Home Advertisement
Home ಸಿನಿ ಮಿಲ್ಸ್ “ತಪ್ಪಾದ ರೈಲು ಹತ್ತಿದ್ದರೆ ಇಳಿಯುವುದೇ ಲೇಸು”: ಹನ್ಸಿಕಾ ಮೋಟ್ವಾನಿ ದಾಂಪತ್ಯ ಜೀವನ ಅಂತ್ಯ!

“ತಪ್ಪಾದ ರೈಲು ಹತ್ತಿದ್ದರೆ ಇಳಿಯುವುದೇ ಲೇಸು”: ಹನ್ಸಿಕಾ ಮೋಟ್ವಾನಿ ದಾಂಪತ್ಯ ಜೀವನ ಅಂತ್ಯ!

0
21

ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ತಮ್ಮ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ಈಗ ಸ್ಪಷ್ಟನೆ ಸಿಕ್ಕಿದ್ದು, ಹನ್ಸಿಕಾ ಮತ್ತು ಉದ್ಯಮಿ ಸೊಹೇಲ್ ಖತುರಿಯಾ ವಿವಾಹ ಸಂಬಂಧ ಕಾನೂನಾತ್ಮಕವಾಗಿ ಅಂತ್ಯಗೊಂಡಿದೆ. ಮುಂಬೈನ ಬಾಂದ್ರಾ ಫ್ಯಾಮಿಲಿ ಕೋರ್ಟ್ ಮಾರ್ಚ್ 11, 2026ರಂದು ಈ ಜೋಡಿಗೆ ಪರಸ್ಪರ ಒಪ್ಪಿಗೆಯ ವಿಚ್ಛೇದನ ಮಂಜೂರು ಮಾಡಿದೆ.

2022ರ ಡಿಸೆಂಬರ್‌ನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದ ಈ ಜೋಡಿ, ಕೇವಲ ಒಂದೂವರೆ ವರ್ಷದಲ್ಲಿ ಭಿನ್ನಾಭಿಪ್ರಾಯದ ಕಾರಣದಿಂದ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ವಿಶೇಷವೆಂದರೆ ವಿಚ್ಛೇದನದ ಸಂದರ್ಭದಲ್ಲಿ ಹನ್ಸಿಕಾ ಅಥವಾ ಸೊಹೇಲ್ ಪರಸ್ಪರ ಯಾವುದೇ ರೀತಿಯ ಮಾಸಾಶನ ಅಥವಾ ಜೀವನಾಂಶದ ಬೇಡಿಕೆಯನ್ನು ಇಟ್ಟಿಲ್ಲ. ಗೌರವಯುತವಾಗಿಯೇ ಈ ಸಂಬಂಧದಿಂದ ಹೊರಬರಲು ಇಬ್ಬರೂ ನಿರ್ಧರಿಸಿದ್ದಾರೆ.

ವಿಚ್ಛೇದನದ ನಂತರ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹನ್ಸಿಕಾ, ತಮ್ಮ ನಿರ್ಧಾರದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಈಗಿರುವ ಜಾಗದಲ್ಲಿ ಅತ್ಯಂತ ಸಂತೋಷವಾಗಿದ್ದೇನೆ. ಜೀವನದಲ್ಲಿ ನಮಗೆ ಕ್ಲಿಕ್‌ಬೈಟ್ ಹೆಡ್‌ಲೈನ್ಸ್‌ಗಿಂತ ನೆಮ್ಮದಿ ಮುಖ್ಯ. ತಪ್ಪಾದ ರೈಲು ಹತ್ತಿದಾಗ ಅದರಲ್ಲಿ ನೋವು ಅನುಭವಿಸುತ್ತಾ ಪ್ರಯಾಣಿಸುವುದಕ್ಕಿಂತ, ಆದಷ್ಟು ಬೇಗ ಕೆಳಗಿಳಿಯುವುದು ಬುದ್ಧಿವಂತಿಕೆ,” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಸಮಾಜವು ಮಹಿಳೆಯರ ಮದುವೆ ಮತ್ತು ತಾಯ್ತನದ ಬಗ್ಗೆ ಹೇರುವ ನಿಯಮಗಳನ್ನು ಹನ್ಸಿಕಾ ತೀವ್ರವಾಗಿ ಟೀಕಿಸಿದ್ದಾರೆ. “ಮದುವೆಗೆ ಇಂತಿಷ್ಟೇ ವಯಸ್ಸು ಇರಬೇಕು ಎಂದು ನಿರ್ಧರಿಸುವವರು ಯಾರು? ಸಾಮಾಜಿಕ ಒತ್ತಡಕ್ಕೆ ಮಣಿದು ನಿರ್ಧಾರ ತೆಗೆದುಕೊಳ್ಳಬೇಡಿ. ಯಾವ ಸಂಬಂಧದಲ್ಲೂ ನಿಮ್ಮ ಆತ್ಮಗೌರವವನ್ನು ಕಳೆದುಕೊಳ್ಳಬೇಡಿ. ನಿಮ್ಮನ್ನು ನೀವು ಮೊದಲು ಗೌರವಿಸಲು ಕಲಿಯಿರಿ,” ಎಂದು ಕಿವಿಮಾತು ಹೇಳಿದರು.

ಒಟ್ಟಾರೆ.. ಹನ್ಸಿಕಾ ತಮ್ಮ ಕುಟುಂಬದ ಬೆಂಬಲದೊಂದಿಗೆ ಹೊಸ ಜೀವನದತ್ತ ಹೆಜ್ಜೆ ಹಾಕುತ್ತಿದ್ದು, ವೃತ್ತಿಜೀವನದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ನೇರ ಮತ್ತು ಧೈರ್ಯದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ.