ಪ್ರತಿಪಕ್ಷ ನಾಯಕತ್ವದ ಸತ್ವ – ಮಹತ್ವ

0
12

ಸರ್ಕಾರದ ಆಡಳಿತದ ರಥಯಾತ್ರೆ ಸುಸೂತ್ರವಾಗಿ ಸಾಗಲು ಮುಖ್ಯಮಂತ್ರಿ ನೇತೃತ್ವದ ಸಂಪುಟವೇ ಕಾರಣ ಎಂಬುದು ಪ್ರಶ್ನಾತೀತ ಸಂಗತಿ. ಆದರೆ, ಈ ಪ್ರಶ್ನಾತೀತಿ ಸಂಗತಿಯ ಹಿಂದಿರುವ ಇನ್ನೊಂದು ಪರಮಸತ್ಯವೆಂದರೆ ಸರ್ಕಾರದ ತಪ್ಪು ಒಪ್ಪುಗಳನ್ನು ಬಹಿರಂಗವಾಗಿ ಬಿಂಬಿಸಿ ರಥಯಾತ್ರೆ ಪೂರ್ವ ನಿಶ್ವಿತ ದಾರಿಯಲ್ಲಿಯೇ ಸಾಗುವಂತಾಗಲು ಪ್ರತಿಪಕ್ಷ ಎನ್ನುವುದಕ್ಕಿಂತ ನೇರವಾಗಿ ಪ್ರತಿಪಕ್ಷದ ನಾಯಕತ್ವವೇ ಕಾರಣ ಎಂಬ ಸಂಗತಿಯನ್ನು ಯಾರೊಬ್ಬರೂ ನಿರಾಕರಿಸುವಂತಿಲ್ಲ. ೭೫ ವರ್ಷಗಳ ಕಾಲ ಪ್ರಜಾಪ್ರಭುತ್ವದ ಆಡಳಿತಕ್ಕೆ ಸಾಕ್ಷಿಯಾಗಿರುವ ಭಾರತದಲ್ಲಿ ಇದುವರೆಗೆ ಬಂದಿರುವ ಸರ್ಕಾರಗಳು ಕೈಗೊಂಡಿರುವ ಜನಕಲ್ಯಾಣ ಯೋಜನೆಗಳ ಜೊತೆಗೆ ಕ್ರಾಂತಿಕಾರಿ ಸ್ವರೂಪದ ಶಾಸನಗಳ ಹಿಂದಿರುವುದು ಪ್ರತಿಪಕ್ಷದ ನಾಯಕತ್ವವೇ. ಇದರ ಅರ್ಥ ಪ್ರತಿಪಕ್ಷದ ನಾಯಕರು ಸರ್ಕಾರಕ್ಕೆ ಸಲಹಾ ರೂಪದಲ್ಲಿ ಪ್ರಸ್ತಾಪಗಳನ್ನು ಮಂಡಿಸುತ್ತಾರೆ ಎಂದಲ್ಲ. ಕೂರಂಬಿನಂತಹ ಟೀಕೆಗಳಲ್ಲಿಯೇ ತುಂಬಿರುವ ಧನಾತ್ಮಕ ಅಂಶಗಳನ್ನು ಪರಿಗಣಿಸಿ ಅದನ್ನು ಆಡಳಿತಕ್ಕೆ ಅಳವಡಿಸಿಕೊಳ್ಳುವ ಜಾಣತನ ಮುಖ್ಯಮಂತ್ರಿಗಳಿಗೆ ಇದ್ದಾಗ ಆಗ ಸರ್ಕಾರದ ರಥಯಾತ್ರೆ ಅಡ್ಡಿ ಆತಂಕಗಳು ಎದುರಾಗಲಾರವು. ಹಾಗೊಮ್ಮೆ ಎದುರಾದರೂ ಸಮಾನಾಂತರ ದಾರಿಯಲ್ಲಿ ಸಾಗಬಹುದಷ್ಟೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಶಾಸನಸಭೆಯ ಉಭಯ ಸದನಗಳ ಪ್ರತಿಪಕ್ಷ ನಾಯಕರೇ ಇನ್ನೂ ಸ್ಪಷ್ಟವಾಗಿಲ್ಲದೇ ಇರುವುದು ಒಂದು ರೀತಿಯಲ್ಲಿ ಆಡಳಿತ ಪಕ್ಷಕ್ಕೆ ಪ್ರತಿಬಿಂಬವನ್ನು ಕಂಡುಕೊಳ್ಳಲು ಎದುರಾಗಿರುವ ಅಡ್ಡಿ. ಶಾಸನಸಭೆಯ ಪ್ರತಿಪಕ್ಷದ ನಾಯಕರ ಟೀಕೆ ಟಿಪ್ಪಣಿಗಳಿಗೆ ಉಳಿದ ಸಾರ್ವಜನಿಕ ಮುಖಂಡರ ಟೀಕೆಗಳಿಗಿಂತ ಒಂದು ಗುಲಗಂಜಿ ತೂಕ ಹೆಚ್ಚು. ಏಕೆಂದರೆ, ಶಾಸನಸಭೆ ರಾಜ್ಯವೊಂದರ ರಾಜಕೀಯ ಪ್ರಬುದ್ಧತೆಯ ಜಲಾಶಯ. ಈ ಜಲಾಶಯದಲ್ಲಿ ಮಾರ್ದನಿಗೊಳ್ಳುವ ಮಾತುಗಳಿಗೆ ಹೆಚ್ಚಿನ ಮಹತ್ವ ಸ್ವಾಭಾವಿಕವೇ. ಬಿಜೆಪಿಯ ಪರವಾಗಿ ಉಭಯ ಸದನಗಳಲ್ಲಿ ಪ್ರತಿಪಕ್ಷದ ನಾಯಕರು ಯಾರಾಗುತ್ತಾರೆ ಎಂಬ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರು ಕೇಳಿಬರುತ್ತಿದ್ದರೂ ಇನ್ನೂ ಹಲವಾರು ಶಾಸಕರ ಕಡೆ ಪಕ್ಷದ ಮುಖಂಡರ ಕಣ್ಣು ನೆಟ್ಟಿರುವ ಪರಿಣಾಮವಾಗಿ ನಾಯಕತ್ವ ಯಾರ ಮುಡಿಗೆ ಎಂಬುದು ಇನ್ನು ಮುಂದಷ್ಟೆ ತಿಳಿಯಬೇಕು. ವಿಧಾನಪರಿಷತ್ತಿನ ನಾಯಕತ್ವಕ್ಕೂ ಇದೇ ಸಮಸ್ಯೆ. ಸರ್ಕಾರ ಅಧಿಕಾರದಲ್ಲಿದ್ದಾಗ ಸಭಾನಾಯಕರಾಗಿದ್ದ ಕೋಟ ಶ್ರೀನಿವಾಸಪೂಜಾರಿ ಅವರೇ ಪ್ರತಿಪಕ್ಷದ ನಾಯಕರು ಎಂಬ ಮಾತು ಕೇಳಿಬರುತ್ತಿದೆ. ಆದರೆ, ಕಾಂಗ್ರೆಸ್‌ನ ಹುಳುಕುಗಳನ್ನು ಪರಿಣಾಮಕಾರಿಯಾಗಿ ಮಾತಿನ ಚಾಟಿಯ ಮೂಲಕ ಹೊರಗೆ ಎಳೆಯಬಲ್ಲ ಛಲವಾದಿ ನಾರಾಯಣಸ್ವಾಮಿ ಅಂತಹವರು ನಾಯಕರಾದರೆ ಆಗ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುವುದು ಸುಲಭ ಎಂಬ ಮಾತುಗಳೂ ಚಾಲ್ತಿಯಲ್ಲಿವೆ. ಅದೇನೇ ಆದರೂ, ಈಗಿರುವ ಸಂದರ್ಭದಲ್ಲಿ ಶಾಸನಸಭೆಯ ಕಲಾಪದಲ್ಲಿ ನುರಿತಿರುವ ಉತ್ತಮ ಸಂಸದೀಯ ಪಟುವಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇನ್ನಿತರ ಮಂತ್ರಿಗಳನ್ನು ಸದನದಲ್ಲಿ ಎದುರಿಸುವುದು ಬಿಜೆಪಿಯವರಿಗೆ ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ, ನುರಿತ ಸಂಸದೀಯ ಪಟುಗಳ ಪೈಕಿ ಹಲವರು ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಹೀಗಾಗಿ ಇರುವ ಶಾಸಕರಲ್ಲಿಯೇ ನಾಯಕರನ್ನು ಆಯ್ಕೆ ಮಾಡುವ ಸ್ಥಿತಿಯಲ್ಲಿ ಬಿಜೆಪಿ ನಾಯಕತ್ವ ಸಿಕ್ಕಿಬಿದ್ದಿದೆ.
ಪ್ರತಿಪಕ್ಷದ ನಾಯಕರ ಸ್ಥಾನ ಮಾನ ಹಾಗೂ ಅವರ ಪಾತ್ರದ ಬಗ್ಗೆ ಖಚಿತ ನಿಲುವು ಸಾರ್ವಜನಿಕ ನೆಲೆಯಲ್ಲಿ ಕಂಡುಬರುತ್ತಿಲ್ಲ. ಜರುಗುವ ಘಟನೆಗಳಿಗೆ ಪ್ರತಿಕ್ರಿಯೆಯ ಮೂಲಕ ಸರ್ಕಾರದ ಕಿವಿ ಹಿಂಡುವುದಷ್ಟೆ ಪ್ರತಿಪಕ್ಷದ ಕೆಲಸ ಎಂಬ ಭಾವನೆ ಬಹಳ ಮಂದಿಯಲ್ಲಿ ಇದ್ದಂತಿದೆ. ಆದರೆ, ವಾಸ್ತವವಾಗಿ ಪ್ರತಿಪಕ್ಷವಾಗಲೀ ಅಥವಾ ಪ್ರತಿಪಕ್ಷದ ನಾಯಕರಾಗಲಿ ಪ್ರತಿಕ್ರಿಯೆಗಷ್ಟೆ ಸೀಮಿತವಾದವರಲ್ಲ. ಸಾರ್ವಜನಿಕ ಕಲ್ಯಾಣಕ್ಕೆ ಸಂಬಂಧಿಸಿದಂತೆ ಅಧ್ಯಯನ, ಅನುಭವದ ಮೂಲಕ ಲೋಪದೋಷಗಳನ್ನು ಗುರುತಿಸುತ್ತಲೇ ಸರ್ಕಾರದ ಆಡಳಿತದಲ್ಲಿ ಕಣ್ಣಿಗೆ ಕಾಣದಂತೆ ಮರೆಯಾಗಿರುವ ಅಕ್ರಮಗಳ ದಾಖಲೆಗಳನ್ನು ಭೂತ ಗಾಜಿನಿಂದ ಹುಡುಕಿ ಹೊರತೆಗೆದು ಬಹಿರಂಗಪಡಿಸುವ ಮೂಲಕ ಸರ್ಕಾರದ ನಾಯಕತ್ವವನ್ನು ತುದಿಗಾಲ ಮೇಲೆ ನಿಲ್ಲಿಸುವುದು ಪ್ರತಿಪಕ್ಷ ಹಾಗೂ ಅದರ ನಾಯಕತ್ವದ ಮಹತ್ವದ ಕೆಲಸ. ಇತ್ತೀಚಿನ ದಿನಮಾನಗಳಲ್ಲಿ ಪ್ರತಿಪಕ್ಷದ ನಾಯಕರು ಕೇವಲ ಪ್ರತಿಕ್ರಿಯೆಗೆ ಸೀಮಿತವಾಗಿಯೇ ಕಾರ್ಯನಿರ್ವಹಿಸುತ್ತಿರುವ ಯಥಾಸ್ಥಿತಿಯ ಧೋರಣೆಯಿಂದಾಗಿ ಆಳುವ ಸರ್ಕಾರಗಳು ಪ್ರತಿಪಕ್ಷಗಳ ಮಾತಿಗೆ ಅಷ್ಟಾಗಿ ಮಾನ್ಯತೆ ಕೊಡದೇ ಇರಲು ಕಾರಣ.
ಶಾಸನಸಭೆಯಲ್ಲಿ ಶಾಸಕರ ಮಾತಿಗೆ ಹೆಚ್ಚಿನ ಬೆಲೆ. ಆದರೆ, ಇತೀಚಿನ ವರ್ಷಗಳಲ್ಲಿ ಸವಕಳಿ ಮಾತುಗಳೇ ಹೆಚ್ಚಾಗಿ ಖಂಡನೆ ಇಲ್ಲವೇ ಮಂಡನೆಗಳೇ ಪ್ರವಾಹದ ರೂಪದಲ್ಲಿ ಕಾಣಿಸಿಕೊಳ್ಳುವ ಪರಿಣಾಮ ಶಾಸನಸಭೆಯ ಕಲಾಪ ಸಪ್ಪೆ ಎನಿಸುವಂತಾಗಿದೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಒಕ್ಕಲೆಬ್ಬಿಸುವ ನಿಯಮಾವಳಿಯ ತಿದ್ದುಪಡಿಗೆ ಮಂಡನೆಯಾಗುವ ಕರಡು ವಿಧೇಯಕದ ಬಗ್ಗೆ ಚರ್ಚೆಗೆ ಮುಂದಾಗುವ ಶಾಸಕರು ಒಕ್ಕಲೆಬ್ಬಸುವ ವಿಚಾರವನ್ನು ಬಿಟ್ಟು ತಮ್ಮ ಊರಿನಲ್ಲಿ ಕಾಡು ಕಣ್ಮರೆಯಾಗುತ್ತಿರುವ ಜೊತೆಗೆ ಸಾಮಾಜಿಕ ಅರಣ್ಯ ನೀತಿ ಗಾಳಿಯಲ್ಲಿಯೇ ತೇಲುತ್ತಿರುವ ಸ್ಥಿತಿ ಇರುವ ಬಗ್ಗೆ ಮಾತನಾಡಲು ಮುಂದಾದಾಗ ಸರ್ಕಾರ ಹಾಡಿದ್ದೇ ಹಾಡುವ ಕಿಸಬಾಯಿ ದಾಸರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೆ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಳ್ಳಲು ಮುಂದಾಗುತ್ತದೆ. ಶಾಸನಗಳ ರಚನೆ ಶಾಸನಸಭೆಯ ಪ್ರಧಾನ ಕರ್ತವ್ಯ. ಇದರ ಮೇಲೆ ಚರ್ಚಿಸಲು ಶಾಸಕರಿಗೆ ಪೂರ್ವ ಸಿದ್ಧತೆ ಅಗತ್ಯ. ಕೆಲವರನ್ನು ಹೊರತುಪಡಿಸಿದರೆ ಬಹುತೇಕ ಮಂದಿ ತಯಾರಿಯೇ ಇಲ್ಲದೆ ಶಾಸನಸಭೆಗೆ ಬರುವ ಪರಿಣಾಮ ಕಲಾಪ ನೀರಸವಾಗುತ್ತದೆ. ಇಂತಹ ಸಂದರ್ಭದಲ್ಲಿ ಇದನ್ನು ಕಳೆಗಟ್ಟುವಂತೆ ಮಾಡುವ ಹೊಣೆಗಾರಿಕೆ ಪ್ರತಿಪಕ್ಷದ ನಾಯಕತ್ವಕ್ಕೆ ಇದೆ.
೧೯೭೨ರಲ್ಲಿ ದೇವರಾಜ ಅರಸು ನೇತೃತ್ವದ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗ ವಿದ್ಯುಕ್ತವಾದ ವಿರೋಧ ಪಕ್ಷವಿರಲಿಲ್ಲ. ಪ್ರಧಾನ ಪ್ರತಿಪಕ್ಷ ಎನಿಸಿಕೊಂಡಿದ್ದ ಸಂಸ್ಥಾ ಕಾಂಗ್ರೆಸ್‌ಗೆ ಪ್ರತಿಪಕ್ಷದ ಸ್ಥಾನಮಾನ ಪಡೆಯಲು ಶಾಸಕರ ಸಂಖ್ಯಾಬಲವಿರಲಿಲ್ಲ. ಸಮಾಜವಾದಿ ಪಕ್ಷಗಳ ಶಾಸಕರ ಸಂಖ್ಯೆಯೂ ಕಡಿಮೆ. ಪ್ರಜಾಪ್ರಭುತ್ವದಲ್ಲಿ ಅತೀವ ವಿಶ್ವಾಸ ಹೊಂದಿದ್ದ ದೇವರಾಜ ಅರಸು ಅವರು ಸಂಖ್ಯಾ ಬಲದ ಷರತ್ತುಗಳಿಗೆ ವಿನಾಯ್ತಿ ನೀಡಿ ಸಂಸ್ಥಾ ಕಾಂಗ್ರೆಸ್‌ಗೆ ಪ್ರತಿಪಕ್ಷದ ನಾಯಕತ್ವದ ಸ್ಥಾನ ದೊರೆಯುವಂತೆ ಮಾಡಿದ ನಂತರ ಎಚ್.ಡಿ. ದೇವೇಗೌಡ ಅವರು ಆ ಸ್ಥಾನದ ಮೂಲಕ ಶಾಸನಸಭೆಯ ಘನತೆ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಡಳಿತದ ಲೋಪದೋಷಗಳನ್ನು ಪಟ್ಟಿ ಮಾಡಿ ಅಧ್ಯಯನ ಮಾಡಲು ಹೈಕೋರ್ಟ್ ಹಿಂಭಾಗದಲ್ಲಿ ಕಬ್ಬನ್‌ಪಾರ್ಕಿನ ಹುಲ್ಲು ಹಾಸಿನ ಮೇಲೆ ತದೇಕಚಿತ್ತದಿಂದ ಅಧ್ಯಯನ ಮಾಡುತ್ತಿದ್ದ ರೀತಿಯನ್ನು ಈಗಲೂ ಸ್ಮರಿಸಿಕೊಳ್ಳುವವರಿದ್ದಾರೆ. ಗೌಡರು ಮುಖ್ಯಮಂತ್ರಿಯಾಗಿ ನಂತರ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಲು ಪಟ್ಟಿರುವ ಶ್ರಮ ಅವರಿಗಷ್ಟೇ ಗೊತ್ತಿತ್ತು. ಶಾಸನಸಭೆಯನ್ನು ಪವಿತ್ರ ದೇಗುಲ ಎಂದು ಭಾವಿಸಿ ಅಧ್ಯಯನದ ಮೂಲಕವೇ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಸವಾಲುಗಳನ್ನು ಒಡ್ಡುವ ರೀತಿಯಲ್ಲಿ ಆರೋಪಗಳ ಮೇಲೆ ಆರೋಪಗಳನ್ನು ಹೊರಿಸಿ ಪ್ರತಿಪಕ್ಷದ ಮಹತ್ವವನ್ನು ಎತ್ತಿತೋರಿಸಿದ್ದನ್ನು ಯಾರೊಬ್ಬರೂ ಮರೆಯುವಂತಿಲ್ಲ. ವಿಧಾನಸಭೆಯಲ್ಲಿ ದೇವೇಗೌಡರು ವಿಧಾನ ಪರಿಷತ್ತಿನಲ್ಲಿ ರಾಮಕೃಷ್ಣ ಹೆಗಡೆಯವರು ಸರ್ಕಾರದ ವಿರುದ್ಧ ಮೊಳಗಿಸುತ್ತಿದ್ದ ನಗಾರಿ ಸದ್ದು ಸಾರ್ವಜನಿಕ ವಲಯದಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿ ಸಾರ್ವತ್ರಿಕ ಅಭಿಪ್ರಾಯ ರೂಪುಗೊಳ್ಳಲು ಸಾಧ್ಯವಾಗುತ್ತಿತ್ತು. ಅದೇ ರೀತಿ, ಎಸ್.ಆರ್. ಬೊಮ್ಮಾಯಿ ಅವರು ಪ್ರತಿಪಕ್ಷದ ನಾಯಕರಾಗಿ ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಕಾರ್ಯ ನಿರ್ವಹಿಸುವ ರೀತಿ ಮರೆಯುವಂತಿಲ್ಲ. ಅಷ್ಟೇ ಏಕೆ ಎಸ್. ಶಿವಪ್ಪ ಅವರು ಪ್ರತಿಪಕ್ಷದ ನಾಯಕರಾಗಿ ಪೂರ್ವ ಸಿದ್ಧತೆಯೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿಗೆ ಹಲವಾರು ಸಂಪುಟ ಸದಸ್ಯರು ದಿಗ್ಬ್ರಮೆಗೊಳ್ಳುತ್ತಿದ್ದ ಸಂಗತಿಯನ್ನು ಈಗಲೂ ನೆನಪಿಸಿಕೊಳ್ಳುವವರಿದ್ದಾರೆ.
ಪ್ರತಿಪಕ್ಷದ ನಾಯಕರಿಗೆ ತಾವು ಚುನಾಯಿತರಾಗಿರುವ ಪಕ್ಷದ ಹಂಗು ಇರುವುದು ಸ್ವಾಭಾವಿಕ. ಆದರೆ, ಈ ಹಂಗಿನ ಜೊತೆಗೆ ನಾಡಿನ ಸಮಸ್ತ ಕಲ್ಯಾಣದ ಗುಂಗನ್ನು ಹೊತ್ತು ಜನರ ಸಂತಸದಲ್ಲಿ ಸಂಕಟಗಳನ್ನು ಹಾಗೂ ಸಂಕಟಗಳಲ್ಲಿ ಸಂತಸವನ್ನೂ ಕಾಣುವ ವಿಶಿಷ್ಟ ಗುಣವನ್ನು ಆರ್ಜಿಸಿಕೊಂಡು ಸಮಚಿತ್ತದಿಂದ ವಾದದ ಮಂಡನೆಗೆ ಮುಂದಾದರೆ ನಿಜವಾಗಲೂ ಆಗ ಪ್ರಜಾಪ್ರಭುತ್ವದ ಬೆಳಕಿನಲ್ಲಿ ಸರ್ಕಾರದ ರಥಯಾತ್ರೆ ಸುಗಮವಾಗಿ ಸಾಗಲು ಸಾಧ್ಯ. ಇನ್ನೊಂದು ಮಾತು. ಎಂತಹ ಕೆಟ್ಟ ಸರ್ಕಾರವೇ ಆದರೂ ಚುನಾಯಿತ ಸರ್ಕಾರವೇ ಯಾವತ್ತಿಗೂ ಜನರಿಗೆ ಹಿತವನ್ನು ಮಾಡಬಲ್ಲದು. ಅಧಿಕಾರಿಗಳ ಇಲ್ಲವೇ ವಿದ್ವಾಂಸರ ಮೂಲಕ ನಡೆಯುವ ಸರ್ಕಾರ ಒಳ್ಳೆಯದಾಗಿ ಕಂಡರೂ ಅದು ಜನರಿಗೆ ಕೇಡನ್ನಷ್ಟೆ ಮಾಡಲು ಸಾಧ್ಯ. ಏಕೆಂದರೆ, ಈ ಸರ್ಕಾರಕ್ಕೆ ಜನರ ಉತ್ತರದಾಯಿತ್ವ ಇರುವುದಿಲ್ಲ.
ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸುಭದ್ರ ಸುಸ್ಥಿರ ಆಡಳಿತ ನಿಸೂರಾಗಿ ನಡೆಯಬೇಕೆಂದರೆ ಸುಭದ್ರ ಮನಸ್ಥಿತಿ ಹಾಗೂ ಸುಸ್ಥಿರ ವ್ಯಕ್ತಿತ್ವವಿರುವ ಪ್ರತಿಪಕ್ಷದ ನಾಯಕತ್ವ ಅಗತ್ಯವಿದೆ. ಅಂಕಿ ಸಂಖ್ಯೆಗಳ ಆಧಾರದ ಮೇಲೆ ಈಗ ಪ್ರತಿಪಕ್ಷದ ನಾಯಕತ್ವದ ಸ್ಥಾನ ನಿರ್ವಹಿಸುವ ಅವಕಾಶ ಬಿಜೆಪಿ ಅವರಿಗೆ ಬಂದಿದೆ. ಹಿಂದಿನ ತಮ್ಮ ಸರ್ಕಾರದ ಆಡಳಿತ ಕಾಲದ ಅನುಭವಗಳನ್ನು ಆಧರಿಸಿ ಈಗಿನ ಸರ್ಕಾರಕ್ಕೆ ತಿಳಿಹೇಳುವ ಜೊತೆಗೆ ಹಿಂದಿನ ಸರ್ಕಾರ ಏನಾದರೂ ಜಾರಿ ಬಿದ್ದಿದ್ದರೆ ಅದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡು ಸರ್ಕಾರಕ್ಕೆ ಬುದ್ಧಿವಾದ ಹೇಳುವ ಮಾರ್ಗವನ್ನು ಅನುಸರಿಸಿದರೆ ನಿಜವಾಗಲೂ ಕರ್ನಾಟಕವೆಂಬುದು ಸರ್ವಜನಾಂಗದ ಶಾಂತಿಯ ತೋಟವಾಗಿ ರೂಪುಗೊಳ್ಳಲು ಸಾಧ್ಯ.

Previous articleವ್ಯಕ್ತಿಗತ ಸದಾಚಾರದಿಂದ ದೇಶ, ಜಗತ್ತಿಗೂ ಹಿತ
Next articleಹಳಿತಪ್ಪಿದ ಎಲ್‌ಪಿಜಿ ತುಂಬಿದ ಗೂಡ್ಸ್ ರೈಲಿನ ಬೋಗಿಗಳು