ತೀವ್ರಗೊಳ್ಳುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಮುಂದುವರಿದ ಆರ್ಥಿಕತೆಗಳಲ್ಲಿನ ವ್ಯಾಪಾರ ಸಂರಕ್ಷಣಾ ನೀತಿ, ಜಾಗತಿಕ ಮೌಲ್ಯ ಸರಪಳಿಗಳ ಅಸ್ತವ್ಯಸ್ತತೆ ಮತ್ತು ಕರೆನ್ಸಿ ಹಾಗೂ ಬಂಡವಾಳ ಮಾರುಕಟ್ಟೆಗಳಲ್ಲಿನ ಹೆಚ್ಚಿನ ಏರಿಳಿತಗಳಿಂದ ಕೂಡಿದ ಅಸಾಮಾನ್ಯ ಪ್ರತಿಕೂಲ ಜಾಗತಿಕ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್ 2026-27 ಅನ್ನು ಮಂಡಿಸಲಾಗಿದೆ. ಬಹುಪಕ್ಷೀಯ ವ್ಯಾಪಾರದ ಅವನತಿ ಮತ್ತು ಪೂರೈಕೆ ಸರಪಳಿಗಳ ಮೇಲಿನ ಹೆಚ್ಚುತ್ತಿರುವ ಒತ್ತಡಗಳನ್ನು ಗಮನಿಸಿರುವ ಹಣಕಾಸು ಸಚಿವರು, ಈ ಬಾಹ್ಯ ದುರ್ಬಲತೆಯನ್ನು ಒಪ್ಪಿಕೊಂಡಿದ್ದಾರೆ.
ಈ ಎಲ್ಲ ಸವಾಲುಗಳನ್ನು ನಿರ್ವಹಿಸಲು ವಿತ್ತ ಸಚಿವರು ಬಹಳ ಜಾಗರೂಕ ಹೆಜ್ಜೆಗಳನ್ನಿರಿಸಿದ್ದಾರೆ. 2025-26ರ ಆರ್ಥಿಕ ಸಮೀಕ್ಷೆಯು ತಿಳಿಸಿದಂತೆ, ಉತ್ತಮ ಮಳೆಗಾಲದ ಕಾರಣವಾಗಿ ಬಂದ ಸಮರ್ಪಕ ಕೃಷಿ ಉತ್ಪಾದನೆ, ಜಿಎಸ್‌ಟಿ ದರಗಳ ಸರಳೀಕರಣ ಮತ್ತು ಸರ್ಕಾರದ ಕೆಲ ನೇರ ನಗದು ವರ್ಗಾವಣೆಗಳಂಥ ನೀತಿಗಳು ಹಾಗೂ ಅಲ್ಪ ಪ್ರಮಾಣದ ಹಣದುಬ್ಬರಗಳೆಲ್ಲವೂ, ಜನರ ಉಪಭೋಗವನ್ನು ಹಚ್ಚಿಸಿ, ಕಳೆದ ವರ್ಷದ ಬೆಳವಣಿಗೆಗೆ, ಬೇಡಿಕೆ ಪರ ಬೆಂಬಲವಾಗಿ ನಿಂತಿದ್ದವು. ಆ ಚಾಲನೆಯನ್ನು ಸಂರಕ್ಷಿಸಿಕೊಂಡು, ವಿಕಸಿತ ಭಾರತ-2047ರೆಡೆಗೆ ಮುನ್ನಡೆಯುವುದಕ್ಕಾಗಿ ಬೆಳವಣಿಗೆಗೆ ಒತ್ತು ನೀಡುವ, ಸುಮಾರು ರೂ. 50.6 ಲಕ್ಷ ಕೋಟಿ ಅಂದಾಜಿನ ಮುಂಗಡಪತ್ರ ಮಂಡಿತವಾಗಿದೆ. ಸ್ಥೂಲವಾಗಿ, ಈ ವರ್ಷದ ಬಜೆಟ್, ಈ ಮೂರು ಉದ್ದೇಶಗಳನ್ನು ಸಮನ್ವಯಗೊಳಿಸಲು ಪ್ರಯತ್ನಿಸುತ್ತದೆ—ಬೆಳವಣಿಗೆಯನ್ನು ವೇಗಗೊಳಿಸುವುದು, ಸ್ಥೂಲ ಆರ್ಥಿಕ ಸ್ಥಿರತೆಯನ್ನು ಕಾಪಾಡುವುದು ಮತ್ತು ಅಂತರ್ಗತ ಅಭಿವೃದ್ಧಿಯನ್ನು ಉತ್ತೇಜಿಸುವುದು.
ಇದನ್ನೂ ಓದಿ: ಕೇಂದ್ರ ಬಜೆಟ್: ರೈತರಿಗೆ ಬಂಪರ್ ಕೊಡುಗೆ
ಬಂಡವಾಳ ವೆಚ್ಚ ಆಧಾರಿತ ಬೆಳವಣಿಗೆಯ ಮಾದರಿ: ಈ ವರ್ಷದ ಮುಂಗಡಪತ್ರದ ಬೆಳವಣಿಗೆಯ ತಂತ್ರವು ಸಾರ್ವಜನಿಕ ಬಂಡವಾಳ ವೆಚ್ಚದ ಮೇಲೆ ದೃಢವಾಗಿ ಅವಲಂಬಿತವಾಗಿದೆ. 2026-27ರ ಬಜೆಟ್ ಅಂದಾಜಿನಲ್ಲಿ ಬಂಡವಾಳ ವೆಚ್ಚವನ್ನು ₹12.2 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಇದು ಕಳೆದ ದಶಕದಾದ್ಯಂತ ಅನುಸರಿಸಲಾದ ಹೂಡಿಕೆ-ನೇತೃತ್ವದ ಬೆಳವಣಿಗೆಯ ಮಾದರಿಯನ್ನು ಇನ್ನಷ್ಟು ಸದೃಢಗೊಸುತ್ತದೆ. ಈ ವಿಧಾನವು ಜಿಡಿಪಿ ಬೆಳವಣಿಗೆ ಮತ್ತು ಮೂಲಸೌಕರ್ಯ ನಿರ್ಮಾಣಕ್ಕೆ ಬೆಂಬಲ ನೀಡಿದ್ದರೂ, ಪ್ರಸ್ತುತ ಜಾಗತಿಕ ಪರಿಸ್ಥಿತಿಗಳಲ್ಲಿ ಅದರ ಪರಿಣಾಮಕಾರಿತ್ವವು ಚರ್ಚಾಸ್ಪದವಾಗಿದೆ. ಮುಖ್ಯವಾಗಿ, ಖಾಸಗಿ ಹೂಡಿಕೆಯನ್ನು ಅಧಿಕ ಪ್ರಮಾಣದಲ್ಲಿ ಆಕರ್ಷಿಸುವಂಥ ಬಲವಾದ ಪ್ರಸ್ತಾವಗಳು ಆಯವ್ಯಯದಲ್ಲಿ ಅಡಕವಾಗಿಲ್ಲ.
ಅದೇ ರೀತಿ, ರಫ್ತು ಬೇಡಿಕೆಯನ್ನು ವೃದ್ಧಿಸಿ, ವ್ಯಾಪಾರವನ್ನು ಹಿಗ್ಗಿಸುವಂಥ ಕ್ರಮಗಳೂ ಕಾಣುವುದಿಲ್ಲ. ದೇಶೀಯ ಬೇಡಿಕೆಯ ಮೇಲೆ ಅವಲಂಬಿತ ಅಭಿವೃದ್ಧಿ ತಂತ್ರಕ್ಕೆ ಅದರದೇ ಮಿತಿಗಳಿವೆ. ಮೇಲಾಗಿ, ನಾವು ಅವಶ್ಯಕ ಆಮದುಗಳನ್ನು ಮಾಡಲೇಬೇಕಾದ ಸಂದರ್ಭದಲ್ಲಿ, ನಮ್ಮ ವ್ಯಾಪಾರ ಕೊರತೆ ಹೆಚ್ಚಾಗುವ ಆತಂಕವಿದೆ. ಆದ್ದರಿಂದ, ಸುಂಕಗಳ ಹೆಚ್ಚಳ ಹಾಗೂ ಜಿಯೋ-ಎಕನಾಮಿಕ್ ತಲ್ಲಣಗಳಿಂದಾಗಿ ರಫ್ತು ಬೇಡಿಕೆ ಅನಿಶ್ಚಿತವಾಗಿರುವ ಸಮಯದಲ್ಲಿ, ಕೇವಲ ಸಾರ್ವಜನಿಕ ಹೂಡಿಕೆಯ ಮೇಲಿನ ಅವಲಂಬನೆಯು ವಿಶಾಲ ತಳಹದಿಯ ಬೆಳವಣಿಗೆಯನ್ನು ಸೃಷ್ಟಿಸದಿರಬಹುದು. ಖಾಸಗಿ ಹೂಡಿಕೆ ಮತ್ತು ರಫ್ತುಗಳ ಉತ್ತೇಜನಕ್ಕೂ ಕ್ರಮಗಳನ್ನು ಸೂಚಿಸಿದ್ದರೆ, ನಿರೀಕ್ಷಿಸಿದ ಬೆಳವಣಿಗೆ ಸರಾಗವಾಗುತ್ತಿತ್ತೇನೋ.
ಉತ್ಪಾದನಾ ವಲಯ ಮತ್ತು ಸ್ವಾವಲಂಬನೆ: ಈ ಆಯವ್ಯಯದ ಒಂದು ಬಹುಮುಖ್ಯ ಆದ್ಯತೆ ಎಂದರೆ ಉತ್ಪಾದನಾ ಸಾಮರ್ಥ್ಯ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವುದು. ಮುಖ್ಯವಾಗಿ ಆರ್ಥಿಕ ಸಂರಚನೆಯ ಸ್ಥಿತ್ಯಂತರವನ್ನು ವೇಗಗೊಳಿಸಲು, ಉದಯೋನ್ಮುಖ ಉದ್ದಿಮೆಗಳಾದ ಸೆಮಿಕಂಡಕ್ಟರ್‌ಗಳು, ಬಯೋಫಾರ್ಮಾ, ಎಲೆಕ್ಟ್ರಾನಿಕ್ಸ್ ಘಟಕಗಳು, ಬಂಡವಾಳ ಸರಕುಗಳು ಮತ್ತು ಅಪರೂಪದ ಖನಿಜಗಳಿಗೆ ಅಧಿಕ ಹಣ ವಿನಿಯೋಗ ಮಾಡುವ ಮೂಲಕ ಬಜೆಟ್ ಬಲವಾದ ಉತ್ಪಾದನಾ ದೃಷ್ಟಿಕೋನವನ್ನು ಹೊಂದಿದೆ. ಈ ಉಪಕ್ರಮಗಳು ದೀರ್ಘಕಾಲೀನ ಸ್ವಾವಲಂಬನೆ ಮತ್ತು ಕೈಗಾರಿಕಾ ಉನ್ನತೀಕರಣಕ್ಕೆ ಪೂರಕವಾಗಿದ್ದರೂ, ಅವುಗಳ ಅಲ್ಪಾವಧಿಯಿಂದ ಮಧ್ಯಮ ಅವಧಿಯ ಉದ್ಯೋಗ ಸೃಷ್ಟಿ ಸಾಮರ್ಥ್ಯ ಸೀಮಿತವಾಗಿದೆ.
ಇದನ್ನೂ ಓದಿ: ಕೇಂದ್ರ ಬಜೆಟ್: ಜೀವರಕ್ಷಕ ಔಷಧಿಗಳ ದರ ಇಳಿಕೆ
ಇದಲ್ಲದೆ, ಮುಂದುವರಿದ ಆರ್ಥಿಕತೆಗಳು ದೇಶೀಯ ಉತ್ಪಾದನೆಗೆ ಆದ್ಯತೆ ನೀಡುತ್ತಿರುವ ಸಮಯದಲ್ಲಿ, ಮರುಸಂಘಟಿತ ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಸಂಯೋಜನೆಗೊಳ್ಳುವ ಭಾರತದ ಸಾಮರ್ಥ್ಯದ ಬಗ್ಗೆ ಬಜೆಟ್ ಅತಿಯಾದ ಆಶಾವಾದವನ್ನು ಹೊಂದಿದೆ. ಆದರೆ, ಈ ದೌರ್ಬಲ್ಯವನ್ನು ಸಣ್ಣ ಮತ್ತು ಮೈಕ್ರೋ ಉದ್ದಿಮೆಗಳನ್ನು ಪೋಷಿಸಿ, ಪೂರಕ ಉದ್ಯೋಗ ಸೃಷ್ಟಿಸುವ ಆಶಾವಾದ ಇದೆ. ಅಲ್ಲದೇ, ಸೇವಾ ವಲಯದ ಹಲವು ಉಪಕ್ರಮಗಳಾದ ಪ್ರವಾಸೋದ್ಯಮದ ಅಭಿವೃದ್ಧಿ, ನಗರ ಆರ್ಥಿಕ ಪ್ರದೇಶಗಳ ರಚನೆ, ಕಾಳಜಿ ಸೇವೆ ಒದಗಿಸುವವರಿಗೆ ತರಬೇತಿ, ವಿನ್ಯಾಸ ಕ್ಷೇತ್ರದ ಉತ್ತೇಜನ, ಭಾರತೀಯ ವೈದ್ಯ ಪದ್ಧತಿಯ ಬಲವರ್ಧನೆ, ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆ, ತೋಟಗಾರಿಕೆ ಮುಂತಾದ ಅಧಿಕ ಮೌಲ್ಯದ ಚಟುವಟಿಕೆಗಳಿಗೆ ಪ್ರೋತ್ಸಾಹ ಘೋಷಿಸುವುದರ ಮೂಲಕವೂ ಉದ್ಯೋಗ ನಿರ್ಮಾಣ ಮಾಡಬಹುದು ಎಂಬ ಆಶಯ ಹೊಂದಿದೆ. .
ಬಾಹ್ಯ ವಲಯ ಮತ್ತು ಹಣಕಾಸಿನ ಶಿಸ್ತು: ಬಾಹ್ಯ ವಲಯಕ್ಕೆ ಸಂಬಂಧಿಸಿದಂತೆ, ಮುಂಗಡ ಪತ್ರವು ರಫ್ತು ಸೌಲಭ್ಯ ಕ್ರಮಗಳನ್ನು ನೀಡುತ್ತದೆಯಾದರೂ, ವಿನಿಮಯ ದರದ ಒತ್ತಡಗಳು ಮತ್ತು ಜಾಗತಿಕ ವ್ಯಾಪಾರ ಅನಿಶ್ಚಿತತೆಗಳಿಗೆ ಸಮಗ್ರ ಪ್ರತಿಕ್ರಿಯೆಯನ್ನು ಪೋರ್ಟ್ಫೋಲಿಯೋ ಹೂಡಿಕೆಯ ನಿಯಮಗಳ ಸಡಿಲಿಕೆ ಮತ್ತು ವಿದೇಶಿ ಸಂಸ್ಥೆಗಳಿಗೆ ತೆರಿಗೆ ಪ್ರೋತ್ಸಾಹಗಳು ಬಂಡವಾಳದ ಒಳಹರಿವನ್ನು ಆಕರ್ಷಿಸಬಹುದು, ಆದರೆ ಈಗಾಗಲೇ ನಮ್ಮ ಅನುಭವಕ್ಕೆ ಬಂದಂತೆ, ಅವು ಹಠಾತ್ ಹಿಂತೆಗೆತದ ಅಪಾಯವನ್ನೂ ಹೆಚ್ಚಿಸುತ್ತವೆ.
ಈ ಹಿನ್ನೆಲೆಯಲ್ಲಿ, ಹಣಕಾಸಿನ ನಿರ್ವಹಣೆಗೆ ಸಂಬಂಧಿಸಿದಂತೆ, 2026-27ರಲ್ಲಿ ಸಾಲ-ಜಿಡಿಪಿ ಅನುಪಾತ ತುಸು ಕಡಿಮೆಯಾಗಿದ್ದು ಹಾಗೂ ಕೋಶೀಯ ಕೊರತೆಯು ಜಿಡಿಪಿಯ ಶೇಕಡಾ 4.3ಕ್ಕೆ ಇಳಿಸುವ ಗುರುಗಳು ನಿರೀಕ್ಷಿತ ಹಾದಿಯಲ್ಲಿವೆ. ಇದರ ಜೊತೆಗೆ ಹಣಕಾಸಿನ ವಲಯದಲ್ಲೂ ಸಹ ಕೆಲವೊಂದು ಬದಲಾವಣೆಗಳನ್ನು ತಂದು ಹಣಕಾಸು ವ್ಯವಸ್ಥೆಯನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ಮಾತನ್ನು ಸಚಿವರು ಆಡಿದ್ದಾರೆ. ಈ ಎಲ್ಲ ಕ್ರಮಗಳು, ಸರ್ಕಾರಿ ನೀತಿಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದರೂ, ಬಾಹ್ಯ ಆಘಾತಗಳಿಗೆ ಅಥವಾ ದೇಶೀಯ ಬೇಡಿಕೆಯ ಕುಸಿತಕ್ಕೆ ಸ್ಪಂದಿಸುವ ಸರ್ಕಾರದ ಸಾಮರ್ಥ್ಯವನ್ನು ಸೀಮಿತಗೊಳಿಸಬಹುದು.
ಸಾಮಾಜಿಕ ಅಭಿವೃದ್ಧಿ: ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಚೌಕಟ್ಟಿನ ಮೂಲಕ ವ್ಯಕ್ತಪಡಿಸಲಾದ ಬಜೆಟ್‌ನ ಪುನರ್ವಿತರಣಾ ಆಶಯವು ಹೆಚ್ಚಾಗಿ ಸಾಮರ್ಥ್ಯ ವೃದ್ಧಿ, ಕೌಶಲ್ಯ ಮತ್ತು ತಂತ್ರಜ್ಞಾನ ಆಧಾರಿತ ಸೇವಾ ವಿತರಣೆಯ ಮೇಲೆ ಅವಲಂಬಿತವಾಗಿದೆ. ಇವುಗಳೊಂದಿಗೆ ಷಿ-ಮಾರ್ಟಗಳ ಸ್ಥಾಪನೆ, ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲಗಳ ನಿರ್ಮಾಣ ಮತ್ತು ದಿವ್ಯಾಂಗರಿಗೆ ನೀಡುವ ಸವಲತ್ತುಗಳ ವೃದ್ಧಿ, ಪೂರ್ವೋತ್ತರ ರಾಜ್ಯಗಳಿಗಳಿಗಾಗಿ ಘೋಷಿಸಿರುವ ಉಪಕ್ರಮಗಳು, ಆರ್ಥಿಕ ಸಮಾನತೆ ಸಾಧಿಸಲಿಕ್ಕೆ ಸಹಾಯ ಮಾಡಬಹುದು. ಆದರೆ, ಇವುಗಳ ಪರಿಣಾಮ ಕೂಡ ಮಧ್ಯಮಾವಧಿಯಲ್ಲಿ ಗೋಚರಿಸುತ್ತವೆ ವಿನಃ ಇದೇ ವರ್ಷದಲ್ಲಿ ಅಲ್ಲ. ನೇರ ಆದಾಯ ಬೆಂಬಲ ಅಥವಾ ಉದ್ಯೋಗ-ತೀವ್ರ ಹಸ್ತಕ್ಷೇಪಗಳು ಸೀಮಿತವಾಗಿವೆ. ಪರಿಣಾಮವಾಗಿ, ಸಂಪತ್ತಿನ ಪುನರ್ವಿತರಣೆಯನ್ನು ತಕ್ಷಣದ ನೀತಿಯ ಬದಲಿಗೆ ಬೆಳವಣಿಗೆಯ ದೀರ್ಘಕಾಲೀನ ಫಲಿತಾಂಶವಾಗಿ ನೋಡಲಾಗಿದೆ.
ಒಟ್ಟಾರೆಯಾಗಿ, ಕೇಂದ್ರ ಬಜೆಟ್ 2026-27 ಬೆಳವಣಿಗೆಯ ಮಹತ್ವಾಕಾಂಕ್ಷೆ ಮತ್ತು ಹಣಕಾಸಿನ ಶಿಸ್ತನ್ನು ಪ್ರತಿಬಿಂಬಿಸುತ್ತದೆ. ಪೂರೈಕೆಯನ್ನು ಹೆಚ್ಚಿಸುವ ಸುಧಾರಣೆಗಳು ಮತ್ತು ದೀರ್ಘಕಾಲೀನ ಸಾಮರ್ಥ್ಯ ಸೃಷ್ಟಿಯ ಮೇಲಿನ ಅದರ ಒತ್ತು ಅಗತ್ಯವಾಗಿದ್ದರೂ, ಜಾಗತಿಕ ಸಂರಕ್ಷಣಾ ನೀತಿ ಮತ್ತು ಕರೆನ್ಸಿ ಏರಿಳಿತಗಳಿಂದ ಉಂಟಾಗುವ ಅಲ್ಪಾವಧಿಯ ಅಪಾಯಗಳನ್ನು ಎದುರಿಸಲು ಇದು ಸಾಕಾಗದಿರಬಹುದು. ಮೇಲಾಗಿ, ಹಿಂದಿನ ವರ್ಷದ ಬೇಡಿಕೆಯ ಹೆಚ್ಚಳವು ಈ ವರ್ಷವೂ ಮುಂದುವರೆದರೆ ಮಾತ್ರ ನಿರೀಕ್ಷಿತ ಬೆಳವಣಿಗೆ ಫಲಿತಗೊಳ್ಳಬಹುದು. ಆದರೆ ಪ್ರಥಮ ನೋಟಕ್ಕೆ ಬೆಳವಣಿಗೆ ಪರವಾಗಿರುವ ಇಂಥ ಮುಂಗಡ ಪತ್ರ ಮಂಡಿಸಿದ ವಿತ್ತ ಸಚಿವರು ಪ್ರಶಂಸಾರ್ಹರು.
– ಪ್ರೊ. ಎಸ್. ಟಿ. ಬಾಗಲಕೋಟಿ
ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ
ಕರ್ನಾಟಕ ವಿಶ್ವವಿದ್ಯಾಲಯ























