Home Advertisement
Home ಅಂಕಣ ನುಡಿನಮನ: ಲೋಕಾಸಕ್ತಿಯೊಳು ವಿರಕ್ತಿ ಸಾಧಿಸಿದ್ದ ಸಂತ ́ಎಸ್ಸಾರ್’

ನುಡಿನಮನ: ಲೋಕಾಸಕ್ತಿಯೊಳು ವಿರಕ್ತಿ ಸಾಧಿಸಿದ್ದ ಸಂತ ́ಎಸ್ಸಾರ್’

0
69
ಡಿವಿಜಿ ಅವರೊಂದಿಗೆ ನಾಡೋಜ ಎಸ್.ಆರ್.ರಾಮಸ್ವಾಮಿ

ಬಿ.ಎನ್.ಶಶಿಕಿರಣ

ನಾಡೋಜ ಎಸ್.ಆರ್.ರಾಮಸ್ವಾಮಿ ಅವರು ಎಂಬತ್ತೆಂಟು ವರ್ಷಗಳ ಸಾರ್ಥಕ ಜೀವನವನ್ನು ಮುಗಿಸಿ ಇಹಲೋಕ ತ್ಯಜಿಸಿದ್ದಾರೆ. ಅವರ ಅಗಲಿಕೆಯೊಂದಿಗೆ ಸುಮಾರು ನೂರೈವತ್ತು ವರ್ಷಗಳ ಇತಿಹಾಸದೊಡನೆ ನಮಗಿದ್ದ ಸಜೀವ ಸೇತುವೆಯೊಂದು ಶಾಶ್ವತವಾಗಿ ಇಲ್ಲವಾಗಿದೆ. ನೂರಾರು ಜೀವಿಗಳಿಗೆ ಆಶ್ರಯವಿತ್ತು, ಸಲಕರಿಗೂ ತಣ್ನೆಳಲನ್ನು ನೀಡುತ್ತ, ಜೀವಪೋಷಕ ದ್ರವ್ಯವನ್ನು ವಿತರಿಸುತ್ತಿದ್ದ ಮಹಾವೃಕ್ಷವೊಂದು ಒಮ್ಮೆಲೇ ಕಣ್ಮರೆಯಾದರೆ ಯಾವ ಬಗೆಯ ಅನುಭವವಾಗುವುದೋ ಅಂಥದ್ದೇ ಶೂನ್ಯಾನುಭವ ರಾಮಸ್ವಾಮಿಯವರ ಅಗಲಿಕೆಯಿಂದ ಆಗಿದೆ.

ಪಂಡಿತವಂಶದಲ್ಲಿ ಹುಟ್ಟಿ, ಸ್ವಪರಿಶ್ರಮದಿಂದ ನಾಲ್ಕಾರು ವಿದ್ಯಾಶಾಖೆಗಳಲ್ಲಿ ವೈದುಷ್ಯವನ್ನು ಸಂಪಾದಿಸಿ, ಪೌಗಂಡದಲ್ಲಿಯೇ ವಿರಕ್ತಿಯಿಂದ ಹಿಮಾಲಯದತ್ತ ಸಾಗಿ, ಅನಂತರ ಡಿ.ವಿ.ಜಿ., ವಿ.ಸೀತಾರಾಮಯ್ಯ, ರಾಳ್ಲಪಲ್ಲಿ ಅನಂತಕೃಷ್ಣ ಶರ್ಮಾ, ಪಿ.ಕೋದಂಡರಾವ್, ಯಾದವರಾವ್ ಜೋಶಿ ಮೊದಲಾದ ಮಹನೀಯರ ಸಾಹಚರ್ಯದಿಂದ ಬದುಕನ್ನು ರೂಪಿಸಿಕೊಂಡ ರಾಮಸ್ವಾಮಿಯವರು ಶತಮಾನಕ್ಕೊಮ್ಮೆ ಆಗಿಹೋಗುವ ಧನ್ಯಾತ್ಮರ ವಿರಳ ವರ್ಗಕ್ಕೆ ಸೇರತಕ್ಕವರು.

ನನ್ನ ಹತ್ತೊಂಬತ್ತನೆಯ ವಯಸ್ಸಿನಿಂದ ಜಗತ್ತಿನಲ್ಲಿ ನಾನೊಬ್ಬ ಆಗಂತುಕ ಎಂಬ ಭಾವನೆ ನನ್ನಲ್ಲಿ ದೃಢವಾಗಿತ್ತು ಎಂದು ಅವರೇ ಒಮ್ಮೆ ಹೇಳಿದ್ದರು. ಅವರ ಈ ಮನೋಧರ್ಮವನ್ನು ಅರಿತಿದ್ದ ಎಸ್.ಎಲ್.ಭೈರಪ್ಪನವರು ಸಮಾಜಕ್ಕೆ ಬೇಕಾದ ಸಂತನಂತಹ ವಿದ್ವಾಂಸ ಎಂದು ರಾಮಸ್ವಾಮಿಯವರನ್ನು ಬಣ್ಣಿಸಿದ್ದರು. ಇಂಥ ನಿರ್ಲಿಪ್ತರು ನಿಷ್ಕಿçಯರಾಗದೆ ಅನೇಕ ಸಮಾಜೋನ್ಮುಖ ಕಾರ್ಯಗಳನ್ನು ನಡೆಸಿದ್ದು ನಮ್ಮ ಭಾಗ್ಯ. ಪರಿಸರಸಂರಕ್ಷಣೆ, ಗ್ರಾಮಾಭ್ಯುದಯ, ಸ್ವದೇಶೀ ಅಭಿಯಾನ, ಸಮಾಜ ಸಂಘಟನೆ, ಆರ್ಥಿಕ ನೀತಿ, ಪತ್ರಿಕೋದ್ಯಮ, ಸಾಹಿತ್ಯ ಮೊದಲಾದ ವಿಷಯಗಳಲ್ಲಿ ಅವರು ರಚಿಸಿರುವ ಕೃತಿಗಳು ಸದಾ ನಮ್ಮ ಪಾಲಿಗೆ ಮಾರ್ಗಜ್ಯೋತಿಗಳಾಗಿವೆ.

ತಮ್ಮ ಮಟ್ಟಿಗೆ ತಾವು ವಿರಕ್ತರಾದರೂ ಸಾಂಸ್ಥಿಕ ಕಾರ್ಯಗಳಿಗೆ ಹಸನ್ಮುಖರಾಗಿ ಭುಜ ಕೊಡುವ ಜೀವಗುಣ ಅವರದಾಗಿತ್ತು. ಹೀಗಾಗಿಯೇ ಅವರ ಕಣ್ಗಾಪಿನಲ್ಲಿ ‘ಉತ್ಥಾನ’ ಮಾಸಪತ್ರಿಕೆ, ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಅಭೂತಪೂರ್ವ ಉತ್ಕರ್ಷವನ್ನು ಕಾಣುವಂತಾಯಿತು.

ಡಿವಿಜಿಯವರಂತೆ ಶಿಷ್ಯ: ವಯಸ್ಸು, ವಿದ್ಯೆ, ವಿಭವ, ಸ್ಥಾನ – ಯಾವುದನ್ನೂ ಲೆಕ್ಕಿಸದೆ ಎಲ್ಲರೊಳಗೊಂದಾಗಿ ಬಾಳಿದವರವರು ರಾಮಸ್ವಾಮಿ. ತಮ್ಮ ಗುರು ಡಿ.ವಿ.ಜಿ. ಅವರಂತೆಯೇ ಸಮಾಜದೊಡನೆ ಸಂಪೂರ್ಣ ತಾದಾತ್ಮ್ಯವನ್ನು ಸಾಧಿಸಿ `ಲೋಕಸೇವೆಯೇ ಪಾಂಡಿತ್ಯದ ಪ್ರಯೋಜನ’ ಎಂದು ನಂಬಿದ್ದರು. ಹೀಗಾಗಿಯೇ ಅವರಿಂದ ಸಾರಸ್ವತ ಉಪಕಾರಗಳನ್ನು ಪಡೆದವರ ಪೈಕಿ ಶಾಸ್ತçಜ್ಞರು, ಕಲಾವಿದರು, ಸಂಘಟಕರು ಮಾತ್ರವಲ್ಲದೆ ಅತ್ಯಂತ ಸಾಮಾನ್ಯರೂ ಸೇರಿದ್ದಾರೆ.

ರಸ್ತೆಯಲ್ಲಿ ಇವರು ನಡೆದುಹೋಗುತ್ತಿದ್ದಾಗ ಯಾರಾದರೂ ಮಾತನಾಡಿಸಿ, `ನಮ್ಮ ಬೀದಿ ಉತ್ಸವದ ಕರಪತ್ರವನ್ನು ದಯಮಾಡಿ ತಿದ್ದಿಕೊಡಿ’ ಎಂದು ಕೋರಿದರೆ, ಅಲ್ಲಿಯೇ ನಿಂತು ಸಂತೋಷವಾಗಿ ತಿದ್ದಿಕೊಡುತ್ತಿದ್ದರು. ಒಮ್ಮೆ ಅವರ ಭಾವಕೋಶಕ್ಕೆ ಯಾರಾದರೂ ಒಳಗಾದರೆ ಅವರ ಅಭಿರುಚಿ-ಆಸಕ್ತಿಗಳನ್ನು ತಿಳಿದುಕೊಂಡು ಆ ದಿಶೆಯಲ್ಲಿ ಉಪಯೋಗವಾಗಬಲ್ಲ ಪುಸ್ತಕಗಳನ್ನೋ ಲೇಖನಗಳನ್ನೋ ಚಿತ್ರಗಳನ್ನೋ ಸ್ವಪ್ರೇರಣೆಯಿಂದ ಕಳುಹಿಸಿಕೊಡುತ್ತಿದ್ದರು.

ಇದೆಲ್ಲ ಬುದ್ಧಿಯ ಮಾತಾಯಿತು. ಇನ್ನು ಭಾವಕ್ಕೆ ಬಂದರೆ, ತಮ್ಮ ಅನುಚರ-ಸಹಾಯಕರ ಮದುವೆ, ಗೃಹಪ್ರವೇಶ ಮೊದಲಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ದೈಹಿಕ ಅಸ್ವಾಸ್ಥ್ಯವನ್ನೂ ಅವಗಣಿಸಿ ದೂರದ ಊರುಗಳಿಗೆ ಪಯಣಿಸುತ್ತಿದ್ದರು, ಒಬ್ಬರಿಗೆ ಸಿಹಿತಿಂಡಿ ಇಷ್ಟವೆಂದು ಅದನ್ನು ವಿಶೇಷವಾಗಿ ಹೇಳಿಮಾಡಿಸುತ್ತಿದ್ದರು. ಮತ್ತೊಬ್ಬರಿಗೆ ವರನಟ ಡಾ|| ರಾಜಕುಮಾರ್ ಆರಾಧ್ಯರೆಂದು ಅವರಿಗೆ ಆ ನಟನ ಚಿತ್ರಗಳನ್ನು ಸಂಗ್ರಹಿಸಿಕೊಟ್ಟಿದ್ದರು… ಈ ಪಟ್ಟಿಗೆ ಕೊನೆಮೊದಲಿಲ್ಲ.

ಬಹುಮುಖ ಆಸಕ್ತಿಯ ವಿದ್ವಾಂಸ: ರಾಮಸ್ವಾಮಿಯವರ ಆಸಕ್ತಿಕ್ಷೇತ್ರಗಳೂ ಹತ್ತಾರು. ವೇದ-ಶಾಸ್ತçಗಳಿಂದ ಹಿಡಿದು, ಫೊಟೋಗ್ರಫಿ, ಕ್ಯಾಲಿಗ್ರಫಿ, ಮುದ್ರಣದಲ್ಲಿ ಅಕ್ಷರವಿನ್ಯಾಸಗಳ ತನಕ ವಿವಿಧ ವಿಷಯಗಳಲ್ಲಿ ತಿಳಿವನ್ನು ಸಂಪಾದಿಸಿದ್ದರು. ನಮ್ಮ ದೇಶ ಕಂಡ ಅಪ್ರತಿಮ ವಿದ್ವಾಂಸರಾದ ಪಿ.ವಿ.ಕಾಣೆ, ಶ್ರೀಪಾದ ದಾಮೋದರ ಸಾತವಳೇಕರ್, ವಿ.ರಾಘವನ್ ಮುಂತಾದವರೊಡನೆಯೂ ಪಾಶ್ಚಾತ್ತ್ಯರಲ್ಲಿ ಖ್ಯಾತನಾಮರಾದ ನಾಮ್ ಚಾಮ್‌ಸ್ಕಿ, ಅಯ್ನ್ ರ‍್ಯಾಂಡ್ ಮೊದಲಾದವರೊಡನೆಯೂ ಪತ್ರವ್ಯವಹಾರವನ್ನು ಇರಿಸಿಕೊಂಡಿದ್ದರು. ಹೀಗಿದ್ದರೂ ಒಮ್ಮೆಯೂ `ಇವರು ನನಗೆ ಗೊತ್ತು’ ಎಂಬ ಸುಳಿವನ್ನೂ ಕೊಡುತ್ತಿರಲಿಲ್ಲ.

ಕೃತಿಗಳ ಮೂಲಕ ಚಿರಸ್ಥಾಯಿ: ರಾಮಸ್ವಾಮಿಯವರು ರಚಿಸಿರುವ ‘ದೀವಟಿಕೆ ಗಳು’, ‘ದೀಪ್ತಿಮಂತರು’, ‘ದೀಪ್ತಶೃಂಗಗಳು’ ಎಂಬ ವ್ಯಕ್ತಿತ್ವಚಿತ್ರಮಾಲೆಗಳು ಉಚ್ಚಸ್ಥಾಯಿಯ ಬಾಳು, ಭಾವ ಮತ್ತು ಭಾಷೆಗಳಿಗೆ ಅನನ್ಯ ನಿದರ್ಶನಗಳು. ಸಮಾಜದ ಸ್ವಾಸ್ಥ್ಯವನ್ನು ಸಂರಕ್ಷಿಸಲು ಎಂಥ ಮಹನೀಯರ ಬದುಕು ಮೇಲ್ಪಂಕ್ತಿಯಾಗಬಲ್ಲುದೋ ಅಂಥವನ್ನು ಇಲ್ಲಿ ಸಮೃದ್ಧವಾಗಿ ಕಾಣಬಹುದು.

ಇನ್ನು ‘ಆರ್ಥಿಕತೆಯ ಎರಡು ಧ್ರುವ’, ‘ಶತಮಾನದ ತಿರುವಿನಲ್ಲಿ ಭಾರತ’, ‘ನಾಗರಿಕತೆಗಳ ಸಂಘರ್ಷ’, ‘ಭಾರತದಲ್ಲಿ ಸಮಾಜಕಾರ್ಯ’ ಮುಂತಾದ ಅವರ ಕೃತಿಗಳು ಚಿರಂತನ ಮೌಲ್ಯಗಳಿಗೂ ಆಧುನಿಕ ಜಗತ್ತಿಗೂ ಸಂಗತವಾಗಬಲ್ಲ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ನೀತಿಗಳನ್ನು ನಿರೂಪಿಸಿವೆ. ಬರಿಯ ಸಮಸ್ಯೆಗಳನ್ನಷ್ಟೇ ಎತ್ತಾಡಿ ಯಾವ ಪರಿಹಾರವನ್ನೂ ಸೂಚಿಸದ ಇಂದಿನ ಹೆಚ್ಚಿನ ಬರೆಹಗಳ ಹಿನ್ನೆಲೆಯಲ್ಲಿ ಈ ಕೃತಿಗಳು ವಿಶಿಷ್ಟವೆನಿಸುತ್ತವೆ. ‘Alternative Economics’ ಎಂಬ ಪರ್ಯಾಯ ಪ್ರಸ್ಥಾನಕ್ಕೆ ಇಲ್ಲಿ ವಿಪುಲ ಸಾಮಗ್ರಿಯಿದೆ.

ಮುಖ್ಯಧಾರೆಯ ಇತಿಹಾಸಕಾರರು ಕಡೆಗಣಿಸುವ – ಆದರೆ ನೈಜ ಚರಿತ್ರೆಯ ದೃಷ್ಟಿಯಿಂದ ಪ್ರಮುಖವಾದ – ವಿವಿಧ ಘಟನೆಗಳನ್ನು ಯುಕ್ತ ಪರಿಪ್ರೇಕ್ಷೆಯೊಡನೆ ಆಖ್ಯಾನಿಸುವ ‘ಕೆಲವು ಇತಿಹಾಸಪರ್ವಗಳು’ ಮತ್ತು ‘ಮರೆಯಬಾರದ ಇತಿಹಾಸಾಧ್ಯಯಗಳು’ ಬಹುಲಾದ ಕೊರತೆಯನ್ನು ನೀಗಿಸಿ ಈ ನಿಟ್ಟಿನ ಬರೆಹಗಳಿಗೆ ದಿಕ್ಸೂಚಿಗಳಾಗಿವೆ.

ಬಿರುಕಿಲ್ಲದ ಬದುಕು-ಬರೆಹ: ರಾಮಸ್ವಾಮಿಯವರ ಸಮತೂಕದ ಬರೆವಣಿಗೆಯನ್ನು ನಿದರ್ಶಿಸಲು ಒಂದು ಉದ್ಧೃತಿ ಪರ್ಯಾಪ್ತವಾದೀತು. `ಒಂದೊಂದು ನಾಗರಿಕತೆಗೆ ಒಂದೊಂದು ಗಡಿ ಇರುತ್ತದೆ. ಒಂದು ನಾಗರಿಕತೆ ಎಷ್ಟು ಕಾಲ ಮುಂದುವರಿದೀತೆಂಬುದನ್ನು ನಿರ್ಧರಿಸುವುದು ಈ ಗಡಿಯೇ. ವಿಹಿತ ಗಡಿಗಳನ್ನು ಉಲ್ಲಂಘಿಸಿದುದರಿಂದಲೇ ಎಷ್ಟೋ ನಾಗರಿಕತೆಗಳು ಅವಸಾನಗೊಂಡದ್ದು.

ಭಾರತೀಯರು ತಮ್ಮ ನಾಗರಿಕತೆಗೆ, ಜೀವನಕ್ಕೆ ಗಡಿ ಎಂದು ಭಾವಿಸಿದುದು ಧರ್ಮವನ್ನು… ಧರ್ಮಕ್ಕೆ ಉಚ್ಚ ಸ್ಥಾನವನ್ನು ಕೊಟ್ಟಿದ್ದರಿಂದಲೇ ನಮ್ಮ ವೇದರ್ಷಿಗಳು ಅಧ್ಯಾತ್ಮಸಾಕ್ಷಾತ್ಕಾರದಲ್ಲಿ ಅತ್ಯುನ್ನತ ಹಂತವನ್ನು ಸಾಧಿಸಿದ್ದುದು… ಆಧ್ಯಾತ್ಮಿಕ ಆವೇಶ ದಲ್ಲಿ ನಮ್ಮ ಪೂರ್ವಿಕರು ಲೌಕಿಕ ಜೀವನವನ್ನು ಅಲಕ್ಷ್ಯ ಮಾಡಿದವರಲ್ಲ. ಲೌಕಿಕ ಜೀವನ ತೃಪ್ತಿದಾಯಕವೂ ಆನಂದಮಯವೂ ಆಗಿರಬೇಕೆಂದು ಕಾಳಜಿವಹಿಸಿದ್ದರು…

ನಮ್ಮ ಹಿಂದಿನವರು ಅಧ್ಯಾತ್ಮದೃಷ್ಟಿಯನ್ನೂ ಲೌಕಿಕ ದಕ್ಷತೆಯನ್ನೂ ಪರಸ್ಪರ ವಿರುದ್ಧವಾಗದಂತೆ ಸಮನ್ವಯಗೊಳಿಸಿಕೊಂಡಿದ್ದರು. ಈ ಸಮನ್ವಯವೇ ಹಿಂದೂ ಧರ್ಮ, ನಾಗರಿಕತೆಗಳ ತಿರುಳು.’ (ಭಾರತದಲ್ಲಿ ಸಮಾಜಕಾರ್ಯ). ಹೀಗೆ ಬಿರುಕಿಲ್ಲದ ಬದುಕು-ಬರೆಹಗಳ ಮೂಲಕ ತಮ್ಮ ಸಂಪರ್ಕಕ್ಕೆ ಬಂದವರೆಲ್ಲರಿಗೂ ಬೆಳಕಾದ ರಾಮಸ್ವಾಮಿಯವರ ಪವಿತ್ರ ಸ್ಮೃತಿ ಅವರು ನೆಚ್ಚಿದ ಮೌಲ್ಯಗಳ ಅನುಸಂಧಾನಕ್ಕೆ ಹೆಚ್ಚಿನ ಸ್ಫೂರ್ತಿ ನೀಡಲಿ.