ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ರ್ಯಾಲಿಯ ವೇಳೆ ಭೀಕರ ಆಕಸ್ಮಿಕವೊಂದು ಸಂಭವಿಸಿದೆ. ವಿರೋಧ ಪಕ್ಷದ ಪ್ರತಿಕೃತಿಯನ್ನು ದಹಿಸುವ ಸಂದರ್ಭದಲ್ಲಿ ಜ್ವಾಲೆ ತಗುಲಿ ಬಿಜೆಪಿ ಶಾಸಕಿ ಅನುಪಮಾ ಜೈಸ್ವಾಲ್ ಮುಖ ಸುಟ್ಟುಹೋಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ಮಧ್ಯಾಹ್ನ ಜಿಲ್ಲಾ ಕಲೆಕ್ಟರೇಟ್ ಕಚೇರಿಯ ಹೊರಗೆ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ‘ನಾರಿ ಶಕ್ತಿ ವಂದನ’ ಕಾರ್ಯಕ್ರಮದ ಭಾಗವಾಗಿ ಆಕ್ರೋಶ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸರ್ಕಾರದ ಉಸ್ತುವಾರಿ ಸಚಿವ ಸೂರ್ಯ ಪ್ರತಾಪ್ ಶಾಹಿ, ಸಂಸದ ಆನಂದ್ ಗೊಂಡ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ವಿರೋಧ ಪಕ್ಷಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರು ಪ್ರತಿಕೃತಿಯನ್ನು ದಹಿಸಲು ಮುಂದಾದರು.
ಕ್ಷಣಾರ್ಧದಲ್ಲಿ ಸಂಭವಿಸಿದ ಅವಾಂತರ: ಪ್ರತಿಕೃತಿಯನ್ನು ದಹಿಸಲು ಬೆಂಕಿ ಹಚ್ಚಿದ ತಕ್ಷಣ, ಅದು ಅನಿರೀಕ್ಷಿತವಾಗಿ ದೊಡ್ಡ ಮಟ್ಟದಲ್ಲಿ ಉರಿಯಲಾರಂಭಿಸಿತು. ಪ್ರತಿಕೃತಿಯ ಸಮೀಪದಲ್ಲೇ ನಿಂತಿದ್ದ ಸದರ್ ಶಾಸಕಿ ಅನುಪಮಾ ಜೈಸ್ವಾಲ್ ಮುಖಕ್ಕೆ ಬೆಂಕಿಯ ಜ್ವಾಲೆ ತಗುಲಿದೆ. ಘಟನೆಯಿಂದ ಸ್ಥಳದಲ್ಲಿ ತಲ್ಲಣ ಉಂಟಾಗಿದ್ದು, ಪೊಲೀಸರು ತಕ್ಷಣವೇ ಶಾಸಕಿಯನ್ನು ತಮ್ಮ ವಾಹನದಲ್ಲಿ ಸ್ಥಳೀಯ ವೈದ್ಯಕೀಯ ಕಾಲೇಜಿಗೆ ಕರೆದು ಕೊಂಡುಹೋದರು. ಪ್ರತಿಕೃತಿಯನ್ನು ಸುಡಲು ಡೀಸೆಲ್ ಅಥವಾ ಇಂಧನವನ್ನು ಅತಿಯಾಗಿ ಬಳಸಿದ್ದೇ ಜ್ವಾಲೆ ವೇಗವಾಗಿ ಹರಡಲು ಕಾರಣ ಎನ್ನಲಾಗಿದೆ.
ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆ: ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ಘಟಕದಲ್ಲಿ ತಜ್ಞ ವೈದ್ಯರ ತಂಡ ಶಾಸಕರಿಗೆ ತಕ್ಷಣದ ಚಿಕಿತ್ಸೆ ನೀಡಿದೆ. ವೈದ್ಯಕೀಯ ಕಾಲೇಜಿನ ಸಿಎಂಎಸ್ ಡಾ. ಎಂ.ಎಂ. ತ್ರಿಪಾಠಿ ಪ್ರಕಾರ, “ಶಾಸಕಿಯ ಮುಖದ ಶೇ. 4 ರಷ್ಟು ಭಾಗ ಸುಟ್ಟ ಗಾಯಗಳಾಗಿವೆ. ಚರ್ಮರೋಗ ತಜ್ಞರು ಮತ್ತು ಶಸ್ತ್ರಚಿಕಿತ್ಸಕರ ತಂಡ ಆರೋಗ್ಯದ ಮೇಲೆ ನಿಗಾ ಇರಿಸಿದೆ.” ಸದ್ಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಅಕ್ಷಯ್ ತ್ರಿಪಾಠಿ ಮತ್ತು ಎಸ್ಪಿ ವಿಶ್ವಜೀತ್ ಶ್ರೀವಾಸ್ತವ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಆಕಸ್ಮಿಕದ ಕುರಿತು ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಮುನ್ನೆಚ್ಚರಿಕೆ ಇಲ್ಲದೆ ಇಂಧನ ಬಳಸಿ ಪ್ರತಿಕೃತಿ ಸುಟ್ಟಿರುವುದು ಈ ಅವಘಡಕ್ಕೆ ಮುಖ್ಯ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.





















