ಜಲನ್ಯಾಯ- ಕಣ್ಣಾಮುಚ್ಚೆ ಕಾಡೆಗೂಡೆ

0
25
ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಮೋಹನ ಹೆಗಡೆ
ಹಲವು ದಶಕಗಳ ಕಾಲ ನನೆಗುದಿಗೆ ಬಿದ್ದಿದ್ದ ರಾಜ್ಯದ ಮಹತ್ವದ ಭದ್ರಾ ಮೇಲ್ದಂಡೆ, ಮತ್ತು ಮಹದಾಯಿ ಯೋಜನೆಗಳಿಗೆ ಮಂಜೂರಾತಿ ಕೊಟ್ಟಿದ್ದೇವೆಂದು, ಹಣ ಬಿಡುಗಡೆ ಮಾಡಿದ್ದೇವೆಂದು ಘೋಷಿಸಿದ ಹಿನ್ನೆಲೆ ನೋಡಿದರೆ ಇವೆರಡೂ ಯೋಜನೆಗಳು ಅನುಷ್ಠಾನಗೊಂಡು ಜನರ ನೀರಿನ ದಾಹವನ್ನು ಈಗಾಗಲೇ ಇಂಗಿಸಬೇಕಾಗಿತ್ತು.

ಭದ್ರಾ ಮೇಲ್ದಂಡೆ ನೀರಿನಿಂದ ರೈತರ ಹೊಲಗಳು ನಳನಳಿಸಬೇಕಾಗಿತ್ತು. ಅಲ್ಲವೇ? ಅಂದಿನ ಈ ಎರಡೂ ಪ್ರಕಟಣೆಗಳು ಜನರನ್ನು ಅಪಹಾಸ್ಯ ಮಾಡಿದಂತೆ ಆಗಲಿಲ್ಲವೇ? ಜನರನ್ನು ಮೂರ್ಖರೆಂದು ತಿಳಿದಂತಿವೆ. ಹಾಗೆಯೇ ಜನರ ಸಹನೆಯನ್ನು ಪರೀಕ್ಷಿಸುವಂತಾಗಿದೆ.

`2019ರಲ್ಲಿ ಮಹದಾಯಿ ಯೋಜನೆಗೆ ಅನುಮತಿ ಪಡೆದಿದ್ದೇವೆ’ ಎಂದು ಘೋಷಿಸುವ ಪ್ರಕಟಣೆ ಯಡಿಯೂರಪ್ಪ, ಬೊಮ್ಮಾಯಿ, ಈಗ ಸಿದ್ದರಾಮಯ್ಯ ಸರ್ಕಾರದ ಅರ್ಧ ಅವಧಿ ಮುಗಿದರೂ ಕೂಡ ಇನ್ನೂ ಕೇಂದ್ರದ ಅನುಮತಿಗಾಗಿ ಪರದಾಡುತ್ತಲೇ ಇದೆ ರಾಜ್ಯ. ಹಾಗೆಯೇ ಬಜೆಟ್‌ನಲ್ಲಿ ಘೋಷಣೆಯಾದರೂ ಒಂದು ಪೈ ಕೂಡ ಬಿಡುಗಡೆ ಮಾಡದೇ ಭದ್ರಾ ಮೇಲ್ದಂಡೆ ಯೋಜನೆ ರೈತರನ್ನು ಅಣಕಿಸುತ್ತಿದೆ.

ತಮಾಷೆ ಎಂದರೆ ಎರಡೂ ಯೋಜನೆಗಳ ಬಗ್ಗೆ ಬಿಜೆಪಿ ಪ್ರಕಟಣೆಗೆ ಪೂರ್ವ ಚುನಾವಣಾ ಅಂಗಳ ಸಜ್ಜಾಗಿತ್ತು. ಈಗಿರುವ ಪ್ರಶ್ನೆ ಎಂದರೆ, ಮಹದಾಯಿ ಇರಬಹುದು, ಭದ್ರಾ ಮೇಲ್ದಂಡೆ ಇರಬಹುದು. ಅದಕ್ಕಿಂತ ಹೆಚ್ಚಾಗಿ ಕೃಷ್ಣಾ ಮೇಲ್ದಂಡೆಯೇ ಆಗಿರಬಹುದು. ಮೇಕೆದಾಟು ಆಗಿರಬಹುದು. ಇವೆಲ್ಲವುಗಳಿಗೆ ಏಕೆ ಅನುಮತಿ ನೀಡುತ್ತಿಲ್ಲ?

ಕೇಂದ್ರ- ರಾಜ್ಯ ಸರ್ಕಾರ, ಕೇಂದ್ರದ ಮಂತ್ರಿಗಳು ಏಕೆ ಅಗತ್ಯ ಪರವಾನಿಗೆ ನೀಡುತ್ತಿಲ್ಲ? ಅನುಷ್ಠಾನಗೊಳಿಸುತ್ತಿಲ್ಲ? ಜನರ ಸಹನೆಯನ್ನೇಕೆ ಪರೀಕ್ಷಿಸುತ್ತಿದ್ದೀರಿ? ನಮ್ಮ ಸಂಸದರೆಷ್ಟು ಕಾಳಜಿವಹಿಸಿದ್ದಾರೆ? ಮೊನ್ನೆ ಮೊನ್ನೆ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ರಾಜ್ಯ ವಿಶೇಷ ಸಚಿವ ಸಂಪುಟ ಅಂಗೀಕಾರ ನೀಡಿ, ಪರಿಹಾರದ ಸ್ಕೀಂ ಘೋಷಿಸಿತು.

75ಸಾವಿರ ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು, ರೈತರಿಗೆ ಪರಿಹಾರ ಮತ್ತು ಪುನರ್ವಸತಿಗಾಗಿ ಸುಮಾರು 70 ಸಾವಿರ ಕೋಟಿ ರೂಪಾಯಿಗಳನ್ನು ಏಕ ಕಂತಿನಲ್ಲಿ ನೀಡಲು ನಿರ್ಧರಿಸಿತು. ಪ್ರತಿ ಎಕರೆಗೆ ನೀರಾವರಿ ಭೂಮಿಗೆ 40 ಲಕ್ಷ, ಒಣಭೂಮಿಗೆ 30 ಲಕ್ಷ ಪರಿಹಾರ ನೀಡುವ ತೀರ್ಮಾನಕ್ಕೆ ರಾಜ್ಯ ಸಂಪುಟ ಬಂತು. ಕಾಲಮಿತಿಯಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಲು ರಾಜ್ಯವೇನೋ ಯೋಜನೆ ರೂಪಿಸಿತು.

ಈಗ ಏಳುವ ಪ್ರಥಮ ಪ್ರಶ್ನೆ ಎಂದರೆ ಕೃಷ್ಣಾ ಮೇಲ್ದಂಡೆ ಯೋಜನೆಯ ಅಂತಿಯ ಐತೀರ್ಪನ್ನು ಹತ್ತು ವರ್ಷಗಳ ನಂತರವೂ ಗೆಜೆಟ್‌ನಲ್ಲಿ ಪ್ರಕಟಿಸದಿರುವುದು ಏಕೆ? ಗೆಜೆಟ್ ಪ್ರಕಟಣೆಯ ನಂತರವೇ ಅಲ್ಲವೇ ಇದು ಅನುಷ್ಠಾನಗೊಳ್ಳಲು ಸಾಧ್ಯ?

ಈ ಸಂಬಂಧ ಬಾಗಲಕೋಟೆ ಸಂಸದ ಗದ್ದೀಗೌಡರ್, ಹಾವೇರಿ ಸಂಸದ ಬೊಮ್ಮಾಯಿ, ವಿಜಯಪುರ ಸಂಸದ ಜಿಗಜಿಣಗಿ ಎಲ್ಲರನ್ನೂ ಕೇಳಿ. ಕಾನೂನಿನ ತೊಡಕಿಲ್ಲ. ಪ್ರಕಟಣೆ ಮಾಡಬೇಕು ಎಂದಷ್ಟೇ ಹೇಳುತ್ತಾರೆ. ಹಾಗಾದರೆ ಏಕೆ ಪ್ರಕಟಣೆ ಮಾಡುತ್ತಿಲ್ಲ? 519 ಮೀಟರ್ ಅಣೆಕಟ್ಟನ್ನು 524.236 ಮೀಟರ್‌ಗೆ ಎತ್ತರಿಸಲು ಐತೀರ್ಪು-2 ಒಪ್ಪಿದೆ. ನ್ಯಾಯ ಮಂಡಳಿ ನಮ್ಮ ಪಾಲಿನ ಎಲ್ಲ ನೀರು ಬಳಕೆಗೆ ಅನುಮತಿಸಿದೆ.

ಐತೀರ್ಪಿನ ನಂತರ ಆಂಧ್ರ ಇಬ್ಭಾಗವಾದರೆ, ಆ ಎರಡು ತೆಲಗು ಭಾಷಿಕ ರಾಜ್ಯಗಳು ತೀರ್ಪಿನ ವೇಳೆ ನೀಡಿದ ಪ್ರಮಾಣದಲ್ಲಿ ಪರಸ್ಪರ ಹಂಚಿಕೆ ಮಾಡಿಕೊಳ್ಳಲಿ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಗೆಜಟ್ ಪ್ರಕಟಣೆ ಮಾಡದೇ ವಿವಾದ ಎಬ್ಬಿಸುತ್ತಿರುವುದರಿಂದ ಜನರ ಸಹನೆಯ ಕಟ್ಟೆ ಒಡೆಯುತ್ತಿದೆ.

ಬಿಜೆಪಿ ನಾಯಕರು, ಸಂಸದರಿಗೆ ಕೇಂದ್ರ ಸರ್ಕಾರ ಗೆಜೆಟ್ ಪ್ರಕಟಣೆ ಹೊರಡಿಸದಿರುವುದು ಏತಕ್ಕೆ ಎಂದು ಪ್ರಶ್ನಿಸಿದರೆ ಉತ್ತರವಿಲ್ಲ. ಪ್ರಸ್ತುತ ಯೋಜನಾ ವೆಚ್ಚ ಹತ್ತು ಪಟ್ಟು ಹೆಚ್ಚಿರುವಾಗ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕೂಡಲೇ ಸಮಸ್ಯೆ ಪರಿಹರಿಸಬೇಕಾದುದು ಆಡಳಿತಾತ್ಮಕ ಬದ್ಧತೆಯಲ್ಲವೇ?

ಮಹದಾಯಿ ಕಥೆಯೂ ಹೀಗೆ. 2019ರ ಪೂರ್ವ ಚುನಾವಣೆಯಲ್ಲಿ `ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ. ಬಿಜೆಪಿ ಸರ್ಕಾರ ಬಂದ ತಕ್ಷಣ ಮಹದಾಯಿ ಅನುಷ್ಠಾನಗೊಳಿಸುವುದಾಗಿ’ ಬಿಎಸ್‌ವೈ ಹೇಳಿದ್ದರು. ಅಷ್ಟೇ ಅಲ್ಲ. ಚುನಾವಣೆಗೆ ಪೂರ್ವ ಗೋವಾ ಸರ್ಕಾರ ಅನುಮೋದಿಸಿದೆ ಎಂದು ಗೋವಾ ಸರ್ಕಾರದ, ಎನ್‌ಜಿಟಿಯ ಸಹಿ ಇಲ್ಲದ ಪತ್ರವನ್ನು ತೋರಿಸಿದ್ದರು.

ಏನಾಯ್ತು? ಒಂದು ಗೋವಾ ಸರ್ಕಾರದ ಒತ್ತಡಕ್ಕೆ ಮಣಿದು ಈವರೆಗೆ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಇದೇ ಮಾರ್ಗದಲ್ಲಿ ಹೈಟೆನ್ಷನ್ ಲೈನ್‌ಗಳು, ಸಿಂಗಳೀಕಗಳ ಅಭಯಾರಣ್ಯದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್, ಅಘನಾಶಿನಿಗೆ ಬೆಂಗಳೂರಿನತ್ತ ತಿರುಗಿಸಲು ಲಕ್ಷಾಂತರ ಮರಗಿಡಗಳನ್ನು ಧರೆಗುರುಳಿಸಲು ಇಲಾಖೆ ಅನುಮತಿ ನೀಡುತ್ತಿದೆ!

ಬೇಡ್ತಿ- ವರದಾ ಜೋಡಣೆಗೆ ಪರವಾನಗಿ ಕೇಳುವ ಬೊಮ್ಮಾಯಿ, ಸ್ವತಃ ತಾವು ಮುಖ್ಯಮಂತ್ರಿಯಾಗಿದ್ದಾಗಲೇ ಮಹದಾಯಿಗಾಗಿ ಹೋರಾಟಕ್ಕೆ ಇಳಿದಿದ್ದ ಜಗದೀಶ ಶೆಟ್ಟರ ಈಗ ಸಂಸದರು. ಇಬ್ಬರಿಗೂ ಗೊತ್ತು. ಇದರ ಅನುಷ್ಠಾನಕ್ಕೆ ತೊಡಕಿಲ್ಲ ಎನ್ನುವುದು. ಆದಾಗ್ಯೂ ಮಹದಾಯಿ ಅನುಷ್ಠಾನಕ್ಕೆ ಪರಿಸರ ಇಲಾಖೆ ವಿಚಾರಣೆ ಕೈಗೆತ್ತಿಕೊಳ್ಳದೇ ನಾಲ್ಕು ವರ್ಷಗಳಿಂದ ಮುಂದೂಡತ್ತಲೇ ಇದೆ. ಇನ್ನೆಷ್ಟು ಚುನಾವಣೆಗಳು ಕೃಷ್ಣಾ ಮೇಲ್ದಂಡೆ- ಮಹದಾಯಿ ಹೆಸರಿನಲ್ಲಿ ನಡೆಯಬೇಕೋ ಗೊತ್ತಿಲ್ಲ.

ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ಬಜೆಟ್‌ನಲ್ಲಿಯೇ ಘೋಷಣೆ ಮಾಡಿತ್ತು. ಚಿಕ್ಕಾಸೂ ಕೊಟ್ಟಿಲ್ಲ. ಅಂದು ಕೇಂದ್ರ ಸಚಿವೆ ಮತ್ತು ಮೋದಿ ಸರ್ಕಾರವನ್ನು ಉಧೋ ಉಧೋ ಎಂದು ಹಾಡಿ ಹೊಗಳಿದ ಬಿಜೆಪಿ ಈಗ ಸೊಲ್ಲೆತ್ತುತ್ತಿಲ್ಲ !

ಇದೇ ರೀತಿ ಮೇಕೆದಾಟು, ಎತ್ತಿನ ಹೊಳೆ ಎಲ್ಲವೂ… ಮಾಜಿ ಪ್ರಧಾನಿ, ದೇಶದ ನೆಲ ಜಲದ ¨ಗ್ಗೆ ಅಧಿಕಾರಯುತವಾಗಿ ವಾದ ಮಾಡುವ ದೇವೇಗೌಡರು ಈಗ ರಾಜ್ಯಸಭಾ ಸದಸ್ಯರೂ ಕೂಡ. ಅವರೀಗ ಬಿಜೆಪಿ ಜೊತೆ ಸೇರಿ ಮೌನವಾಗಿದ್ದಾರೆ. ರಾಜ್ಯದಲ್ಲಿ ತಮ್ಮ ಸರ್ಕಾರವಿಲ್ಲ ಎಂಬ ರಾಜಕೀಯ ಕಾರಣವೇ ಇದೆಲ್ಲದರ ಹಿಂದಿದೆ ಎನ್ನುವುದು ಕರ್ನಾಟಕ ಸರ್ಕಾರದ ಬೇಸರ.

ಕರ್ನಾಟಕದ ಸಂಸದರು ಎಚ್ಚೆತ್ತುಕೊಳ್ಳಲು ಇದು ಸಕಾಲ. ಇನ್ನೆಷ್ಟು ದಿನ ಕೃಷ್ಣಾ, ಮಹದಾಯಿ ಮುಂದಿಟ್ಟುಕೊಂಡು ಚುನಾವಣೆ ರಾಜಕೀಯ ಮಾಡುತ್ತೀರಿ? ರೈತರು- ಜನರ ಸಹನೆಯ ಕಟ್ಟೆ ಒಡೆದು ಆಕ್ರೋಶ ಹೊರ ಹೊಮ್ಮುವುದು ಸರ್ಕಾರಗಳಿಗೆ ಬೇಕಾಗಿದೆಯೇ?

Previous articleಮುಖ್ಯಮಂತ್ರಿ, ಡಿಸಿಎಂ ನಿವಾಸಕ್ಕೆ ಬಾಂಬ್ ಬೆದರಿಕೆ: ತಮಿಳುನಾಡಿನಿಂದ ಬಂದ ಇ-ಮೇಲ್
Next articleವಿಜಯನಗರ: ಹೊಸಪೇಟೆಯಲ್ಲಿ ಹೊಟೇಲ್ ಉದ್ಯಮಿಯ ಮೇಲೆ ED ದಾಳಿ

LEAVE A REPLY

Please enter your comment!
Please enter your name here