ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಟನೆಯ ಬಹುನಿರೀಕ್ಷಿತ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ‘ಪೆದ್ದಿ’ ಜೂನ್ 4ರ ಗುರುವಾರ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ರಿಲೀಸ್ ಆದ ಮೊದಲ ದಿನವೇ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿರುವ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಸುನಾಮಿ ಸೃಷ್ಟಿಸಿದೆ. ಪ್ರೇಕ್ಷಕರಿಂದ ಸಿಗುತ್ತಿರುವ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ‘ಪೆದ್ದಿ’ ಸಿನಿಮಾ ಕೇವಲ ಒಂದೇ ದಿನದಲ್ಲಿ ವರ್ಲ್ಡ್‌ವೈಡ್ 100 ಕೋಟಿ ರೂಪಾಯಿಗಳ ಗಡಿಯನ್ನು ದಾಟಿ ಮುನ್ನುಗ್ಗುತ್ತಿದೆ.
ಸುಮಾರು 350 ಕೋಟಿ ರೂಪಾಯಿ ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಪ್ಯಾನ್ ಇಂಡಿಯಾ ಚಿತ್ರವನ್ನು ವಿಶ್ವದಾದ್ಯಂತ ಬರೊಬ್ಬರಿ 12,412 ಶೋಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಮೊದಲ ದಿನವೇ ಈ ಸಿನಿಮಾ ಭಾರತದಲ್ಲಿ 51 ಕೋಟಿ ರೂಪಾಯಿ ಗಳಿಕೆ ಮಾಡಿದ್ದರೆ, ಅದಕ್ಕೂ ಒಂದು ದಿನ ಮುಂಚಿತವಾಗಿ ನಡೆದ ಪೇಯ್ಡ್ ಪ್ರೀಮಿಯರ್ ಶೋಗಳಿಂದಲೇ 18.50 ಕೋಟಿ ರೂಪಾಯಿ ಲೂಟಿ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಗ್ರಾಸ್ ಕಲೆಕ್ಷನ್ 82.49 ಕೋಟಿ ರೂಪಾಯಿ ತಲುಪಿದ್ದು, ವಿದೇಶಿ ಮಾರುಕಟ್ಟೆಯಿಂದಲೂ 30 ಕೋಟಿ ರೂಪಾಯಿ ಹರಿದು ಬಂದಿದೆ. ಪರಿಣಾಮವಾಗಿ, ‘ಪೆದ್ದಿ’ ಚಿತ್ರದ ಮೊದಲ ದಿನದ ಒಟ್ಟು ಜಾಗತಿಕ ಕಲೆಕ್ಷನ್ ಬರೋಬ್ಬರಿ 112.49 ಕೋಟಿ ರೂಪಾಯಿಗೆ ಬಂದು ನಿಂತಿದೆ.

ಮೂಲ ತೆಲುಗು ಭಾಷೆಯಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಆಂಧ್ರಪ್ರದೇಶ ಮತ್ತು ತೆಲಂಗಾಣದ ಗಲ್ಲಾಪೆಟ್ಟಿಗೆಯಿಂದಲೇ ಸಿಂಹಪಾಲು ಸಂದಾಯವಾಗಿದೆ. ಅಲ್ಲಿಂದಲೇ ಬರೋಬ್ಬರಿ 48 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು, ಇತ್ತ ನಮ್ಮ ಕರ್ನಾಟಕದಲ್ಲೂ ರಾಮ್ ಚರಣ್ ಕ್ರೇಜ್ ಜೋರಾಗಿಯೇ ಇದ್ದು, ಮೊದಲ ದಿನವೇ 5.75 ಕೋಟಿ ರೂಪಾಯಿ ಹರಿದುಬಂದಿದೆ. ಆದರೆ, ಹಿಂದಿ ಮಾರುಕಟ್ಟೆಯಲ್ಲಿ ಚಿತ್ರಕ್ಕೆ ಅಂದುಕೊಂಡಷ್ಟು ಮೈಲೇಜ್ ಸಿಕ್ಕಿಲ್ಲ. ಮೊದಲ ದಿನ ಹಿಂದಿಯಲ್ಲಿ ಕೇವಲ 3 ಕೋಟಿ ರೂಪಾಯಿ ಗಳಿಸಿರುವ ‘ಪೆದ್ದಿ’ ಸಿನಿಮಾಗೆ ಇಂದಿನಿಂದ (ಶುಕ್ರವಾರ) ಬಾಲಿವುಡ್‌ನಲ್ಲಿ ಅಗ್ನಿಪರೀಕ್ಷೆ ಎದುರಾಗಲಿದೆ. ಏಕೆಂದರೆ ವರುಣ್ ಧವನ್ ಅಭಿನಯದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಮತ್ತು ಬಾಬಿ ಡಿಯೋಲ್ ನಟನೆಯ ‘ಬಾಂದರ್’ ಸಿನಿಮಾಗಳು ಇಂದಿನಿಂದ ತೆರೆಕಾಣುತ್ತಿದ್ದು, ಇದು ‘ಪೆದ್ದಿ’ ಚಿತ್ರದ ಹಿಂದಿ ಕಲೆಕ್ಷನ್‌ಗೆ ದೊಡ್ಡ ಪೈಪೋಟಿ ನೀಡುವ ಸಾಧ್ಯತೆಯಿದೆ.
ಥಿಯೇಟರ್ ಆಕ್ಯುಪೆನ್ಸಿ ವಿಚಾರಕ್ಕೆ ಬಂದರೆ, ತೆಲುಗಿನ 2D ಆವೃತ್ತಿಗೆ ಶೇಕಡಾ 67.92 ರಷ್ಟು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ವಿಶೇಷವಾಗಿ ನೈಟ್ ಶೋಗಳು ಶೇಕಡಾ 76 ಕ್ಕೂ ಹೆಚ್ಚು ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಅಬ್ಬರಿಸಿವೆ. ಇನ್ನು ಈ ಚಿತ್ರದ ಯಶಸ್ಸನ್ನು ರಾಮ್ ಚರಣ್ ಅವರ ಹಿಂದಿನ ಚಿತ್ರವಾದ ‘ಗೇಮ್ ಚೇಂಜರ್’ಗೆ ಹೋಲಿಸಿದರೆ, ‘ಪೆದ್ದಿ’ ಭರ್ಜರಿ ಮೈಲೇಜ್ ಪಡೆದುಕೊಂಡಿದೆ. 2025ರ ಜನವರಿಯಲ್ಲಿ ರಿಲೀಸ್ ಆಗಿದ್ದ ‘ಗೇಮ್ ಚೇಂಜರ್’ ಹೆಚ್ಚು ಶೋಗಳನ್ನು ಹೊಂದಿದ್ದರೂ, ಮೊದಲ ದಿನ ಗಳಿಸಿದ್ದು 80 ಕೋಟಿ ಮಾತ್ರ. ಅಲ್ಲದೆ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋತಿತ್ತು. ಆದರೆ ‘ಪೆದ್ದಿ’ ಕೇವಲ ಒಂದೇ ದಿನದಲ್ಲಿ ಬಾಲಿವುಡ್ ಸೂಪರ್ ಸ್ಟಾರ್‌ಗಳಾದ ಶಾರುಖ್ ಖಾನ್ ಅವರ ‘ಪಠಾಣ್’, ಸಲ್ಮಾನ್ ಖಾನ್ ಅವರ ‘ಸಿಕಂದರ್’ ಹಾಗೂ ರಣವೀರ್ ಸಿಂಗ್ ಅವರ ‘ಧುರಂಧರ್’ ಸಿನಿಮಾಗಳ ಮೊದಲ ದಿನದ ದಾಖಲೆಯನ್ನು ಧೂಳೀಪಟ ಮಾಡಿದೆ.
ಆದರೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಓಪನಿಂಗ್ ಪಡೆದ ಟಾಪ್ 10 ಸಿನಿಮಾಗಳ ಪಟ್ಟಿಯಲ್ಲಿ ‘ಪುಷ್ಪ 2’, ‘ಆರ್‌ಆರ್‌ಆರ್’ ಮತ್ತು ‘ಕೆಜಿಎಫ್ 2’ ಮೊದಲ ಮೂರು ಸ್ಥಾನಗಳಲ್ಲಿದ್ದು, ‘ಪೆದ್ದಿ’ ಈ ಸಾಲಿಗೆ ಸೇರಲು ಸಾಧ್ಯವಾಗಿಲ್ಲದಿದ್ದರೂ, ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಕೆರಿಯರ್‌ನಲ್ಲಿ ಇದೊಂದು ಮೈಲಿಗಲ್ಲು ಸಿನಿಮಾ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.






















