ಬೆಂಗಳೂರು: ಹಿರಿಯ ಕಾರ್ಮಿಕ ಮುಖಂಡ ಎಚ್.ವಿ ಅನಂತ್ ಸುಬ್ಬರಾವ್ (82) ಅವರು ತೀವ್ರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು.
ಮೂಲತಃ ಹಾಸನ ಜಿಲ್ಲೆಯ ಅರಕಲಗೂಡಿನವರಾದ ಸುಬ್ಬರಾವ್ ಅವರು ಕಾರ್ಮಿಕ ಹೋರಾಟ ಚಳುವಳಿ ಮೂಲಕ ರಾಜ್ಯದ ಕಾರ್ಮಿಕ ಮುಖಂಡನಾಗಿ ಹೆಸರು ಪಡೆದಿದ್ದರು.
ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿ, ಎಐಟಿಯುಸಿ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರೂ ಆಗಿ ಸುಬ್ಬರಾವ್ ಸೇವೆ ಸಲ್ಲಿಸುತ್ತಿದ್ದರು.
ಮುಷ್ಕರ ಮುಂದೂಡಿಕೆ: ಸಾರಿಗೆ ನೌಕರರ ಪಾಲಿನ ಆಪತ್ಬಾಂಧವನಂತಿದ್ದ ಅನಂತ ಸುಬ್ಬರಾವ್ ನೇತೃತ್ವದಲ್ಲೇ ನಾಳೆ ಮುಷ್ಕರ ಹಾಗೂ ಬೆಂಗಳೂರು ಚಲೋ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದರು. ಆದರೆ ಸುಬ್ಬರಾವ್ ನಿಧನರಾದ ಕಾರಣ ನಾಳೆ ನಡೆಯಲಿದ್ದ ಸಾರಿಗೆ ನೌಕರರ ಮುಷ್ಕರವನ್ನು ಮುಂದೂಡಲಾಗಿದೆ.






















