Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ತುಳು ಭಾಷೆಗೆ ಎರಡನೇ ಅಧಿಕೃತ ಸ್ಥಾನಮಾನ? ಸರ್ಕಾರಕ್ಕೆ ವರದಿ ಸಲ್ಲಿಕೆ

ತುಳು ಭಾಷೆಗೆ ಎರಡನೇ ಅಧಿಕೃತ ಸ್ಥಾನಮಾನ? ಸರ್ಕಾರಕ್ಕೆ ವರದಿ ಸಲ್ಲಿಕೆ

0
64

ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಸರ್ಕಾರ ನೇಮಿಸಿದ್ದ ಅಧ್ಯಯನ ಸಮಿತಿಯು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆಂಧ್ರಪ್ರದೇಶದಲ್ಲಿ ಹೆಚ್ಚುವರಿ ಅಧಿಕೃತ ಭಾಷೆ ಘೋಷಿಸುವ ವೇಳೆ ಅನುಸರಿಸಲಾದ ಮಾನದಂಡಗಳು ಮತ್ತು ವಿಧಾನಗಳನ್ನು ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಉಪಸ್ಥಿತಿಯಲ್ಲಿ ಆರು ಸದಸ್ಯರ ಸಮಿತಿಯನ್ನು ಸರ್ಕಾರ ರಚಿಸಿತ್ತು.

ಆಂಧ್ರಪ್ರದೇಶ ಮಾದರಿ ಅಧ್ಯಯನ: ಸಮಿತಿಯು ಜನವರಿ 19 ಮತ್ತು 20ರಂದು ಆಂಧ್ರಪ್ರದೇಶ ರಾಜ್ಯದ ಸಚಿವಾಲಯ ಹಾಗೂ ವಿವಿಧ ಇಲಾಖೆಗಳ ಕಚೇರಿಗಳಿಗೆ ಭೇಟಿ ನೀಡಿ, ಉರ್ದು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಸಂದರ್ಭದಲ್ಲಿ ಅನುಸರಿಸಿದ ನಿಯಮಗಳು, ಮಾನದಂಡಗಳು ಮತ್ತು ಆಡಳಿತಾತ್ಮಕ ಕ್ರಮಗಳನ್ನು ವಿಶ್ಲೇಷಿಸಿದೆ.

ಈ ಅಧ್ಯಯನದ ಆಧಾರದಲ್ಲಿ ತುಳು ಭಾಷೆಗೆ ರಾಜ್ಯದಲ್ಲಿ ಅಧಿಕೃತ ಸ್ಥಾನಮಾನ ನೀಡುವ ಕುರಿತಾಗಿ ಸಮಗ್ರ ವರದಿ ಸಿದ್ಧಪಡಿಸಲಾಗಿದೆ.

ವಿಕಾಸ ಸೌಧದಲ್ಲಿ ವರದಿ ಸಲ್ಲಿಕೆ: ಅಧ್ಯಯನ ಸಮಿತಿ ಸದಸ್ಯರು ವಿಕಾಸ ಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್ ಅವರಿಗೆ ವರದಿಯನ್ನು ಸಲ್ಲಿಸಿದರು. ವರದಿಯೊಂದಿಗೆ ತುಳು ಭಾಷೆಯ ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ಮಹತ್ವ ಹಾಗೂ ಭಾಷಾಭಿಮಾನಿಗಳ ಸಂಖ್ಯೆಯ ಕುರಿತು ಪ್ರಸ್ತಾವನೆಯನ್ನು ಕೂಡ ಸೇರಿಸಲಾಗಿದೆ.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ. ಬಿ.ಎಸ್. ಮಂಜುನಾಥ ಸ್ವಾಮಿ, ಯಕ್ಷಗಾನ ಅಕಾಡೆಮಿಯ ಸದಸ್ಯ ಸುಧಾಕರ ಶೆಟ್ಟಿ, ಕಾನೂನು ಇಲಾಖೆಯ ಉಪಕಾರ್ಯದರ್ಶಿ ವನಿತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಉಪಕಾರ್ಯದರ್ಶಿ ಮೂರ್ತಿ ಕೆ.ಎನ್., ಅಧೀನ ಕಾರ್ಯದರ್ಶಿ ಕೆ.ಎಂ. ಶುಭಶ್ರೀ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಉಪಸ್ಥಿತರಿದ್ದರು.

ತುಳು ಭಾಷೆಗೆ ಸ್ಥಾನಮಾನ ನೀಡುವ ಚರ್ಚೆ: ತುಳು ಭಾಷೆ ಕರಾವಳಿ ಕರ್ನಾಟಕದಲ್ಲಿ ವ್ಯಾಪಕವಾಗಿ ಮಾತನಾಡಲ್ಪಡುವ ಪ್ರಾಚೀನ ಭಾಷೆಯಾಗಿದ್ದು, ಅದಕ್ಕೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಇದೀಗ ಸಮಿತಿಯ ವರದಿ ಸರ್ಕಾರದ ಮುಂದಿರುವುದರಿಂದ, ಮುಂದಿನ ದಿನಗಳಲ್ಲಿ ಈ ವಿಷಯದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.