ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಹೆಮ್ಮೆಯ ಸಂಕೇತವಾಗಿರುವ ಮಂಗಳೂರು ದಸರಾ ಹಬ್ಬದ ವೈಭವವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ, 2026–27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ₹5 ಕೋಟಿ ಅನುದಾನ ಘೋಷಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಪ್ರತಿವರ್ಷ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಮಂಗಳೂರು ದಸರಾ, ಮೈಸೂರು ದಸರಾ ನಂತರ ರಾಜ್ಯದಲ್ಲೇ ಅತೀ ಹೆಚ್ಚು ಜನ ಸೇರುವ ಮಹೋತ್ಸವವಾಗಿದ್ದು, ನವರಾತ್ರಿ ಅವಧಿಯಲ್ಲಿ ಜಿಲ್ಲೆಯ ಪ್ರಸಿದ್ಧ ತೀರ್ಥಕ್ಷೇತ್ರಗಳು ಭಕ್ತರಿಂದ ತುಂಬಿ ತುಳುಕುತ್ತವೆ. ಇಂತಹ ವೈಭವದ ಹಬ್ಬಕ್ಕೆ ರಾಜ್ಯ ಸರ್ಕಾರದಿಂದ ಸಮರ್ಪಕ ಅನುದಾನ ದೊರೆತರೆ, ಇನ್ನಷ್ಟು ವಿಜೃಂಭಣೆಯಿಂದ ದಸರಾ ಆಚರಣೆ ಸಾಧ್ಯವಾಗಲಿದೆ ಎಂದು ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಇದನ್ನೂ ಓದಿ: UGC ಇಕ್ವಿಟಿ ನಿಯಮಗಳು ‘ವಿಳಂಬವಾದರೂ ಸ್ವಾಗತಾರ್ಹ’ : ಸ್ಟಾಲಿನ್
ಅನುದಾನದಿಂದ ದಸರಾ ವೈಭವ ಇನ್ನಷ್ಟು ಹೆಚ್ಚಲಿದೆ: ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ₹5 ಕೋಟಿ ಅನುದಾನ ಘೋಷಿಸಿದಲ್ಲಿ, ಮಂಗಳೂರು ದಸರಾವನ್ನು ವಿಸ್ತೃತ ಕಾರ್ಯಕ್ರಮಗಳು, ಸಾಂಸ್ಕೃತಿಕ ಪ್ರದರ್ಶನಗಳು, ಧಾರ್ಮಿಕ ಆಚರಣೆಗಳು ಹಾಗೂ ಪ್ರವಾಸೋದ್ಯಮ ಪ್ರೋತ್ಸಾಹದೊಂದಿಗೆ ಇನ್ನಷ್ಟು ಭವ್ಯವಾಗಿ ಆಯೋಜಿಸಬಹುದಾಗಿದೆ. ಇದರಿಂದ ಹಬ್ಬದ ಸಂಭ್ರಮ ಹೆಚ್ಚುವುದರ ಜೊತೆಗೆ, ಸ್ಥಳೀಯ ಆರ್ಥಿಕ ಚಟುವಟಿಕೆಗೂ ಉತ್ತೇಜನ ಸಿಗಲಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.
ಪಾಲಿಕೆ ಆಡಳಿತದ ಅವಧಿಯಲ್ಲಿ ದೀಪಾಲಂಕಾರಕ್ಕೆ ಮಹತ್ವದ ನಿರ್ಧಾರ: ಈ ಸಂದರ್ಭದಲ್ಲಿ, ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಕೈಗೊಂಡ ಮಹತ್ವದ ನಿರ್ಧಾರವನ್ನು ಶಾಸಕರು ಸ್ಮರಿಸಿದರು.
ಇದನ್ನೂ ಓದಿ: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್
ದಸರಾ ಸಂದರ್ಭದಲ್ಲಿ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಆರಂಭವಾಗಿ ಮಂಗಳಾದೇವಿ, ಉರ್ವ ಮಾರಿಗುಡಿ, ಕಾರ್ ಸ್ಟ್ರೀಟ್, ಡೊಂಗರಕೇರಿ ಸೇರಿದಂತೆ ಇಡೀ ನಗರಕ್ಕೆ ಪಾಲಿಕೆ ವತಿಯಿಂದಲೇ ದೀಪಾಲಂಕಾರ ಮಾಡಬೇಕು ಎಂಬ ಚಿಂತನೆಯೊಂದಿಗೆ, ಅಂದಿನ ಮೇಯರ್, ಕಾರ್ಪೊರೇಟರ್‌ಗಳು, ಸ್ಥಾಯಿ ಸಮಿತಿ ಸದಸ್ಯರು ಹಾಗೂ ಜಿಲ್ಲಾ ಪಕ್ಷದ ನಾಯಕರ ಸಹಕಾರದಿಂದ ನಿರ್ಧಾರ ಕೈಗೊಳ್ಳಲಾಗಿತ್ತು.
ಈ ಕ್ರಮದಿಂದಾಗಿ, ದೇವಸ್ಥಾನಗಳು ದೀಪಾಲಂಕಾರಕ್ಕಾಗಿ ವರ್ಷಕ್ಕೆ ಸುಮಾರು ₹50 ರಿಂದ ₹60 ಲಕ್ಷದವರೆಗಿನ ಆರ್ಥಿಕ ಹೊರೆಯನ್ನು ತಪ್ಪಿಸಿಕೊಂಡಿರುವುದು ಗಮನಾರ್ಹವಾಗಿದೆ. ಇದು ಸಾರ್ವಜನಿಕ ಹಿತದೃಷ್ಟಿಯಿಂದ ತೆಗೆದುಕೊಂಡ ಮಹತ್ವದ ನಿರ್ಧಾರವಾಗಿತ್ತು ಎಂದು ಶಾಸಕರು ವಿವರಿಸಿದರು.
ಇದನ್ನೂ ಓದಿ: ಸರಣಿ ಅಪಘಾತ: ನಟ ಮಯೂರ್ ಪಟೇಲ್ ವಿರುದ್ಧ FIR
ಆದ್ಯತೆಯ ಮೇರೆಗೆ ಕ್ರಮಕ್ಕೆ ಮನವಿ: ಮಂಗಳೂರು ದಸರಾ ಕೇವಲ ಧಾರ್ಮಿಕ ಹಬ್ಬವಲ್ಲ, ಅದು ಜಿಲ್ಲೆಯ ಸಾಂಸ್ಕೃತಿಕ ಗುರುತು ಮತ್ತು ಪ್ರವಾಸೋದ್ಯಮಕ್ಕೆ ದೊಡ್ಡ ಆಧಾರವಾಗಿರುವುದರಿಂದ, ರಾಜ್ಯ ಸರ್ಕಾರ ಈ ವಿಷಯಕ್ಕೆ ಆದ್ಯತೆಯ ಮೇರೆಗೆ ಸ್ಪಂದಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರಲ್ಲಿ ಮನವಿ ಮಾಡಿದ್ದಾರೆ.























