Home Advertisement
Home ಸಿನಿ ಮಿಲ್ಸ್ ರೌಡಿ ಸ್ಟಾರ್ ಅಬ್ಬರ; ‘ಹಾಯ್ ನಾನ್ನ’ ನಿರ್ದೇಶಕನ ಜೊತೆ ವಿಜಯ್ ಹೊಸ ಪರ್ವ? VD ಹೊಸ...

ರೌಡಿ ಸ್ಟಾರ್ ಅಬ್ಬರ; ‘ಹಾಯ್ ನಾನ್ನ’ ನಿರ್ದೇಶಕನ ಜೊತೆ ವಿಜಯ್ ಹೊಸ ಪರ್ವ? VD ಹೊಸ ಪೋಸ್ಟರ್ ವೈರಲ್!

0
37

ಟಾಲಿವುಡ್‌ನ ‘ರೌಡಿ ಸ್ಟಾರ್’ ವಿಜಯ್ ದೇವರಕೊಂಡ ಸದ್ಯ ಸಾಲು ಸಾಲು ಆಸಕ್ತಿದಾಯಕ ಸಿನಿಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಜೊತೆಗಿನ ‘ರಣಬಾಲಿ’ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿರುವಾಗಲೇ ವಿಜಯ್, ಇಂದು (ಏಪ್ರಿಲ್ 18) ತಮ್ಮ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯೊಂದನ್ನು ನೀಡಿದ್ದಾರೆ. ‘ಹಾಯ್ ನಾನ್ನ’ ಎಂಬ ಎಮೋಷನಲ್ ಹಿಟ್ ಸಿನಿಮಾ ನೀಡಿದ್ದ ಪ್ರತಿಭಾವಂತ ನಿರ್ದೇಶಕ ಶೌರ್ಯುವ್ ಜೊತೆ ವಿಜಯ್ ಕೈಜೋಡಿಸಿದ್ದು, ಈ ಹೊಸ ಪ್ರಾಜೆಕ್ಟ್ ಈಗ ಇಡೀ ಚಿತ್ರರಂಗದ ಗಮನ ಸೆಳೆದಿದೆ.

ಪೋಸ್ಟರ್‌ನಲ್ಲಿ ಅಡಗಿದೆ ಕುತೂಹಲದ ಕಥೆ
ತಾತ್ಕಾಲಿಕವಾಗಿ ‘VDxShouryuv’ ಎಂದು ಹೆಸರಿಡಲಾಗಿರುವ ಈ ಚಿತ್ರದ ಅನೌನ್ಸ್‌ಮೆಂಟ್ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ. ಈ ಪೋಸ್ಟರ್‌ನಲ್ಲಿ ವಿಜಯ್ ದೇವರಕೊಂಡ ನಾಲ್ಕು ಶ್ವಾನಗಳನ್ನು ಹಿಡಿದು ಗತ್ತಿನಿಂದ ನಡೆದು ಬರುತ್ತಿದ್ದಾರೆ. ಅವರ ಬೆನ್ನ ಹಿಂದೆ ಏಳು ಜನರು ವಿವಿಧ ಆಯುಧಗಳನ್ನು ಹಿಡಿದು ನಿಂತಿರುವುದು ಸಿನಿಮಾದ ತೀವ್ರತೆಯನ್ನು ಸಾರುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪೋಸ್ಟರ್ ಮೇಲಿರುವ “ಈಗ ನೀವು ನೋಡುತ್ತಿರುವ ಸಿಟ್ಟು ಒಂದು ಕಾಲದಲ್ಲಿ ಪ್ರೀತಿ ಆಗಿತ್ತು” ಎಂಬ ಸಾಲು, ಇದೊಂದು ಆಕ್ಷನ್ ಸಮ್ಮಿಳಿತ ಎಮೋಷನಲ್ ಡ್ರಾಮಾ ಎಂಬ ಸುಳಿವು ನೀಡಿದೆ.

ಜಾಗತಿಕ ತಂತ್ರಜ್ಞರ ಸಮಾಗಮ
ಈ ಚಿತ್ರದ ವಿಶೇಷತೆಯೆಂದರೆ ಇದರಲ್ಲಿ ಕೆಲಸ ಮಾಡುತ್ತಿರುವ ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕ ತಂಡ. ಹಾಲಿವುಡ್‌ನ ಖ್ಯಾತ ಸರಣಿಗಳಾದ ‘ಹೌಸ್ ಆಫ್ ದಿ ಡ್ರ್ಯಾಗನ್’ ಮತ್ತು ‘ಫಾಲ್ಔಟ್‌’ಗೆ ಕೆಲಸ ಮಾಡಿದ ಅಲೆಜಾಂಡ್ರೊ ಮಾರ್ಟಿನೆಜ್ ಅವರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಇನ್ನು ‘ಬ್ಯಾಟ್‌ಮ್ಯಾನ್ ಫಾರೆವರ್’ ಹಾಗೂ ‘ಗಾಡ್ಸ್ ಆಫ್ ಈಜಿಪ್ಟ್’ ನಂತಹ ಬೃಹತ್ ಸಿನಿಮಾಗಳ ವಿಎಫ್‌ಎಕ್ಸ್ ಮೇಲ್ವಿಚಾರಣೆ ಮಾಡಿದ್ದ ಎರಿಕ್ ಡಸ್ಟರ್ ಅವರು ಈ ಚಿತ್ರದ ದೃಶ್ಯ ವೈಭವಕ್ಕೆ ಸಾಥ್ ನೀಡುತ್ತಿದ್ದಾರೆ.

ಅಷ್ಟೇ ಅಲ್ಲದೆ, ‘ಅನಿಮಲ್’ ಮತ್ತು ‘ಓಂ ಶಾಂತಿ ಓಂ’ ಅಂತಹ ದೃಶ್ಯಕಾವ್ಯಗಳಿಗೆ ಕೆಲಸ ಮಾಡಿದ ಸುರೇಶ್ ಸೆಲ್ವರಾಜನ್ ಕಲಾ ನಿರ್ದೇಶನ ಹಾಗೂ ಹೇಷಮ್ ಅಬ್ದುಲ್ ವಹಾಬ್ ಅವರ ಸಂಗೀತ ಈ ಚಿತ್ರಕ್ಕಿದೆ. ವೀರಾ ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಮೂಡಿಬರುತ್ತಿರುವ ಈ ಸಿನಿಮಾ, ವಿಜಯ್ ದೇವರಕೊಂಡ ಕೆರಿಯರ್‌ನಲ್ಲಿ ಮತ್ತೊಂದು ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಸದ್ಯಕ್ಕೆ ‘VDxShouryuv’ ಎಂದು ಕರೆಸಿಕೊಳ್ಳುತ್ತಿರುವ ಈ ಚಿತ್ರದ ಶೀರ್ಷಿಕೆ ಮುಂದಿನ ದಿನಗಳಲ್ಲಿ ಅನಾವರಣಗೊಳ್ಳಲಿದೆ.