ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಮಹಾಕಾವ್ಯ “ರಾಮಾಯಣ”ದ ಮೊದಲ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದಾರೆ. 5000 ವರ್ಷಗಳ ಹಳೆಯ ಈ ಪೌರಾಣಿಕ ಕಥೆಯನ್ನು ಆಧುನಿಕ ತಂತ್ರಜ್ಞಾನ ಮತ್ತು ಅಂತಾರಾಷ್ಟ್ರೀಯ ತಂತ್ರಜ್ಞಾನ VFX ಬಳಸಿ ಜಾಗತಿಕ ಮಟ್ಟದಲ್ಲಿ ತೆರೆಗೆ ತರಲಾಗುತ್ತಿದೆ. ಟೀಸರ್‌ನಲ್ಲಿ ಕಂಡುಬರುವ ಅದ್ಭುತ ದೃಶ್ಯಗಳು, ಶಕ್ತಿಶಾಲಿ ಬ್ಯಾಕ್‌ಗ್ರೌಂಡ್ ಸ್ಕೋರ್ ಮತ್ತು ಭಾವನಾತ್ಮಕ ಅನುಭವ ಚಿತ್ರ ಬಿಡುಗಡೆಗೂ ಮುಂಚೆ ದೊಡ್ಡ ಚರ್ಚೆಗೆ ಕಾರಣವಾಗಿವೆ. ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ.
ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಅವರ ಲುಕ್ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ಟೀಸರ್ ಕೇವಲ ದೃಶ್ಯಗಳ ಪ್ರದರ್ಶನವಲ್ಲ, ಬದಲಿಗೆ ಒಂದು ಸಂಪೂರ್ಣ ಭಾವನಾತ್ಮಕ ಅನುಭವ ನೀಡುತ್ತದೆ. ಜಗತ್ತಿನಾದ್ಯಂತ ನೂರಾರು ರೂಪಗಳಲ್ಲಿ ಹೇಳಲಾದ 5000 ವರ್ಷಗಳ ಕಥೆಯನ್ನು ಈ ಸಿನಿಮಾ ಹೊಸ ಶೈಲಿಯಲ್ಲಿ ತೋರಿಸುತ್ತಿದೆ. ರಾಮನನ್ನು ತನ್ನ ನಿರ್ಧಾರಗಳು ಮತ್ತು ತ್ಯಾಗದಿಂದ ಗುರುತಿಸಲ್ಪಡುವ ನಾಯಕನಾಗಿ ಚಿತ್ರಿಸಲಾಗಿದೆ.
ಇನ್ನು ನಿರ್ದೇಶಕ ನಿತೇಶ್ ತಿವಾರಿ ಹೇಳಿದ್ದೇನು ಗೊತ್ತ “ರಾಮಾಯಣದ ಹಿರಿಮೆ ಅದರ ಭಾವನೆಗಳ ಆಳದಲ್ಲಿ. ಇದು ಕೇವಲ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಯುದ್ಧವಲ್ಲ, ಬದಲಿಗೆ ನಮ್ಮ ನಿರ್ಧಾರಗಳು ಮತ್ತು ಜವಾಬ್ದಾರಿಗಳ ಕಥೆ.”
ಇನ್ನು ರಣಬೀರ್ ಕಪೂರ್ “ನಾನಿಲ್ಲಿ ರಾಮನನ್ನು ಪ್ರಸ್ತುತಪಡಿಸಲು ಬಂದಿದ್ದೇನೆ ಎಂದು ನನಗೆ ಅನಿಸುತ್ತಿಲ್ಲ. ನಾನು ಅವರಿಂದ ಕಲಿಯಲು ಬಂದಿದ್ದೇನೆ. ಅವರ ಸರಳತೆ ಮತ್ತು ಪಾವಿತ್ರ್ಯತೆಯನ್ನು ಅರ್ಥಮಾಡಿಕೊಳ್ಳುವುದು ನನಗೆ ವಿನಮ್ರ ಅನುಭವ” ಎಂದು ಹೇಳಿದ್ದಾರೆ.
ಸುಮಾರು 4000 ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾಗುತ್ತಿರುವ ‘ರಾಮಾಯಣ’ದಲ್ಲಿ ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತೆ, ಸನ್ನಿ ಡಿಯೋಲ್ ಹನುಮಂತ ಮತ್ತು ರವಿ ದುಬೆ ಲಕ್ಷ್ಮಣ ಪಾತ್ರಗಳಲ್ಲಿ ಪ್ರಮುಖವಾಗಿ ಕಾಣಿಸುತ್ತಾರೆ. DNEG ಮತ್ತು ಅಂತರರಾಷ್ಟ್ರೀಯ ತಂತ್ರಜ್ಞರ ತಂಡದ ಸಹಕಾರದಿಂದ ಚಿತ್ರವನ್ನು ಅದ್ಭುತವಾಗಿ ನಿರ್ಮಿಸಲಾಗುತ್ತಿದೆ. ಆಸ್ಕರ್ ವಿಜೇತ ಸಂಗೀತಗಾರರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಚಿತ್ರದ ಮೊದಲ ಭಾಗವು 2026 ರ ದೀಪಾವಳಿಯಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027 ರಲ್ಲಿ ಬಿಡುಗಡೆಯಾಗಲಿದೆ. ಇದನ್ನು ಭಾರತೀಯ ಚಿತ್ರರಂಗದ ಅತಿದೊಡ್ಡ ಪ್ರಾಜೆಕ್ಟ್ ಎಂದು ಪರಿಗಣಿಸಲಾಗುತ್ತಿದೆ.























