ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ
ಷಡ್ಯಂತ್ರ ಈ ಪದ ಇತ್ತೀಚಿನ ದಿನಗಳಲ್ಲಿ ಭಾರೀ ಬಳಕೆಯಾಗುತ್ತಿದೆ. ಜಾತಿಗಿಂತಲೂ ಹೆಚ್ಚು, ತಂತ್ರ-ಕುತಂತ್ರ-ಸಂಚು ಬಳಸುವ ಶಬ್ದಗಳಿಗಿಂತ ರಕ್ಷಣಾತ್ಮಕವಾಗಿ ಷಡ್ಯಂತ್ರ (ಷಟ್ ಅಂದರೆ ಆರು ತಂತ್ರ ಇತ್ಯಾದಿ) ಪದವನ್ನು ಬಳಸಲಾಗುತ್ತಿದೆ!
ಕೆಲ ದಿನಗಳ ಹಿಂದೆ ಗದಗ ಜಿಲ್ಲೆ ಶಿರಹಟ್ಟಿ-ಲಕ್ಷ್ಮೇಶ್ವರ ಶಾಸಕ ಡಾ. ಚಂದ್ರು ಲಮಾಣಿ ಐದು ಲಕ್ಷ ರೂಪಾಯಿ ಗುತ್ತಿಗೆದಾರನಿಂದ ಪಡೆಯುವಾಗ ಲೋಕಾಯುಕ್ತದ ಬಲೆಗೆ ಬಿದ್ದರು. ಅವರು ಹಾಗೂ ಅವರ ಇಬ್ಬರು ಆಪ್ತ ಸಹಾಯಕರನ್ನು ಬಂಧಿಸಿ ಈಗ ನ್ಯಾಯಾಂಗದ ಕಸ್ಟಡಿಗೆ ವಹಿಸಲಾಗಿದೆ.
ಆಗ ಬಂದ ಮೊದಲ ಪ್ರತಿಕ್ರಿಯೆ ಎಂದರೆ `ಇದರಲ್ಲಿ ಷಡ್ಯಂತ್ರವಿದೆ’ ಎಂಬುದು !
ಲಂಚ-ರುಷುವತ್ತು-ಅಕ್ರಮ-ಅವ್ಯವಹಾರ ಬಯಲಿಗೆಳೆಯುವಲ್ಲಿ, ಅದರಿಂದ ಅನ್ಯಾಯಕ್ಕೆ ಒಳಗಾದವರು ಅಥವಾ `ಮಹತ್ವಾಕಾಂಕ್ಷಿಗಳು’ ತಕ್ಕ ಪಾಠ ಕಲಿಸಲು ಇಲ್ಲವೇ ತಮ್ಮ ಹಿತ ಕಾದುಕೊಳ್ಳಲು ಸೂಕ್ತ ತಂತ್ರ ಹೆಣೆಯುವುದು, ಉಪಾಯ – ಯುಕ್ತಿಗಳನ್ನು ಹುಡುಕುವುದು ಸಹಜ. ಆದರೆ ಶಾಸಕರು, ಅವರ ಆಪ್ತ ಸಹಾಯಕರು ಲಂಚ ರುಷುವತ್ತು ಗಳಿಕೆಗೆ ತೊಡಗಿದ್ದು ತಪ್ಪಲ್ಲವೇ?
ಈ ವ್ಯವಹಾರ ನಡೆದಿದೆಯೋ ಇಲ್ಲವೋ, ಇದಕ್ಕೆ ಯಾರು ಕಾರಣೀಕರ್ತರು, ಯಾರ ಸಂಚು ಎನ್ನುವುದು ಪ್ರತ್ಯೇಕ ವಿಷಯವಾದರೆ, ವಾಸ್ತವವಾಗಿ ಲೋಕಾಯುಕ್ತ ಬಲೆಗೆ ಶಾಸಕ ಹಣ ಪಡೆಯುವಾಗ ಸಿಕ್ಕಿದ್ದಂತೂ ಸುಳ್ಳಲ್ಲವಲ್ಲ ! ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದರೆ, ಷಡ್ಯಂತ್ರ ಮಾಡುವಂತಹ ಪ್ರಕ್ರಿಯೆಗೆ ತಾವೇಕೆ ಸೂತ್ರದಾರರಾಗುತ್ತೀರಿ?
ನಮ್ಮ ಪ್ರತಿನಿಧಿ ಪ್ರಾಮಾಣಿಕ, ನಿಸ್ಪೃಹ ವ್ಯಕ್ತಿತ್ವದವನಾಗಿರಬೇಕು. ಸಾರ್ವಜನಿಕ ಕಾಳಜಿ ಕಳಕಳಿ, ಕ್ರಿಯಾಶೀಲತೆ ಹೊಂದಿರಬೇಕು. ನಮ್ಮ ನೋವು ನಲಿವನ್ನು ವಿಧಾನಸಭೆಯಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ, ಸರ್ಕಾರದ ಮಟ್ಟದಲ್ಲಿ ಪ್ರತಿಧ್ವನಿಸಬೇಕು ಎಂಬುದು ಜನಾಪೇಕ್ಷೆ.
ಶಾಸಕ ಕಮೀಷನ್ ವ್ಯವಹಾರ ನಡೆಸಿದರೆ ಅಥವಾ ಶಾಸಕರ ಏಕಪಕ್ಷೀಯ ನಡವಳಿಕೆ ಮತ್ತು ಸ್ವಯಂ ಆಕಾಂಕ್ಷೆ ಅತಿಯಾದರೆ ಜನ ಮೆಚ್ಚುವುದಿಲ್ಲ ಮತ್ತು ಬೆಳೆಸುವುದೂ ಇಲ್ಲ ಎನ್ನುವುದಕ್ಕೆ ಇದುವರೆಗಿನ ಅನೇಕ ಶಾಸಕರ, ಜನಪ್ರತಿನಿಧಿಗಳ ಲಂಚ-ರುಷುವತ್ತು ಪ್ರಕರಣಗಳ ನಿದರ್ಶನಗಳು ಸ್ಪಷ್ಟಪಡಿಸಿವೆ.
ಚಂದ್ರು ಲಮಾಣಿ ಈಗ ತನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎನ್ನುವುದು, ಉದ್ದೇಶಪೂರ್ವಕವಾಗಿ ಚಂದ್ರು ಲಮಾಣಿಯವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕರಾದ ಆರ್. ಅಶೋಕ, ಬೆಲ್ಲದ ಮುಂತಾದವರು ಆರೋಪಿಸುವುದರ ಹಿಂದೆ ಪಕ್ಷದ ಮಾನ ಮರ್ಯಾದೆ ಉಳಿಸಿಕೊಳ್ಳುವುದಷ್ಟೇ ಅವರ ಆದ್ಯತೆ ಎಂಬುದು ಸರ್ವವಿಧಿತ.
ಅದೇ ಸಚಿವ ಸೋಮಣ್ಣ ಅಷ್ಟೇ ಸ್ಪಷ್ಟವಾಗಿ, ಶಾಸಕ ಗುತ್ತಿಗೆದಾರನಿಂದ ಹಣ ಪಡೆಯುವುದನ್ನು ಖಂಡಿಸುತ್ತೇನೆ, ಈ ವರ್ತನೆಯನ್ನು ಬೆಂಬಲಿಸುವುದಿಲ್ಲ' ಎಂದು ಹೇಳಿದ್ದಾರೆ. ಈ ಮಧ್ಯೆ ಪ್ರಕರಣಕ್ಕೊಂದು ಜಾತಿಯ ಬಲ! ಶಾಸಕ ರಮೇಶ್ ಜಾರಕಿಹೊಳಿ,ದಲಿತ ಮತ್ತು ಹಿಂದುಳಿದ ವರ್ಗದ ಶಾಸಕರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ.
ಉದ್ದೇಶಪೂರ್ವಕವಾಗಿ ಭ್ರಷ್ಟಾಚಾರ ಆರೋಪ ಮಾಡಲಾಗುತ್ತಿದೆ. ಲೋಕಾಯುಕ್ತ ಬಳಸಿಕೊಳ್ಳಲಾಗುತ್ತಿದೆ’ ಎಂಬುದಾಗಿ ಜಾತಿ ಬಣ್ಣ ಲೇಪಿಸಿದ್ದಾರೆ. ಅಂದರೆ, ಲಮಾಣಿ ರಕ್ಷಿಸಲು ಈಗ ಮೇಲ್ಜಾತಿಯ ಅಥವಾ ಈ ಆ ಕ್ಷೇತ್ರದಲ್ಲಿ ಪ್ರಬಲರಾಗಿರುವವರ ಮೇಲೆ ಷಡ್ಯಂತ್ರದ ಹುನ್ನಾರದ ಆರೋಪ ಮಾಡುತ್ತಿದ್ದಾರೆ.
ಸಮಸ್ಯೆ ಇರುವುದು ಇಲ್ಲಲ್ಲ. ಲಮಾಣಿ ಸಮಾಜದವರೇ ಆದ ವಾಲ್ಮೀಕಿ ಸ್ವಾಮೀಜಿ ಶಾಸಕರ ವಿರುದ್ಧ ಮಾಡಿದ ಆರೋಪ ಮತ್ತು ವ್ಯಕ್ತಪಡಿಸಿದ ಆಕ್ರೋಶ ಈಗ ಎಲ್ಲೆಡೆ ಬಿತ್ತರವಾಗಿದೆ.
ಶಾಸಕರ ಮೇಲೆ ನಡೆದ ಲೋಕಾಯುಕ್ತ ದಾಳಿ, ವಶಪಡಿಸಿಕೊಂಡ ಹಣ ಭ್ರಷ್ಟಾಚಾರದ ಕಳಂಕದಿಂದ ಪಾರು ಮಾಡೀತೇ? ಅವರಿಗೆ ಕಾನೂನಾತ್ಮಕ ರಕ್ಷಣೆ ನೀಡೀತೇ? ಜನ ಒಪ್ಪಿಕೊಂಡಾರೆಯೇ? ಎಂಬುದು ಪ್ರಸ್ತುತ ಪ್ರಶ್ನೆಗಳು.
ಷಡ್ಯಂತ್ರ ಪದ ಕಳೆದ ಒಂದೂವರೆ ತಿಂಗಳಿಂದ ಭಾರೀ ಚಾಲ್ತಿಯಲ್ಲಿದೆ. ಲಮಾಣಿ ಪ್ರಕರಣ ನಡೆದ ಎರಡು ದಿನಗಳ ನಂತರ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾನು ಕುರುಬ. ಕುರಿ ಕಾಯುವವ. ರಾಜಕೀಯ ಜೀವನದಲ್ಲಿ ಸಾಕಷ್ಟು ಕಲ್ಲು ಮುಳ್ಳುಗಳನ್ನು ದಾಟಿದ್ದೇನೆ. ನನ್ನ ವಿರುದ್ಧ ಎಂತೆಂತಹ ಷಡ್ಯಂತ್ರಗಳು ನಡೆದಿವೆ, ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ...' ಎಂದು ತಮ್ಮಎಕ್ಸ್’ನಲ್ಲಿ ಬರೆದುಕೊಂಡರು!
ಮುಖ್ಯಮಂತ್ರಿಯೇ ಷಡ್ಯಂತ್ರದ ಮಾತನ್ನಾಡಿದರೆ? ಜಾತಿಯನ್ನು ತಮ್ಮ ರಕ್ಷಣೆಗೆ ಗುರಾಣಿ ಮಾಡಿಕೊಂಡರೆ? ಇದು 40 ವರ್ಷಗಳ ಕ್ರಿಯಾಶೀಲ ರಾಜಕಾರಣದಲ್ಲಿರುವ ಮುಖ್ಯಮಂತ್ರಿಗಳಿಗೆ ಅಗತ್ಯವಿತ್ತಾ? ಜಾತಿ ಬದಿಗಿಟ್ಟು ಪ್ರಜ್ಞಾವಂತ ಸಮಾಜದ ಎಲ್ಲರಲ್ಲೂ ಮೂಡಿರುವ ಪ್ರಶ್ನೆಗಳಿವು.
ಲಮಾಣಿ ಪರ ಮಾತನಾಡಿರುವ ರಮೇಶ್ ಜಾರಕಿಹೊಳಿ ಹನಿಟ್ರ್ಯಾಪ್, ಲೈಂಗಿಕ ಶೋಷಣೆ ಆರೋಪ ಹೊತ್ತು ಮಂತ್ರಿ ಪದವಿ ಬಿಡಬೇಕಾದಾಗ `ನನ್ನ ವಿರುದ್ಧ ಭಾರೀ ಷಡ್ಯಂತ್ರವೇ ನಡೆದಿದೆ’ ಎಂದು ಆರೋಪಿಸಿದ್ದರು. ಆಗಲೂ ಕೂಡ ಜನ ಮಹಿಳೆಯ, ಬಾಲಕಿಯೊಬ್ಬಳ ಲೈಂಗಿಕ ಶೋಷಣೆ ಕೃತ್ಯದ ಬಗ್ಗೆ ನಿಮ್ಮ ಸಮರ್ಥನೆ ಸರಿಯೇ? ನೈತಿಕವಾಗಿ ಒಪ್ಪುವಿರಾ ಎನ್ನುವ ಪ್ರಶ್ನೆಗಳಿಗೆ ಅವರಿಂದ ಉತ್ತರ ಬರಲಿಲ್ಲ!!
ಷಡ್ಯಂತ್ರ ಪದ ಬಹಳ ದುರ್ಬಳಕೆಯಾದ ಪದ. ಇದರೊಟ್ಟಿಗೆ ಜಾತಿ ಕೂಡ ಸೇರಿಕೊಂಡರೆ ಆ ಸಮಾಜ ಮತ್ತು ಜಾತಿ ಬಂಧುಗಳ ಸಹಾನುಭೂತಿ ಪಡೆಯಬಹುದು ಎಂಬ ತಂತ್ರ ಇದು ಅಷ್ಟೇ. ಕೆಜಿಎಫ್ ಶಾಸಕರಾಗಿದ್ದ ವೈ.ಸಂಪಂಗಿ ಶಾಸಕರ ಭವನದಲ್ಲೇ ಲಂಚ ಪಡೆಯುವಾಗ ಸಿಕ್ಕು ಬಿದ್ದರು. ಆಗಲೂ ಕೂಡ ಕೇಳಿದ್ದು, `ದಲಿತ ಶಾಸಕರೊಬ್ಬರ ಮೇಲಿನ ಷಡ್ಯಂತ್ರ’ ಮಾತುಗಳು.
ಕರ್ನಾಟಕ ಸೋಪು ಮತ್ತು ಮಾರ್ಜಕ ಸಂಸ್ಥೆಯ ಅಧ್ಯಕ್ಷರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಮತ್ತು ಅವರ ಕೆಎಎಸ್ ಅಧಿಕಾರಿ ಪುತ್ರನ ಮೇಲೆ ರೇಡ್ ಆಗಿ ಕೋಟ್ಯಂತರ ಲಂಚ ಪಡೆದು ಬಲೆಗೆ ಬಿದ್ದಾಗಲೂ ಕೇಳಿ ಬಂದದ್ದು, ಪಾರಾಗಲು ಬಳಸಿದ ತಂತ್ರ ಷಡ್ಯಂತ್ರ'. ಅಲ್ಲಿ ಜಾತಿ ವರ್ಕ್ಔಟ್ ಆಗಲಿಲ್ಲ. ಸಾಮಾನ್ಯವಾಗಿ ಜಾತಿ - ತಂತ್ರ - ಮಂತ್ರಗಳಿಗೆ ಒಲವು ತೋರದ ಸತೀಶ್ ಜಾರಕಿಹೊಳಿ ತಮ್ಮ ಸೋದರನ ಹನಿಟ್ರ್ಯಾಪ್ (ಲೈಂಗಿಕ ಶೋಷಣೆ) ಸಿಡಿ ಪ್ರಕರಣದಲ್ಲಿನಮ್ಮ ಕುಟುಂಬದವರ ಮೇಲೆ ಷಡ್ಯಂತ್ರ ನಡೆಯುತ್ತಿದೆ’ ಎಂದು ಯರ‍್ಯಾರನ್ನೋ ಗುರಿಯಾಗಿಟ್ಟುಕೊಂಡು ರಕ್ಷಣೆಗೆ ಇಳಿದಿದ್ದರು.
ಈಗ ಚಂದ್ರು ಲಮಾಣಿ ಟ್ರ್ಯಾಪ್ ಪ್ರಕರಣದ ನಂತರ, ಲಂಚ ಮತ್ತು ಕಮೀಷನ್ ಹಿಂದೂ ಇತ್ತು, ಈಗಲೂ ಇದೆ, ಮುಂದೂ ಇರುತ್ತದೆ' ಎಂದು ಸತೀಶ್ ಜಾರಕಿಹೊಳಿ ಲಘುವಾಗಿ ಹೇಳಿರುವುದು ಅತೀ ಹೆಚ್ಚು ಚಾಲ್ತಿಯಲ್ಲಿದೆ. ಹಲವರಿಗೆ ಇದೇ ಮಾತುಆಹಾರ’ವೂ ಆಗಿದೆ.
ಜಾತಿ ಬಳಕೆ, ಷಡ್ಯಂತ್ರದ ಜೊತೆಗೆ ಮತ್ತೊಂದು ಪ್ರತ್ಯಸ್ತ್ರ. ಸಚಿವ ತಿಮ್ಮಾಪುರ ವಿರುದ್ಧ ಅಧಿಕಾರಿಗಳ ವರ್ಗಾವಣೆ ಹಾಗೂ ಲಂಚದ ಆರೋಪ ಇತ್ತೀಚೆಗೆ ವಿಧಾನಸಭೆಯಲ್ಲೇ ಸ್ಫೋಟಗೊಂಡಿತ್ತು. ಆಗಲೂ ಬಳಕೆಯಾದದ್ದು ಷಡ್ಯಂತ್ರ ಮತ್ತು ದಲಿತ ಕಾರ್ಡ್. ಇದು ಸದ್ಯಕ್ಕಂತೂ ತಿಮ್ಮಾಪುರ ಅವರನ್ನು ರಾಜೀನಾಮೆ ಕೊಡುವುದನ್ನು ತಡೆ ಹಿಡಿದು `ರಕ್ಷಣೆ’ ನೀಡಿದೆ!!
ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ. ಜಗತ್ತಿನಾದ್ಯಂತ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಸ್ವೇಚ್ಛಾಚಾರ ಸಾಕಷ್ಟು ಜನರನ್ನು ಬಲಿ ಪಡೆದಿವೆ. ಷಡ್ಯಂತ್ರ ಪದದ ರಕ್ಷಣೆಯಡಿ ಹಲವರು ಬೀಗುತ್ತಲೂ ಇದ್ದಾರೆ. ಜನಪ್ರತಿನಿಧಿಗಳ ನಡವಳಿಕೆ ಮತ್ತು ವರ್ತನೆ ಸಾಕಷ್ಟು ಚರ್ಚೆಯಾಗಿರುವ ವಿಷಯ.
ದೇಶ-ರಾಜ್ಯದ ವಿವಿಧ ಸ್ಕ್ಯಾಮ್‌ಗಳನ್ನೇ ನೋಡಿ. ಗಣಿ ಹಗರಣ, ಲಾಲು ಪ್ರಸಾದ್ ಮೇವು ಹಗರಣ, ಟೆಲಿಕಾಂ – ಸ್ಪೆಕ್ಟ್ರಂ, ಒಲಿಂಪಿಕ್ಸ್, ಬೋಫೋರ್ಸ್, ಆದರ್ಶ ಹೌಸಿಂಗ್ ಹೀಗೆ ಸಾಕಷ್ಟು ಹಗರಣಗಳು ಬಯಲಾಗಿವೆ. ಆದರೆ ಎಲ್ಲಕ್ಕೂ ಈ ಷಡ್ಯಂತ್ರ ಪದ ಬಳಕೆಯೇ ಗುರಾಣಿಯಾಗಿದೆ !
ಬಳ್ಳಾರಿ ರಿಪಬ್ಲಿಕ್‌ನ ಜನಾರ್ಧನ ರೆಡ್ಡಿ ಸೋದರರ ಅಟ್ಟಹಾಸ, ಈರ್ಷೆ, ದ್ವೇಷ, ಸೇಡು, ಅಕ್ರಮಗಳು ಇನ್ನೂ ನಿಂತಿಲ್ಲ. ಆದರೂ ಅವರೆಲ್ಲ ಇದೇ ಷಡ್ಯಂತ್ರ ಮತ್ತು ಜಾತಿ ಪದದ ಅಡಿ ರಕ್ಷಣೆ ಪಡೆಯುತ್ತಿದ್ದಾರೆ. ಇವರೆಲ್ಲರ ಎದುರು `ನಾ ಖಾವುಂಗಾ, ನಾ ಖಾನೇ ದೂಂಗಾ’ ಎನ್ನುವ ಮಾತು ಎಷ್ಟು ಬಾಲಿಷ ಎನಿಸುವುದಿಲ್ಲ!?
ಹಿಂದೆ ಪೇಸಿಎಂ ನಿಂದ ಭಾರೀ ಆಘಾತಕ್ಕೊಳಗಾಗಿದ್ದ ಬಿಜೆಪಿ, ಕರ್ನಾಟಕದಲ್ಲಿ ಈಗ 60 ಪರ್ಸೆಂಟ್ ಕಮೀಷನ್ ಸರ್ಕಾರ ಎಂದು ಹೇಳುತ್ತ ಭಾರೀ ಹೋರಟವನ್ನೇ ಆರಂಭಿಸಿತ್ತು. ಡಾ. ಚಂದ್ರು ಲಮಾಣಿ ಮೇಲೆ ಲೋಕಾಯುಕ್ತ ರೇಡ್ ತುಂಬ ಮುಜುಗರದಿಂದ ದಿಕ್ಕೆಟ್ಟಿದ ಸ್ಥಿತಿಗೆ ತಲುಪಿದೆ.. ತಾನೇ ಕೈಯಾರೆ ಶಸ್ತ್ರಾಸ್ತ್ರ ಪೂರೈಸಿದಂತಾಗಿದೆ.
ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ ಒಂದು ಲಕ್ಷ ರೂಪಾಯಿ ಹಣ ಪಡೆಯುವಾಗಲೇ ಸಿಕ್ಕು ಬಿದ್ದದ್ದು, ಕರ್ನಾಟಕದ ವಿಧಾನಸಭೆಯಲ್ಲಿ ಮೂವರು ಶಾಸಕರು ನೀಲಿ ಚಿತ್ರ ವೀಕ್ಷಿಸಿ ಸಚಿವ ಸ್ಥಾನ ಕಳೆದುಕೊಂಡಿದ್ದು, ವಿವಿಧ ರಾಜ್ಯಗಳಲ್ಲಿ ಬಿಜೆಪಿ ಶಾಸಕರು-ಸಚಿವರುಗಳೇ ಸ್ವೇಚ್ಛಾಚಾರ ನಡೆಸಿ ಬಹಿರಂಗವಾದದ್ದು ಆ ಪಕ್ಷದ ಮಟ್ಟಿಗೆ ಹಿನ್ನೆಡೆ ಹಾಗೂ ಮುಜುಗರ ತಂದ ಘಟನೆ.
ಹಾಗೆಯೇ ಡಿ.ಕೆ. ಶಿವಕುಮಾರ್ ದೆಹಲಿ ಮನೆಯಲ್ಲಿ ಹಣ ಸಿಕ್ಕುಬಿದ್ದು ಬಂಧನಕ್ಕೆ ಒಳಗಾದಾಗ ಅವರೂ ಕೂಡ `ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ; ಇದಕ್ಕೆಲ್ಲ ಕೇರ್ ಮಾಡಲ್ಲ’ ಎಂದು ಎದೆಯುಬ್ಬಿಸಿ ಹೇಳಿ; ಜೈಲಿನಿಂದ ಬಿಡುಗಡೆ ಆದ ನಂತರ ನಡೆದ ಚುನಾವಣೆಯಲ್ಲಿ ಗೆದ್ದು ಬಂದವರು! ಇದೇ ಸರ್ಕಾರದಲ್ಲಿ ಶಾಸಕ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿದ್ದ ನಾಗೇಂದ್ರ ಕೂಡ ಅಕ್ರಮ – ಅವ್ಯವಹಾರ ಹಿನ್ನೆಲೆಯಲ್ಲೇ ಸ್ಥಾನ ಕಳೆದುಕೊಂಡರೂ, ಉಪಯೋಗಿಸಿದ್ದು ಷಡ್ಯಂತ್ರ ಮತ್ತು ಜಾತಿ ಪದಗಳನ್ನು. ಮಾಜಿ ಸಚಿವ ಮತ್ತು ಶಾಸಕ ಮುನಿರತ್ನ ಕೂಡ ಬಳಕೆ ಮಾಡಿದ್ದು ಇದೇ ಪದಬಾಣವನ್ನು.
ಹಾಗಂತ `ಷಡ್ಯಂತ್ರ’ ಅಸ್ತ್ರ ಬಳಕೆ ಮಾಡುವವರೆಲ್ಲ ತಾವು ಕೃತ್ಯ ಮಾಡಿರುವುದನ್ನು ಅಲ್ಲಗಳೆಯಲು ಸಾಧ್ಯವಾಗುತ್ತಿಲ್ಲ. ಕರ್ನಾಟಕದ ಹತ್ತೊಂಬತ್ತಕ್ಕೂ ಹೆಚ್ಚು ಶಾಸಕರು ತಮ್ಮ ವಿರುದ್ಧ ಲೈಂಗಿಕ ಅಥವಾ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಬರೆಯದಂತೆ, ತನಿಖೆ ನಡೆಸದಂತೆ ನ್ಯಾಯಾಲಯದಿಂದ ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ತಂದಿದ್ದಾರೆ. ಇದು ಮಾಧ್ಯಮಗಳನ್ನು ತಡೆಯುವ ತಂತ್ರ ವಾದರೂ, ಅವರೇ, ಮರ್ಯಾದೆ ಬಹಿರಂಗಪಡಿಸಿಕೊಂಡರೆನ್ನಿ!
ಈ ಶಾಸಕರುಗಳ ಸಮರ್ಥನೆಯೂ ಕೂಡ ತುಂಬ ವಿಚಿತ್ರವಾಗಿದೆ. ನಾನು ಹಾಗಲ್ಲ ಎಂದು ಸಾಬೀತು ಮಾಡುವಷ್ಟರಲ್ಲಿ, ಮರ್ಯಾದೆಯಲ್ಲ ಹೋಗಿ ಬಿಡುತ್ತದೆ. ಸುಳ್ಳು ಇಡೀ ಜಗತ್ತು ಸುತ್ತಿ ಬಂದ ನಂತರ ಸತ್ಯ ಮನೆಯಿಂದ ಹೊರ ಹೋಗುತ್ತದೆ. ಅದಕ್ಕಾಗಿ ನಮ್ಮ ರಕ್ಷಣೆಯನ್ನು ನಾವು ಪಡೆದಿದ್ದೇವೆ' ಎನ್ನುತ್ತಾರೆ. ಆದರೆ ಸಮಾಜದಲ್ಲಿ ಸಾರ್ವಜನಿಕವಾಗಿ ಮೂಡಿದ ಅನುಮಾನ - ಶಂಕೆ ಇನ್ನಷ್ಟು ಹೆಚ್ಚಾಯಿತಲ್ಲ ! ಹಾಗಾಗಿಯೇಓ ಏನೋ ಇದೆ; ಆದ್ದರಿಂದಲೇ ಇವರು ನ್ಯಾಯಾಲಯದಿಂದ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ’ ಎಂಬುದು ಜನರಲ್ಲಿ ಮೂಡುವ ಸ್ವಾಭಾವಿಕ ಭಾವವಾಗಿದೆ.
ಹಿಂದೆ ಆರೋಪ ಬಂದಾಗಲೇ ರಾಜೀನಾಮೆ ಕೊಟ್ಟವರು ಕೆಲವರು. ತಾವು ನೈತಿಕವಾಗಿ-ವ್ಯಾವಹಕಾರಿಕವಾಗಿ ಸಮರ್ಥರಿದ್ದೇವೆ ಎಂದು ಹೇಳಿಕೊಂಡು, ವಾದಿಸಿ, ತಮ್ಮ ವಿರುದ್ಧದ ಎಲ್ಲ ತಂತ್ರವನ್ನು ಬಯಲು ಮಾಡಿದವರು ಹಲವರು. ಸುಳ್ಳು ಆರೋಪಗಳಿಗೆ ತಿರುಗುಬಾಣವಾಗಿ ಕೊಟ್ಟ ಹಲ ಉದಾಹರಣೆಗಳೂ ಇವೆ. ಸಾರ್ವಜನಿಕ ಜೀವನದಲ್ಲಿ ಈ ಹಿಂದೆಲ್ಲ ಸಾಮ-ದಾನ-ಭೇದ-ದಂಡ ಎಂಬ ತಂತ್ರಗಳಿದ್ದರೆ, ಈಗ `ಷಡ್ಯಂತ್ರ’ ಆ ಪದಗಳ ಜಾಗವನ್ನು ಆಕ್ರಮಿಸಿದೆ ! ಏನೇ ಆದರೂ ಆತ್ಮಸಾಕ್ಷಿ, ನೈತಿಕ ಸ್ಥೈರ್ಯ ಮತ್ತು ಪ್ರಾಮಾಣಿಕತೆ ಎದಿರು ಷಡ್ಯಂತ್ರ ಹಾಗೂ ಜಾತಿ ಪದ ಸಾರ್ವಜನಿಕ ಸ್ತರದಲ್ಲಿ ಎಂದೂ ತಲೆಎತ್ತಿ ನಿಲ್ಲುವುದಿಲ್ಲ ಅಲ್ಲವೇ?

















