಂತ ಫಾಸಿಗೊಳಿಸುವಂತಿವೆ.
ಸಾರ್ವಜನಿಕರ ದುಡ್ಡನ್ನು ದೋಚಿ ಬ್ಯಾಂಕುಗಳಿಗೆ, ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸಿ ದೇಶದಿಂದ ಪರಾರಿಯಾಗಿರುವ ಉದ್ಯಮಿಗಳಿಬ್ಬರು ‘ಹೇ ಹೇ, ನಾವು ದೇಶಭ್ರಷ್ಟರು, ಭಾರತದ ಪ್ರಖ್ಯಾತ ಪಲಾಯನವಾದಿಗಳು, ಭಾರತದ ಇಂಟರ್‌ನೆಟ್ ಕ್ಷೇತ್ರವನ್ನು ನಾವು ಕ್ರಾಷ್ ಮಾಡುತ್ತಿದ್ದೇವೆ; ನಾವು ಪರಾರಿಯಾದವರು ಕಣ್ರೀ’ ಎಂದು ಪ್ರಭುತ್ವದ ಅಸಹಾಯಕತೆಯನ್ನು ಕಳೆದ ವಾರ ಆಣಕಿಸಿ ನಕ್ಕರು. ಸಾವಿರಾರು ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆದ ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಭಾರತ ಸರ್ಕಾರವನ್ನು ಅಣಕಿಸುವ ಧಾಟಿಯಲ್ಲಿ ವಿಜಯ ಮಲ್ಯರ ಹುಟ್ಟುಹಬ್ಬಕ್ಕೆ ಗ್ರಾಂಡ್ ಪಾರ್ಟಿ ಮಾಡಿಸಿ, ‘ನಮ್ಮನ್ನೇನು ಮಾಡಿಕೊಂಡಿರಿ. ಹೇ ಹೇ’ ಎಂದು ಮದಿರೆ ಮಾನಿನಿಯರ ಮೋಜಿನಲ್ಲಿ ಬಹಿರಂಗವಾಗಿ ಹೇಳಿಕೊಂಡರು. ಅವರ ಹಾವ ಭಾವಗಳೆಲ್ಲ ಐವತ್ತಾರು ಇಂಚಿನ ಎದೆ ಇದೆ (ಛಪ್ಪನ್ ಇಂಚ್ ಕಿ ಸೀನಾ) ಎಂದು ತೋರಿಸಿದ.
ಈ ವಂಚಕರನ್ನು ಭಾರತಕ್ಕೆ ಎಳೆತಂದು ಪೈಸೆ ಪೈಸೆ ವಸೂಲು ಮಾಡುತ್ತೇನೆಂದು ಹೇಳಿಕೊಂಡ ಪ್ರಧಾನಿ ಹಾಗೂ ಅವರ ಸರ್ಕಾರಕ್ಕೆ ಸವಾಲು ಹಾಕಿದಂತಿದ್ದವು!
ಒಂದು ದೇಶಕ್ಕೆ, ದೇಶದ ಜನಕ್ಕೆ ಉತ್ತರದಾಯಿತ್ವ ಹೊಂದಿದ್ದೇವೆ ಎಂದು ಘೋಷಿಸಿಕೊಂಡ ಸರ್ಕಾರಕ್ಕೆ ಕ್ರಿಮಿನಲ್‌ಗಳು, ದೇಶಭ್ರಷ್ಟರೇ ಸವಾಲು ಹಾಕುವಂತಾಯಿತೇ? ಎರಡು ದಿನ ಬಿಟ್ಟು ಲಲಿತ್ ಮೋದಿಯೇನೋ ಕ್ಷಮೆ ಯಾಚಿಸಿರಬಹುದು. ಆದರೆ ಅವರ ಅಂತರ್ಯದ ಠೇಂಕಾರ, ಯಾರೇನು ಮಾಡಿಯಾರು ಎನ್ನುವ ಧಾರ್ಷ್ಟ್ಯ ಸುಳ್ಳಲ್ಲವಲ್ಲ. ಇದಕ್ಕೆ ಇಡೀ ಕೇಂದ್ರ ಸರ್ಕಾರ ದಿಟ್ಟ ಉತ್ತರ ನೀಡಬೇಕಿತ್ತು. ಸವಾಲು ಸ್ವೀಕರಿಸಿ ಅವರನ್ನು ಎಳೆದು ತರುವ ರಾಜತಾಂತ್ರಿಕ ಕಾರ್ಯತಂತ್ರಗಳನ್ನು ಹೆಣೆಯಬೇಕಿತ್ತು. ಯಾಕೋ ಏನೋ ಅವರ ಅಣಕಿಗೆ, ಅಪಹಾಸ್ಯಕ್ಕೆ ಯಥಾಪ್ರಕಾರ ತಣ್ಣನೆಯ ಉತ್ತರ. ‘ನಾವು ಅವರನ್ನು ಭಾರತಕ್ಕೆ ಕರೆತರುವ ಯತ್ನದಲ್ಲಿ ತೊಡಗಿದ್ದೇವೆ. ಪ್ರಕ್ರಿಯೆಯಲ್ಲಿ ಯಶಸ್ವಿಯಾಗುತ್ತೇವೆ. ಅವರಿಂದ ಸಾರ್ವಜನಿಕ ಬ್ಯಾಂಕುಗಳಿಗೆ ಆಗಿರುವ ಹಾನಿಯನ್ನು ವಸೂಲು ಮಾಡುತ್ತೇವೆ’ ಎನ್ನುವ ಸಪ್ಪೆ ಪ್ರತಿಕ್ರಿಯೆಯಷ್ಟೇ ಹೊರಬಂತು. ಅದೂ ವಿದೇಶಾಂಗ ಇಲಾಖೆಯ ವಕ್ತಾರರಿಂದ ಮಾತ್ರ!
2019ರ ಏಪ್ರಿಲ್‌ನಲ್ಲಿ ಪ್ರಧಾನಿಗಳೇ ಸಾರ್ವಜನಿಕರೆದುರು ‘ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿರಲಿ. ಅವರನ್ನು ಎಳೆತಂದು ಪೈಸಾ ಪೈಸಾ ವಸೂಲು ಮಾಡುತ್ತೇನೆ. ಈ ನೆಲದಲ್ಲಿ ಲೂಟಿಕೋರರಿಗೆ, ಸಾರ್ವಜನಿಕ ಹಣವನ್ನು ಕೊಳ್ಳಿ ಹೊಡೆಯುವವರಿಗೆ ಅವಕಾಶ ನೀಡಲಾರೆ’ ಎಂದಿದ್ದರು.
ಹಿಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ತಿನಲ್ಲೇ ಸ್ಪಷ್ಟನೆ ನೀಡಿ, 9 ಸಾವಿರ ಕೋಟಿ ರೂ. ಸಾರ್ವಜನಿಕ ಬ್ಯಾಂಕುಗಳಿಗೆ ನಷ್ಟ ಮಾಡಿದ ವಿಜಯ ಮಲ್ಯ, 2.5 ಸಾವಿರ ಕೋಟಿ ವಂಚಿಸಿದ ಲಲಿತ್ ಮೋದಿಯವರ ಆಸ್ತಿ ಪಾಸ್ತಿಯನ್ನು ಮುಟ್ಟುಗೋಲು ಹಾಕಿ ಒಂದು ವರ್ಷದ ಒಳಗೆ ಇಬ್ಬರನ್ನೂ ಭಾರತಕ್ಕೆ ಎಳೆದು ತರುವುದಾಗಿ ಹೇಳಿದ್ದರು.
ಲಲಿತ್ ಮೋದಿ ದೇಶ ಬಿಟ್ಟು ಹೋಗಿ ಹದಿನೈದು-ಹದಿನಾರು ವರ್ಷವಾಯಿತು. ವಿಜಯ್ ಮಲ್ಯ ಹೋಗಿ ಒಂಬತ್ತು ವರ್ಷವಾಯಿತು. ಈಗವರು ‘ನಾವು ದೇಶಭ್ರಷ್ಟರು’ ಎಂದು ಪ್ರಭುತ್ವವನ್ನು ಅಣಕಿಸುವಷ್ಟು ಬೆಳೆದಿದ್ದಾರೆ. ಇಂಗ್ಲೆಂಡಿನಲ್ಲಿ ಅವರ ಮೋಜು ಮಸ್ತಿ, ವೈಯಕ್ತಿಕ ವ್ಯವಹಾರ, ದಂಧೆಗಳಿಗೆ ಸ್ವಲ್ಪವೂ ತೊಂದರೆಯಾಗಿಲ್ಲ.
ದೇಶವೇ ತಲೆತಗ್ಗಿಸುವಂತೆ ಮಾಡಿದ ಉನ್ನಾವೋ ಘಟನೆಯ ಆರೋಪಿ (ಕೆಳ ನ್ಯಾಯಾಲಯ ದೋಷಿ ಎಂದು ತೀರ್ಪಿತ್ತ), ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ದೇಶದ ನ್ಯಾಯಾಂಗ ಮತ್ತು ಕಾನೂನನ್ನು ಕೊಂಡುಕೊಳ್ಳುವ ರೀತಿಯಲ್ಲಿ ದರ್ಪ ಮೆರೆದಿದ್ದರು. ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ, ತನ್ಮೂಲಕ ಆಕೆಯ ಕುಟುಂಬದ ಸರ್ವನಾಶ, ಬೆಂಬಲಿಗರ ಹತ್ತಿಕ್ಕುವಿಕೆ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಜೀವನಪರ್ಯಂತ ಜೈಲಿನಲ್ಲೇ ಇರಬೇಕೆಂಬ ಆದೇಶ ಹೊರಡಿಸಿತ್ತು. ಅದಕ್ಕೆ ಹೈಕೋರ್ಟ್, ಕೆಳ ನ್ಯಾಯಾಲಯದ ಶಿಕ್ಷೆಯನ್ನೇ ತಡೆಹಿಡಿದು ಆತನ ಬಿಡುಗಡೆಗೆ ಆದೇಶಿಸಿತ್ತು! ಸ್ವತಃ ಸಿಬಿಐ ನಡೆಸಿರುವ ತನಿಖೆ, ಆತನ ಮೇಲಿರುವ ಆರೋಪಗಳು ಸಾಬೀತಾದರೂ ತಾಂತ್ರಿಕ ಕಾರಣ ಮುಂದೊಡ್ಡಿ ನೀಡಿರುವ ಹೈಕೋರ್ಟ್ ಆದೇಶ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸಂತ್ರಸ್ತ ಮಹಿಳೆ ಸರ್ವೋಚ್ಚ ನ್ಯಾಯಾಲಯದ ಮುಂದೆ ಸ್ವತಃ ಪ್ರತಿಭಟನೆಗೆ ಇಳಿದಾಗ ಅವಳನ್ನೇ ದಬ್ಬಿ, ಹಿಂಸೆಗಿಳಿದ ಪೊಲೀಸರ ಕ್ರೌರ್ಯವಂತೂ ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿದೆ. ದುರಂತವೆಂದರೆ, ಉತ್ತರ ಪ್ರದೇಶ ಸರ್ಕಾರ ಈ ದಮನಕಾರಿ ಘಟನೆಗೆ ಒಂದು ಸ್ಪಷ್ಟೀಕರಣ ಅಥವಾ ಅದಕ್ಕೊಂದು ಕಾನೂನುಬದ್ಧ ಪ್ರಕ್ರಿಯೆ ಮಾಡುವ ಯಾವ ನಡವಳಿಕೆಯನ್ನೇ ತೋರಿಲ್ಲ!
ಇನ್ನೂ ದುರಂತವೆಂದರೆ ಈ ಘಟನೆಯಿಂದ ದೇಶದ ಜನ ಸಾರ್ವಜನಿಕವಾಗಿ ಆಕ್ರೋಶ ತೋಡಿಕೊಳ್ಳುತ್ತ, ಬೀದಿಗಿಳಿದು ಭಿತ್ತಿಚಿತ್ರಗಳ ಮೂಲಕ ಪ್ರದರ್ಶನ-ಪ್ರತಿಭಟನೆಗಳನ್ನು ನಡೆಸಿದಾಗ್ಯೂ ನ್ಯಾಯಾಲಯ, ನ್ಯಾಯಾಧೀಶರ ಮುಖ ಉಳಿಸಿಕೊಳ್ಳುವ ಪ್ರಯತ್ನ ಮುಂದುವರಿಯಿತು.
ಈಗ ಸರ್ವೋಚ್ಚ ನ್ಯಾಯಾಲಯ ಮೇಲ್ಮನವಿ ಸ್ವೀಕರಿಸಿ, ‘ರಾಜಕೀಯ ನಮಗೆ ಬೇಕಿಲ್ಲ’ ಎಂದು ಹೈಕೋರ್ಟ್ ನೀಡಿರುವ ಸೆಂಗರ್ ಬಿಡುಗಡೆ ಆದೇಶಕ್ಕೆ ತಡೆ ನೀಡಿ, ಯಾವುದೇ ಕಾರಣಕ್ಕೂ ಈ ರೇಪಿಸ್ಟ್‌ನನ್ನು ಹೊರಬಿಡದಂತೆ ನಿರ್ದೇಶನ ನೀಡಬೇಕಾಯಿತು. ಇದರಿಂದ ಸ್ವಲ್ಪ ಮರ್ಯಾದೆ, ಘನತೆಗಳು ಉಳಿಯುವಂತಾಯಿತು. ಉನ್ನಾವೋ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಕೊಟ್ಟಿರುವ ಧನಾತ್ಮಕ ಸಮಾಧಾನದ ನಡುವೆ ಘಟನೆಯ ಒಂದು ನಕಾರಾತ್ಮಕ ಮುಖವನ್ನು ಮರೆಯುವಂತಿಲ್ಲ. ಆದೆಂದರೆ, ತಾವು ಏನು ಮಾಡಿದರೂ ನಡೆಯುತ್ತದೆ; ಸರ್ಕಾರ, ನ್ಯಾಯಾಂಗ, ಕಾನೂನು ಎಲ್ಲವನ್ನೂ ಖರೀದಿಸಬಹುದು ಎನ್ನುವುದನ್ನು ಕೆಲ ದುಷ್ಟ ಶಕ್ತಿಗಳು ಬೆತ್ತಲು ಕುಣಿತದೊಂದಿಗೆ ದೇಶಕ್ಕೆ ತೋರಿಸಿದ್ದು!
‘ಬೇಟಿ ಬಚಾವೋ’ ಘೋಷಿಸುವ, ಯತ್ರ ನಾರಂತು ಪೂಜ್ಯತೆ…ಎಂದು ಪೂಜಿಸುತ್ತಿರುವ ಈ ದೇಶದಲ್ಲಿ ಇಂತಹ ದುಷ್ಟ ಘಾತುಕರು ಅಟ್ಟಹಾಸ ಮೆರೆಯುತ್ತಿದ್ದಾರೆ ಎನ್ನಲು ಇನ್ಯಾವ ಉದಾಹರಣೆ ಬೇಕು?
ಆಳುವ ಸರ್ಕಾರದ ನೀತಿ, ಧೋರಣೆ ಹೇಗಿರುತ್ತದೆ ಎನ್ನುವುದನ್ನು ಬಯಲುಗೊಳಿಸಿದ ಇನ್ನೊಂದು ಪ್ರಕರಣ ಅರಾವಳಿ ಪರ್ವತ ಶ್ರೇಣಿಯದ್ದು, ಸರ್ಕಾರಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಬಲ್ಲೆವು ಎಂಬುದನ್ನು ತೋರಿಸಲು ಹೊರಟಿದ್ದ ಮಾಫಿಯಾ ಅರಾವಳಿ ಪರ್ವತ ಶ್ರೇಣಿಯನ್ನು ದಮನಗೊಳಿಸುವ ಹುನ್ನಾರಕ್ಕೆ ಇಳಿದಿತ್ತು. ಯಾವ ರೀತಿಯ ಪರಿಸರ ಮಾಲಿನ್ಯವೂ ಆಗಲ್ಲ ಎಂದು ದೆಹಲಿ ಮಾಲಿನ್ಯ, ಉತ್ತರ ಭಾರತದ ಮಾಲಿನ್ಯಗಳೆಲ್ಲ ಸರಾಗವಾಗಿ ಯಾವ ಅಡೆತಡೆ ಇಲ್ಲದೇ ಹಾರಿ ಹೋಗಿ ಶುದ್ಧವಾಗುತ್ತವೆ ಎನ್ನುವ ಮಹಾನ್ ಸಲಹೆಯನ್ನು ಈ ಮಾಫಿಯಾ ಕೊಡಿಸಿತ್ತು!
ಎರಡು ಸಾವಿರ ಕೋಟಿ ವರ್ಷಗಳ ಪರ್ವತ ಶ್ರೇಣಿಯನ್ನು ಬಗೆದು ಖನಿಜ ತೆಗೆಯಲು ಗಣಿ ಗುತ್ತಿಗೆ ಕಂಪನಿಗಳಿಗೆ ನೀಡುವ ಹುನ್ನಾರಕ್ಕೆ ಕೇಂದ್ರ ಪರಿಸರ ಇಲಾಖೆ, ಅರಣ್ಯ ಇಲಾಖೆ ಕೈಜೋಡಿಸಿ ಈಗ ಅಪಹಾಸ್ಯಕ್ಕೆ ಈಡಾಗಿವೆ. ಒಂದು ನೂರು ಮೀಟರ್ ಕಡಿಮೆ ಎತ್ತರದ ಎಲ್ಲ ಅರಾವಳಿ ಪರ್ವತಗಳಲ್ಲಿ ಗಣಿಗಾರಿಕೆಯಿಂದ ಯಾವ ಹಾನಿಯೂ ಇಲ್ಲ ಎನ್ನುವ ಪ್ರಮಾಣ ಪತ್ರವನ್ನು ಪರಿಸರ ಇಲಾಖೆ ಅಂಗೀಕರಿಸಿ, ಸರ್ವೋಚ್ಚ ನ್ಯಾಯಾಲಯದ ಒಪ್ಪಿಗೆ ಪಡೆದಾದ ಮೇಲೆ ವಿವಾದಗಳು ಭುಗಿಲೆದ್ದವು. ಇಷ್ಟೆಲ್ಲ ಆದ ಮೇಲೆ ಈಗ ರಜಾಕಾಲದ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಕೋರ್ಟ್ ಆದೇಶವನ್ನು ಪರಾಮರ್ಶೆಗೆ ಒಳಪಡಿಸಿದ್ದಾರೆ. ತಜ್ಞರಿಂದ ವರದಿ ಪಡೆಯುವ ನಿರ್ದೇಶನ ಹೊರಡಿಸಿ, ತಡೆಯಾಜ್ಞೆ ನೀಡಿದ್ದಾರೆ.
ಎಷ್ಟು ಅಪಹಾಸ್ಯ ನೋಡಿ. ರಾಜ್ಯ-ದೇಶದ ವಿವಿಧ ಯೋಜನೆಗಳಿಗೆ ಪರಿಸರ ನಾಶವಾಗುತ್ತದೆ ಎನ್ನುವ ಸರ್ಕಾರ, ಹೇಗೆ ಲಾಭಕ್ಕಾಗಿ ಉದ್ಯಮಿಗಳ ಜೊತೆ ಕೈಜೋಡಿಸುತ್ತದೆ ಎನ್ನುವುದಕ್ಕೆ ಅರಾವಳಿ ಪ್ರಕರಣ ಸಾಕ್ಷಿ. ಉನ್ನಾವೋ ಹಾಗೂ ಅರಾವಳಿ ಘಟನೆಗಳಿಂದ ಮಣ್ಣು ಪಾಲಾಗಲಿದ್ದ ನ್ಯಾಯಾಂಗ ಮತ್ತು ದೇಶದ ಕಾನೂನು ವ್ಯವಸ್ಥೆಯ ಮರ್ಯಾದೆ ಈಗ ಸ್ವಲ್ಪ ಉಳಿಯುವಂತಾಗಿದೆ. ಆದರೆ ದೇಶಭ್ರಷ್ಟರು, ರೇಪಿಸ್ಟ್‌ಗಳು, ಸಾರ್ವಜನಿಕ ಸ್ವತ್ತುಗಳನ್ನು ಭಕ್ಷಿಸುವವರು, ಸರ್ಕಾರಕ್ಕೆ-ಪ್ರಭುತ್ವಕ್ಕೆ ಸವಾಲು ಎಸೆದು ಆಣಕಿಸುವಂತಾಯಿತಲ್ಲ; ದಕ್ಕಿಸಿಕೊಳ್ಳುವಂತಾಯಿತಲ್ಲ ಎಂಬುದೇ ವರ್ಷಾಂತ್ಯದ ದೊಡ್ಡ ವಿಷಾದ. ಎಂತಹ ಸ್ಥಿತಿ ಬಂತು ನೋಡಿ!?







