ಮಂಗಳೂರು / ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಧಮ್ಕಿ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ (Rajeev Gowda) ಅವರಿಗೆ ತಲೆಮರೆಸಿಕೊಳ್ಳಲು ಸಹಕರಿಸಿದ್ದ ಆರೋಪದ ಮೇರೆಗೆ ಮತ್ತೊಬ್ಬ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಂಗಳೂರಿನ ಮೈಕಲ್ ಜೋಸೇಫ್ ರೆಗೋ ಎಂದು ಗುರುತಿಸಲಾಗಿದೆ.
ಪೊಲೀಸರ ತನಿಖೆಯಲ್ಲಿ, ಪಚ್ಚನಾಡಿ ಸಮೀಪದಲ್ಲಿರುವ ಮೈಕಲ್ ಅವರಿಗೆ ಸೇರಿದ ಫಾರ್ಮ್ ಹೌಸ್ ನಲ್ಲಿ ರಾಜೀವ್ ಗೌಡ ಕೆಲಕಾಲ ತಲೆಮರೆಸಿಕೊಂಡಿದ್ದ ವಿಷಯ ಬೆಳಕಿಗೆ ಬಂದಿದೆ. ಈ ಮಾಹಿತಿ ಲಭಿಸಿದ ತಕ್ಷಣ ಚಿಕ್ಕಬಳ್ಳಾಪುರ ಪೊಲೀಸರು ಮಂಗಳೂರು ಕಡೆಗೆ ತೆರಳಿದ್ದರು. ಆದರೆ ಪೊಲೀಸರು ಆಗಮಿಸುವ ಮಾಹಿತಿ ತಿಳಿದ ರಾಜೀವ್ ಗೌಡ, ತನ್ನ ಕಾರನ್ನು ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಬಿಟ್ಟು, ಮೈಕಲ್ ಜೋಸೇಫ್ ರೆಗೋ ಅವರ ಕಾರಿನಲ್ಲಿ ಕೇರಳಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಜೀವ ಬೆದರಿಕೆ ಪ್ರಕರಣ: ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ಕೇರಳದಲ್ಲಿ ಅರೆಸ್ಟ್
ಪೊಲೀಸರು ಹಿಂಬಾಲಣೆ ಮುಂದುವರಿಸಿ, ರಾಜೀವ್ ಗೌಡ ಹಾಗೂ ಮೈಕಲ್ ಇಬ್ಬರನ್ನೂ ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಳ್ಳಲು ನೆರವು ನೀಡಿದ ಆರೋಪದ ಮೇರೆಗೆ ಮೈಕಲ್ ಅವರನ್ನು ಅಧಿಕೃತವಾಗಿ ಬಂಧಿಸಲಾಗಿದೆ.
ಗಮನಾರ್ಹವಾಗಿ, ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಟನೆಯ ‘ಕಲ್ಟ್’ ಚಿತ್ರದ ಫ್ಲೆಕ್ಸ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ರಾಜೀವ್ ಗೌಡ ದೂರವಾಣಿ ಮೂಲಕ ಧಮ್ಕಿ ಹಾಕಿದ್ದ. ಈ ಧಮ್ಕಿ ಆಡಿಯೋ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದಂತೆಯೇ ರಾಜೀವ್ ಗೌಡ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದರೂ, ಅಮೃತಗೌಡ ಅವರು ಪೊಲೀಸರಿಗೆ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಕೊನೆಗೂ ಸೆರೆಯಾದ ಚಿರತೆ: ಒಂದೂವರೆ ತಿಂಗಳ ಭಯಕ್ಕೆ ಮುಕ್ತಿ
ಪ್ರಕರಣ ದಾಖಲಾಗುತ್ತಿದ್ದಂತೆ ರಾಜೀವ್ ಗೌಡ ಪರಾರಿಯಾಗಿದ್ದು, ಜಾಮೀನು ಪಡೆಯಲು ನಾನಾ ಕಸರತ್ತುಗಳನ್ನು ನಡೆಸಿದ್ದ. ಆದರೆ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದರ ಬಳಿಕವೂ ಬಂಧನ ವಿಳಂಬವಾಗುತ್ತಿರುವ ಬಗ್ಗೆ ಮಾಧ್ಯಮಗಳು ಸರ್ಕಾರವನ್ನು ಪ್ರಶ್ನಿಸುತ್ತಿದ್ದವು. ಕೊನೆಗೂ 13 ದಿನಗಳ ನಂತರ ಜನವರಿ 26 ರಂದು ರಾಜೀವ್ ಗೌಡ ಅವರನ್ನು ಪೊಲೀಸರು ಬಂಧಿಸಿದ್ದರು.
ಈ ಪ್ರಕರಣವು ಆಡಳಿತಾಧಿಕಾರಿಗಳ ಭದ್ರತೆ, ರಾಜಕೀಯ ಒತ್ತಡ ಮತ್ತು ಕಾನೂನು ಜಾರಿಯ ಕುರಿತಂತೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.























