ಧಾರವಾಡ: ಒಂದೇ ಸೂರಿನಡಿ ರೈತರ ಬಿತ್ತನೆಗೆ ಅನುಕೂಲವಾಗುವ ಉಪಕರಣ ಮತ್ತು ಜ್ಞಾನವನ್ನು ಒದಗಿಸಬೇಕೆಂಬ ಉದ್ದೇಶದಿಂದ ಪ್ರಾರಂಭವಾದ ಅನ್ನದಾತನ ಹಬ್ಬಕ್ಕೆ ಇಂದಿನಿಂದ ಚಾಲನೆ ದೊರೆಯಲಿದ್ದು, ಸಕಲ ಸಿದ್ಧತೆ ಪೂರ್ಣಗೊಂಡಿದೆ.
ಪ್ರತಿ ವರ್ಷ ಒಂದೊಂದು ಘೋಷವಾಕ್ಯದೊಂದಿಗೆ ನಡೆಸಲಾಗುತ್ತಿರುವ ಕೃಷಿ ಮೇಳ ಈ ಬಾರಿ ಮಣ್ಣಿನ ಫಲವತ್ತತೆಗೆ ಒತ್ತು ನೀಡಿದ್ದು, ಪೌಷ್ಟಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು ಎಂಬ ಘೋಷವಾಕ್ಯದೊಂದಿಗೆ ಕೃಷಿ ಮೇಳ ನಡೆಸಲಾಗುತ್ತಿದೆ. ಫಲವತ್ತಾದ ಮಣ್ಣಿನಿಂದಲೇ ಎಲ್ಲವೂ ಸಾಧ್ಯ. ಜೊತೆಗೆ ಸಾಂಪ್ರದಾಯಿಕ ತಳಿಗಳನ್ನು ರೈತರು ಬೆಳೆಯಲು ಉತ್ತೇಜನ ನೀಡುವುದು ಈ ಬಾರಿಯ ಕೃಷಿ ಮೇಳದ ಪ್ರಮುಖ ವಿಷಯ ವಸ್ತುವಾಗಿದೆ.
162 ಹೈಟೆಕ್ ಮಳಿಗೆಗೆಳು: ಕೃಷಿ ವಸ್ತು ಪ್ರದರ್ಶನಕ್ಕೆ 162 ಹೈಟೈಕ್ ಮಳಿಗೆ ಹಾಗೂ 272 ಸಾಮಾನ್ಯ ಮಳಿಗೆ, 99 ಯಂತ್ರೋಪಕರಣ ಮಳಿಗೆ, 50 ಜಾನುವಾರು ಪ್ರದರ್ಶನ ಮಳಿಗೆ 13 ಕ್ಷೇತ್ರ ಮಳಿಗೆಗಳು ಹಾಗೂ 29 ಆಹಾರ ಮಳಿಗೆಗಳನ್ನು ತೆರೆದಿದ್ದು, ಶುಕ್ರವಾರ ಎಲ್ಲ ಮಳಿಗೆದಾರರು ತಮ್ಮ ತಮ್ಮ ಮಳಿಗೆಗಳಿಗೆ ವಸ್ತುಗಳನ್ನು ಇಟ್ಟು ಸಿದ್ಧತೆ ಮಾಡಿಕೊಳ್ಳುವ ದೃಶ್ಯಗಳು ಕಂಡುಬಂದವು. ಇದರ ಜೊತೆಗೆ ನರ್ಸರಿ, ಹಣಕಾಸು ಸಂಸ್ಥೆಗಳು, ನೀರಾವರಿ ಮತ್ತು ಕೃಷಿ ಉಪಕರಣಗಳು, ಕೃಷಿ ಯಂತ್ರೋಪಕರಣಗಳು, ಕ್ಷೇತ್ರ ಪ್ರಾತ್ಯಕ್ಷಿಕೆಗಳು, ಭಾರಿ ಯಂತ್ರೋಪಕರಣಗಳ ಪ್ರದಶನಕ್ಕೆ ಮಳಿಗೆಗಳನ್ನು ಸ್ಥಾಪಿಸಿರುವುದು ವಿಶೇಷವಾಗಿದೆ.
ಮೇಳದ ಆಕರ್ಷಣೆಗಳು: ಪ್ರಸ್ತುತ ಕೃಷಿ ಮೇಳದಲ್ಲಿ ಬೀಜಮೇಳ, ಕೃಷಿ ತಜ್ಞರೊಂದಿಗೆ ಸಮಾಲೋಚನೆ ಹಾಗೂ ಕೃಷಿ ನವೋದ್ಯಮಗಳು, ಸಮಗ್ರ ಬೆಳೆ, ಪೋಷಕಾಂಶ ಹಾಗೂ ಪೀಡೆಗಳ ನಿರ್ವಹಣೆ, ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ಹೈಟೆಕ್ ತೋಟಗಾರಿಕೆ, ಫಲ-ಪುಷ್ಪ ಪ್ರದರ್ಶನ ಹಾಗೂ ವಿಸ್ಮಯಕಾರಿ ಕೀಟ ಪ್ರಪಂಚ, ಸುಧಾರಿತ ಕೃಷಿ ಯಂತ್ರೋಪಕರಣ ಹಾಗೂ ಕಿಸಾನ್ ಡ್ರೋನ್ ಬಳಕೆ, ರೈತರ ಆವಿಷ್ಕಾರಗಳು, ವಿಶೇಷ ಸಾಧನೆಗೈದ ರೈತರೊಂದಿಗೆ ಸಂವಾದ, ಕೃಷಿ ಅರಣ್ಯ, ಪಶು ಸಂಗೋಪನೆ, ಜಾನುವಾರುಗಳ ಪ್ರದರ್ಶನ ಹಾಗೂ ಮೇವಿನ ಬೆಳೆಗಳ ತಾಂತ್ರಿಕತೆ, ಸಾಂಪ್ರದಾಯಿಕ ತಳಿಗಳ ಪ್ರಾಮುಖ್ಯತೆ ಹಾಗೂ ಸಂರಕ್ಷಣೆ, ಸುಸ್ಥಿರತೆಗಾಗಿ ಹಾಗೂ ಪರಿಸರ ಸ್ನೇಹಿ ನೈಸರ್ಗಿಕ ಮತ್ತು ಸಾವಯವ ಕೃಷಿ, ಮಹಿಳೆಯರ ಸಬಲೀಕರಣಕ್ಕೆ ಸಮುದಾಯ ವಿಜ್ಞಾನ ತಾಂತ್ರಿಕತೆಗಳು ಕೃಷಿ ಮೇಳದ ಪ್ರಮುಖ ಆಕರ್ಷಣೆಗಳಾಗಿವೆ.
3516.91 ಕ್ವಿ. ಬೀಜ ದಾಸ್ತಾನು: ಪ್ರಸ್ತುತ ಕೃಷಿ ಮೇಳದಲ್ಲಿ ಹಿಂಗಾರು ಹಂಗಾಮಿನ ಬೆಳೆಗಾಗಿ 219.37 ಕ್ವಿ. ಜೋಳ, 581.34 ಕ್ವಿ. ಗೋಧಿ, 2548 ಕ್ವಿ ಕಡಲೆ, 81.4 ಕ್ವಿ. ಕುಸುಬೆ, 45.2 ಕ್ವಿ. ಉದ್ದು, 29 ಕ್ವಿ ಅಲಸಂದಿ, 10.8 ಕ್ವಿ ಶೇಂಗಾ, 1.8 ಕ್ವಿ ಊದಲು ಸೇರಿ ಒಟ್ಟು 3516.91 ಕ್ವಿ ಬೀಜ ದಾಸ್ತಾನು ಮಾಡಲಾಗಿದ್ದು, ಬೀಜ ಮೇಳದಲ್ಲಿ ರೈತರಿಗೆ ವಿತರಣೆ ಮಾಡಲು ಕೃಷಿ ವಿವಿ ಸಜ್ಜಾಗಿದೆ.
ರೈತರಿಂದ ರೈತರಿಗಾಗಿ: ಪ್ರತಿದಿನ ಮಧ್ಯಾಹ್ನ 2.30ಕ್ಕೆ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ವಿಶೇಷ ತರಬೇತಿ ಕಾರ್ಯಕ್ರಮಗಳು ನಡೆಯಲಿವೆ. ಮೊದಲ ದಿನವಾದ ಶನಿವಾರ ಎಕರೆಗೆ 100 ಟನ್ ಕಬ್ಬು ಇಳುವರಿಗೆ ವಿಶೇಷ ತಾಂತ್ರಿಕತೆಗಳು, ಎರಡನೇ ದಿನ ಅಧಿಕ ಇಳುವರಿಗಾಗಿ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ, ಮೂರನೇ ದಿನ ಜಾನುವಾರು ನಿರ್ವಹಣೆಯಲ್ಲಿ ನವೀನ ತಂತ್ರಜ್ಞಾನಗಳು ಹಾಗೂ ನಾಲ್ಕನೇ ದಿನ ಹೈ-ಟೆಕ್ ತೋಟಗಾರಿಕೆ ತಂತ್ರಜ್ಞಾನ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.