ಅಡಿಕೆ ಬೆಳೆಗಾರರಿಗೆ ನೆಮ್ಮದಿಯ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ

0
73

ಬೆಂಗಳೂರು: ಮಲೆನಾಡು, ಕರಾವಳಿ ಭಾಗಕ್ಕೆ ಸೀಮಿತವಾಗಿದ್ದ ಅಡಿಕೆ ಈಗ ರಾಜ್ಯಾದ್ಯಂತ ಬೆಳೆಯುವ ಬೆಳೆಯಾಗಿದೆ. ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಅಡಿಕೆ ಉತ್ಪಾದನೆ ಮಾಡುವ ರಾಜ್ಯವಾಗಿದೆ. ರಾಜ್ಯದಲ್ಲಿ 6.77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು 10.32 ಲಕ್ಷ ಟನ್ ಅಡಿಕೆ ಉತ್ಪಾದನೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ.

ಕರ್ನಾಟಕದ ಅಡಿಕೆ ಬೆಳೆಗಾರರನ್ನು ಸದಾ ಕಾಡುವ ಚಿಂತೆ ಅಡಿಕೆ ಆಮದು. ವಿವಿಧ ದೇಶಗಳಿಂದ ಅಡಿಕೆ ಆಮದು ಮಾಡಿಕೊಂಡರೆ ಇಲ್ಲಿನ ಬೆಳೆಗೆ ಬೆಲೆ ಸಿಗುವುದಿಲ್ಲ ಎಂಬುದು ರೈತರ ಆತಂಕವಾಗಿದೆ. ಆದರೆ ಈಗ ಅಡಿಕೆ ಬೆಳೆಗಾರರಿಗೆ ನೆಮ್ಮದಿಯ ಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದೆ.

ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ 2025-26ನೇ ಆರ್ಥಿಕ ವರ್ಷದಲ್ಲಿ 10 ರಾಷ್ಟ್ರಗಳಿಂದ 1,064 ಕೋಟಿ ಮೊತ್ತದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗಿದೆ. ಆದರೆ ದೇಶಿಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕುಸಿದಿಲ್ಲ ಎಂದು ತಿಳಿಸಿದೆ.

ಅಡಿಕೆ ದರ ಎಷ್ಟಿದೆ?: ವಿವಿಧ ದೇಶಗಳಿಂದ ಅಡಿಕೆ ಆಮದು ಮಾಡಿಕೊಂಡರೂ ದೇಶಿಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಮೇಲೆ ಪರಿಣಾಮ ಉಂಟಾಗಿಲ್ಲ. ಶಿರಸಿ ಮಾರುಕಟ್ಟೆಯಲ್ಲಿ 2024ರ ಜನವರಿ-ಜೂನ್ ಅವಧಿಯಲ್ಲಿ ಕ್ವಿಂಟಾಲ್ ಅಡಿಕೆ ಬೆಲೆ 36,316 ರೂ. ಇತ್ತು. ಈ ವರ್ಷ ಅದು 37,856ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರ ವಿವರಣೆ ನೀಡಿದೆ.

ಭಾರತ ಶ್ರೀಲಂಕಾ, ಮ್ಯಾನ್ಮಾರ್, ಇಂಡೋನೇಷ್ಯಾ, ಬಾಂಗ್ಲಾದೇಶ, ಯುಎಇ, ನೇಪಾಳ, ಒಮಾನ್, ಮಲೇಷ್ಯಾ, ಸಿಂಗಪುರ ಮತ್ತು ಥಾಯ್ಲೆಂಡ್‌ನಿಂದ ಅಡಿಕೆ ಆಮದು ಮಾಡಿಕೊಳ್ಳುತ್ತದೆ.

ಆದರೆ ಬಹುಪಾಲು ಅಡಿಕೆ ಶ್ರೀಲಂಕಾ, ಮ್ಯಾನ್ಮಾರ್, ಇಂಡೋನೇಷ್ಯಾದಿಂದ ಬರುತ್ತದೆ. ಕಳೆದ ಮೂರು ಹಣಕಾಸು ವರ್ಷಗಳಿಂದ ಅಡಿಕೆ ಆಮದು ಕಡಿಮೆಯಾಗುತ್ತಿದೆ. ಆದ್ದರಿಂದ ದೇಶಿಯ ಅಡಿಕೆ ಬೆಳೆಗಾರರಿಗೆ ಯಾವುದೇ ಆತಂಕ ಬೇಡ ಎಂದು ಕೇಂದ್ರ ಸರ್ಕಾರ ಹೇಳಿದೆ.

2021-22ರಲ್ಲಿ 789 ಕೋಟಿ, 2022-23ರಲ್ಲಿ 2,261 ಕೋಟಿ, 2023-24ರಲ್ಲಿ 1,296 ಕೋಟಿ, 2024-25ರಲ್ಲಿ 1,256 ಕೋಟಿ ಮತ್ತು 2025-26ರಲ್ಲಿ 1064 ಕೋಟಿ ರೂ. ಮೌಲ್ಯದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗಿದೆ.

ಈ ವರ್ಷ ಶಿವಮೊಗ್ಗ, ಶಿರಸಿ ಸೇರಿದಂತೆ ಯಾವುದೇ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕುಸಿತವಾಗಿಲ್ಲ. ಒಂದೇ ಮಾದರಿಯ ದರವಿತ್ತು. ಕಳೆದ ವರ್ಷ ಸುರಿದ ಭಾರೀ ಮಳೆಯ ಕಾರಣ ಈ ಬಾರಿ ಹಲವು ರೈತರು ಬೆಳೆ ನಷ್ಟ ಅನುಭವಿಸಿದ್ದರು. ಕೊಳೆ ರೋಗ, ಎಲೆ ಚುಕ್ಕಿ ರೋಗ ಅಡಿಕೆ ಬೆಳೆಯನ್ನು ನಿರಂತರವಾಗಿ ಕಾಡುತ್ತಲೇ ಇದೆ.

ಅಡಿಕೆ ಮಂಡಳಿ ಸ್ಥಾಪನೆ ಇಲ್ಲ: ಭಾರತದಲ್ಲಿಯೇ ಅತಿ ಹೆಚ್ಚು ಅಡಿಕೆ ಬೆಳೆಯುವ ರಾಜ್ಯ ಕರ್ನಾಟಕ. ಆದರೆ ಅಡಿಕೆ ಬೆಳೆ ವಿಸ್ತರಣೆ ಹಾಗೂ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಲು ಕರ್ನಾಟಕದಲ್ಲಿ ಪ್ರತ್ಯೇಕ ಅಡಿಕೆ ಮಂಡಳಿ ಸ್ಥಾಪನೆ ಮಾಡುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಕಾಫಿ ಮಂಡಳಿ, ರಬ್ಬರ್ ಮಂಡಳಿ, ಟೀ ಮಂಡಳಿ ಮಾದರಿಯಲ್ಲಿ ಕರ್ನಾಟಕದಲ್ಲಿ ಪ್ರತ್ಯೇಕ ಅಡಿಕೆ ಮಂಡಳಿ ಸ್ಥಾಪನೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆಯೇ? ಎಂದು ರಾಜ್ಯಸಭೆಯಲ್ಲಿ ಡಾ.ವೀರೇಂದ್ರ ಹೆಗ್ಗಡೆ ಪ್ರಶ್ನೆ ಮಾಡಿದ್ದರು. ಆದರೆ ಈ ಪ್ರಸ್ತಾಪವಿಲ್ಲ ಎಂದು ಕೇಂದ್ರ ಹೇಳಿದೆ.

Previous articleBDA Flat: ಬೆಂಗಳೂರಲ್ಲಿ ಮನೆ ಕೊಳ್ಳುವವರಿಗೆ ಗುಡ್ ನ್ಯೂಸ್, ಬಿಡಿಎ ಫ್ಲಾಟ್ ಮೇಳ
Next articleವಿವಾದಾತ್ಮಕ ಹೇಳಿಕೆ, ರಾಜಕೀಯ ನಿವೃತ್ತಿ, ಸಚಿವ ಸ್ಥಾನಕ್ಕೆ ರಾಜೀನಾಮೆ: ಕೆ.ಎನ್.ರಾಜಣ್ಣ ಪರಿಚಯ

LEAVE A REPLY

Please enter your comment!
Please enter your name here