ಲಕ್ನೋ: ಕೇಂದ್ರ ಸರ್ಕಾರ ಶನಿವಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶಾದ್ಯಂತ ಕೋಟ್ಯಂತರ ರೈತರಿಗೆ 20ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ಯೋಜನೆಯಡಿಯಲ್ಲಿ ರೈತರಿಗೆ ವಾರ್ಷಿಕ 6000 ರೂ.ಗಳ ಸಹಾಯವನ್ನು ನೀಡಲಾಗುತ್ತದೆ.
ರೈತರು ಈ ಮೊತ್ತವನ್ನು 3 ಕಂತುಗಳಲ್ಲಿ ಪಡೆಯುತ್ತಾರೆ. ರೈತರು ತಮ್ಮ ಬ್ಯಾಂಕ್ ಖಾತೆಗೆ 2,000 ರೂ.ಗಳನ್ನು ಶನಿವಾರವೇ ಪಡೆಯಲಿದ್ದಾರೆ. ಅರ್ಹ ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಹಣ ಜಮೆ ಆಗಲಿದೆ. ದೇಶಾದ್ಯಂತ 9.7 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 20,500 ಕೋಟಿ ರೂ.ಗೂ ಹೆಚ್ಚು ಹಣ ಜಮೆಯಾಗಲಿದೆ.
ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸದ, ಪ್ರಧಾನಿ ನರೇಂದ್ರ ಮೋದಿ ಹಣವನ್ನು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಅವರು ಸುಮಾರು 2,200 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನೂ ನೆರವೇರಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಪೋಸ್ಟ್ ಮಾಡಿದ್ದು ”ಕಾಶಿಯಲ್ಲಿರುವ ನನ್ನ ಕುಟುಂಬ ಸದಸ್ಯರಿಗೆ ಆಗಸ್ಟ್ 2ರಂದು ವಿಶೇಷ ದಿನವಾಗಿದೆ. ಶಿಕ್ಷಣ, ಆರೋಗ್ಯ, ಕ್ರೀಡೆ, ಪ್ರವಾಸೋದ್ಯಮ ಮತ್ತು ಸಂಪರ್ಕಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ಮಾಡಲಿದ್ದೇನೆ. ಇದೇ ವೇಳೆ ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದೇನೆ” ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಒಟ್ಟು ವಿತರಣೆ 3.90 ಲಕ್ಷ ಕೋಟಿ ರೂ. ಮೀರುತ್ತದೆ. ಕರ್ನಾಟಕದ 44 ಲಕ್ಷ ರೈತರಿಗೆ 942.17 ಕೋಟಿ ಹಣ ಬಿಡುಗಡೆ ಆಗಲಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್ ಜೋಷಿ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಬಿಡುಗಡೆಯಾಗಲಿರುವ ಕಿಸಾನ್ ಸಮ್ಮಾನ್ ನಿಧಿ ಕಂತಿನಲ್ಲಿ, ಧಾರವಾಡ ಜಿಲ್ಲೆಯ 99 ಸಾವಿರದ 983 ರೈತರಿಗೆ 20.15 ಕೋಟಿ ಅನುದಾನ ದೊರೆಯಲಿದೆ ಎಂದು ಹೇಳಿದ್ದಾರೆ.
2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಕೃಷಿಕರಿಗೆ ಕೇಂದ್ರ ಸರ್ಕಾರ ವರ್ಷಕ್ಕೆ 6,000 ರೂ ನೀಡುತ್ತದೆ. ಯೋಜನೆಯ ಲಾಭ ಪಡೆಯಲು ರೈತರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸರಬೇಕು. ಇಲ್ಲದಿದ್ದರೆ, ಫಲಾನುಭವಿಗಳು ಪಟ್ಟಿಯಿಂದ ಹೆಸರು ತೆಗೆದುಹಾಕಲಾಗುವ ಸಾಧ್ಯತೆ ಇದೆ.
ಆದದ್ದರಿಂದ ರೈತರು ಮುಂಚೆಯೇ ಇ-ಕೆವೈಸಿ ದೃಢಪಡಿಸಿಕೊಳ್ಳುವುದು ಉತ್ತಮ. ವರ್ಷದಲ್ಲಿ 3 ಕಂತುಗಳಲ್ಲಿ ಈ ಹಣವನ್ನು ನೀಡಲಾಗುತ್ತದೆ. ಈವರೆಗೆ 19 ಕಂತುಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಒಟ್ಟಾರೆ 3.69 ಲಕ್ಷ ಕೋಟಿ ರೂ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಿದೆ.