Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಹುಬ್ಬಳ್ಳಿ–ಧಾರವಾಡ: ಭವಿಷ್ಯದ ನೀರಿನ ಅಗತ್ಯತೆಗೆ ಮಹತ್ವದ ಹೆಜ್ಜೆ

ಹುಬ್ಬಳ್ಳಿ–ಧಾರವಾಡ: ಭವಿಷ್ಯದ ನೀರಿನ ಅಗತ್ಯತೆಗೆ ಮಹತ್ವದ ಹೆಜ್ಜೆ

0
6

ಬೆಂಗಳೂರು: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಹೊಸ ಕುಡ್ಸೆಂಪ್ (KUDCEMP) ಯೋಜನೆಯಡಿ ರೇಣುಕಾಸಾಗರ ಜಲಾಶಯದಿಂದ ಹೆಚ್ಚುವರಿಯಾಗಿ 43 ಎಂಎಲ್‌ಡಿ ನೀರು ಸರಬರಾಜು ಮಾಡಲು ಯೋಜಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರು ತಿಳಿಸಿದ್ದಾರೆ.

ಪ್ರಸ್ತುತ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ರೇಣುಕಾಸಾಗರ ಜಲಾಶಯದಿಂದ 220 ಎಂಎಲ್‌ಡಿ ಮತ್ತು ನೀರಸಾಗರ ಜಲಾಶಯದಿಂದ 25 ಎಂಎಲ್‌ಡಿ, ಒಟ್ಟಾರೆ 245 ಎಂಎಲ್‌ಡಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ ನಗರ ವಿಸ್ತರಣೆ, ಜನಸಂಖ್ಯೆ ಹೆಚ್ಚಳ ಹಾಗೂ ಕೈಗಾರಿಕಾ ಚಟುವಟಿಕೆಗಳ ಹಿನ್ನೆಲೆಯಲ್ಲಿ ನೀರಿನ ಬೇಡಿಕೆ ಹೆಚ್ಚುತ್ತಿರುವುದರಿಂದ, ಹೆಚ್ಚುವರಿ ನೀರಿನ ಅವಶ್ಯಕತೆ ತಲೆದೋರಿದೆ.

ಇದನ್ನೂ ಓದಿ: ಬೀದರ್‌: ನಿಗೂಢ ವಸ್ತು ಸ್ಪೋಟ – ಮಕ್ಕಳು ಸೇರಿ 6 ಜನರಿಗೆ ಗಾಯ

ಈ ಹಿನ್ನೆಲೆ ಕುಡ್ಸೆಂಪ್ ಯೋಜನೆಯಡಿ ರೇಣುಕಾಸಾಗರ ಜಲಾಶಯದಿಂದ 43 ಎಂಎಲ್‌ಡಿ ನೀರನ್ನು ಹೆಚ್ಚುವರಿಯಾಗಿ ಪೂರೈಸುವ ಯೋಜನೆ ರೂಪಿಸಲಾಗಿದೆ. ಇದರ ಭಾಗವಾಗಿ ಅಮ್ಮಿನಭಾವಿ ಪ್ರದೇಶದಲ್ಲಿ ಆಧುನಿಕ ಜಲಶುದ್ಧೀಕರಣ ಘಟಕವನ್ನು ನಿರ್ಮಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಹೊಸ ಯೋಜನೆ ಕಾರ್ಯರೂಪಕ್ಕೆ ಬಂದ ಬಳಿಕ, ಹುಬ್ಬಳ್ಳಿ–ಧಾರವಾಡದ ಅನೇಕ ಪ್ರದೇಶಗಳಲ್ಲಿ ಎದುರಾಗುತ್ತಿರುವ ನೀರಿನ ಕೊರತೆ ಬಹುಮಟ್ಟಿಗೆ ನಿವಾರಣೆಯಾಗಲಿದೆ. ಮುಂದಿನ ದಿನಗಳಲ್ಲಿ ನಿರಂತರ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ಸಚಿವ ಬೈರತಿ ಸುರೇಶ್ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಂದೆ–ಮಗನ ಸಂಬಂಧದ ಭಾವುಕ ಕಥನದ ‘ಚೌಕಿದಾರ್’ ವಿಮರ್ಶೆ

ನಗರಾಭಿವೃದ್ಧಿ ಇಲಾಖೆಯು ಯೋಜನೆಯ ಕಾಮಗಾರಿಗಳನ್ನು ಹಂತ ಹಂತವಾಗಿ ವೇಗವಾಗಿ ಪೂರ್ಣಗೊಳಿಸುವ ಗುರಿ ಹೊಂದಿದ್ದು, ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಹುಬ್ಬಳ್ಳಿ–ಧಾರವಾಡ ಜೋಡಿ ನಗರಗಳ ಭವಿಷ್ಯದ ನೀರಿನ ಅಗತ್ಯತೆಗಳನ್ನು ಪೂರೈಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Previous articleಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ
Next articleಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್‌ಗೆ ಪ್ರಮುಖ ಖಾತೆ ಹಂಚಿಕೆ