ಹಿಂದಿ-ಇಂಗ್ಲೀಷ್ ಮಾತ್ರ ಯಾಕೆ? ರೈಲ್ವೆ ಪರೀಕ್ಷೆ ವಿಚಾರದಲ್ಲಿ ಸಿಎಂ ಪ್ರಶ್ನೆ
ಬೆಂಗಳೂರು/ಹುಬ್ಬಳ್ಳಿ: ನೈರುತ್ಯ ರೈಲ್ವೇ ಇಲಾಖೆಯ ಪರೀಕ್ಷೆಗಳನ್ನು ಕೊನೆಯ ಕ್ಷಣದಲ್ಲಿ ರದ್ದುಪಡಿಸಿರುವ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಪರೀಕ್ಷೆಗೆ ಅವಕಾಶ ನೀಡದ ಹಿನ್ನೆಲೆ ಈ ಗೊಂದಲ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ಏನು ಈ ವಿವಾದ?: ಇಂದು ಬೆಳಗ್ಗೆ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವತಿಯಿಂದ 194 ಗೂಡ್ಸ್ ರೈಲು ಮ್ಯಾನೇಜರ್ ಹುದ್ದೆಗಳು ಹಾಗೂ ಹುಬ್ಬಳ್ಳಿ ವಿಭಾಗದಲ್ಲಿ ಎಲ್‌ಡಿಸಿಇ 101 ಹುದ್ದೆಗಳಿಗೆ ಪರೀಕ್ಷೆಗಳು ನಡೆಯಬೇಕಾಗಿತ್ತು. ಆದರೆ ಕನ್ನಡ ಸಂಘಟನೆಗಳು ಹಾಗೂ ಕನ್ನಡಿಗ ಉದ್ಯೋಗಾಕಾಂಕ್ಷಿಗಳ ಭಾರೀ ವಿರೋಧದ ನಡುವೆಯೇ ಪರೀಕ್ಷೆಗಳನ್ನು ದಿಢೀರನೆ ರದ್ದುಪಡಿಸಲಾಗಿದೆ.
ಇದರಿಂದ ಸಾವಿರಾರು ಅಭ್ಯರ್ಥಿಗಳು ಅತಂತ್ರ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ.
ಮುಖ್ಯಮಂತ್ರಿಗಳ ಟೀಕೆ : ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆರಂಭದಲ್ಲಿಯೇ ರೈಲ್ವೆ ಇಲಾಖೆ ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ನೀಡಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಪ್ರತಿಭಟನೆಗಳನ್ನು ನಿರ್ಲಕ್ಷಿಸಿ ಕೊನೆಯ ಕ್ಷಣದಲ್ಲಿ ಪರೀಕ್ಷೆ ರದ್ದುಪಡಿಸಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.
ಭಾಷಾ ದಬ್ಬಾಳಿಕೆ ಆರೋಪ: ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್‌ಗೆ ಮಾತ್ರ ಅವಕಾಶ ನೀಡುತ್ತಿರುವುದು ಭಾಷಾ ದಬ್ಬಾಳಿಕೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. “ನಾವು ಹಿಂದಿ ಭಾಷೆಯನ್ನು ವಿರೋಧಿಸುವುದಿಲ್ಲ, ಆದರೆ ಕನ್ನಡದ ಮೇಲೆ ಹೇರಿಕೆಯನ್ನು ಸಹಿಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿ. ಸೋಮಣ್ಣ ವಿರುದ್ಧ ಅಸಮಾಧಾನ: ಕೇಂದ್ರ ರೈಲ್ವೇ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದರೂ, ಕನ್ನಡಿಗರ ಪರವಾಗಿ ಕ್ರಮ ಕೈಗೊಳ್ಳದಿರುವುದು ನಿರಾಶೆ ತಂದಿದೆ ಎಂದು ಸಿಎಂ ತಿಳಿಸಿದ್ದಾರೆ.
ಪ್ರಧಾನಿಗೆ ಮನವಿ: ಈ ವಿಷಯದಲ್ಲಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಸಂಬಂಧಿತ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿ ಆಗ್ರಹಿಸಿದ್ದಾರೆ.
ಕನ್ನಡದಲ್ಲಿಯೇ ಪರೀಕ್ಷೆ ಆಗ್ರಹ: ರದ್ದುಪಡಿಸಿದ ಪರೀಕ್ಷೆಯನ್ನು ಶೀಘ್ರದಲ್ಲಿ ಮರುನಿಗದಿ ಮಾಡಬೇಕು ಹಾಗೂ ಕನ್ನಡದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಭಾಷೆಯ ಆಧಾರದ ಮೇಲೆ ಉದ್ಯೋಗದಲ್ಲಿ ಅನ್ಯಾಯ ಆಗಬಾರದು ಎಂದು ಆಗ್ರಹಿಸಿದ್ದಾರೆ






















