Home Advertisement
Home ಸಿನಿ ಮಿಲ್ಸ್ ʼಜನ ನಾಯಗನ್ʼ ಚಿತ್ರಕ್ಕೆ ಹಿನ್ನಡೆ : ಸದ್ಯಕ್ಕಿಲ್ಲ ಬಿಡುಗಡೆಯ ಗ್ಯಾರೆಂಟಿ

ʼಜನ ನಾಯಗನ್ʼ ಚಿತ್ರಕ್ಕೆ ಹಿನ್ನಡೆ : ಸದ್ಯಕ್ಕಿಲ್ಲ ಬಿಡುಗಡೆಯ ಗ್ಯಾರೆಂಟಿ

0
13

ಚೆನ್ನೈ: ತಮಿಳು ಚಿತ್ರರಂಗದ ನಟ ವಿಜಯ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಜನ ನಾಯಗನ್’ ಗೆ ದೊಡ್ಡ ಹಿನ್ನಡೆಯಾಗಿದ್ದು, ಚಿತ್ರದ ಬಿಡುಗಡೆ ಇನ್ನಷ್ಟು ವಿಳಂಬಗೊಳ್ಳುವ ಸಾಧ್ಯತೆ ಎದುರಾಗಿದೆ. ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ ಸೂಚಿಸಿದ್ದ ಏಕ ಸದಸ್ಯ ನ್ಯಾಯಾಧೀಶರ ಆದೇಶವನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ (ಜ.27) ರದ್ದುಗೊಳಿಸಿದೆ.

ಏಕ ಸದಸ್ಯ ಪೀಠದ ನ್ಯಾಯಾಧೀಶರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಗೆ ತಮ್ಮ ಪ್ರತಿವಾದ ಮಂಡಿಸಲು ಸೂಕ್ತ ಸಮಯ ನೀಡದೆ ಆದೇಶ ಹೊರಡಿಸಿದ್ದಾರೆ ಎಂಬ ಆಧಾರದ ಮೇಲೆ ಹೈಕೋರ್ಟ್ ಈ ತೀರ್ಮಾನ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ‘ಜನ ನಾಯಗನ್’ ಚಿತ್ರದ ಸೆನ್ಸಾರ್ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಪ್ರಕರಣವನ್ನು ಮರು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:  ಸರ್ಕಾರ ತೊಲಗುವ ತನಕ ಸಮಸ್ಯೆ ಬಗೆಹರಿಯಲ್ಲ: ಇದು ಗ್ಯಾರೆಂಟಿ

ಹೈಕೋರ್ಟ್ ಅಭಿಪ್ರಾಯದಂತೆ, ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡುವ ವಿಷಯದಲ್ಲಿ CBFC ತನ್ನ ವಾದವನ್ನು ಸಮರ್ಪಕವಾಗಿ ಮಂಡಿಸಲು ಅವಕಾಶ ಕಲ್ಪಿಸಬೇಕಾಗಿತ್ತು. ಆದರೆ ಆ ಅವಕಾಶ ನೀಡದೇ ಏಕ ಸದಸ್ಯ ಪೀಠವು ಆದೇಶ ನೀಡಿರುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.

ಪ್ರಸ್ತುತ ‘ಜನ ನಾಯಗನ್’ ಚಿತ್ರವು ಇನ್ನೂ CBFC ಯಿಂದ ಸೆನ್ಸಾರ್ ಪ್ರಮಾಣಪತ್ರವನ್ನು ಪಡೆದಿಲ್ಲ. ಹೀಗಾಗಿ ಮಂಡಳಿಯ ಅಧಿಕೃತ ಅನುಮತಿ ಇಲ್ಲದೆ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಇದರೊಂದಿಗೆ ಈಗಾಗಲೇ ವಿಳಂಬವಾಗಿರುವ ಚಿತ್ರದ ಬಿಡುಗಡೆಯ ಮೇಲೆ ಮತ್ತಷ್ಟು ಅನಿಶ್ಚಿತತೆ ಮೂಡಿದೆ.

ಇದನ್ನೂ ಓದಿ:  ಕೊನೆಗೂ ಸೆರೆಯಾದ ಚಿರತೆ: ಒಂದೂವರೆ ತಿಂಗಳ ಭಯಕ್ಕೆ ಮುಕ್ತಿ

ಗಮನಾರ್ಹವೆಂದರೆ, ‘ಜನ ನಾಯಗನ್’ ಚಿತ್ರದ ಸೆನ್ಸಾರ್ ಪ್ರಮಾಣಪತ್ರಕ್ಕೆ ಸಂಬಂಧಿಸಿದ ವಿವಾದದ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್ ಜನವರಿ 20ರಂದು ಕಾಯ್ದಿರಿಸಿದ್ದು, ಜನವರಿ 27ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು. ಅದರಂತೆ ಮಂಗಳವಾರ ಪ್ರಕಟಿಸಿದ ತೀರ್ಪಿನಲ್ಲಿ ಏಕ ಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿ, ಪ್ರಕರಣವನ್ನು ಮರು ವಿಚಾರಣೆಗೆ ಒಪ್ಪಿಸಲಾಗಿದೆ.

ಈ ತೀರ್ಪಿನ ಬಳಿಕ ‘ಜನ ನಾಯಗನ್’ ಚಿತ್ರದ ಬಿಡುಗಡೆ ದಿನಾಂಕ ಮತ್ತಷ್ಟು ಮುಂದೂಡಲ್ಪಡುವ ಸಾಧ್ಯತೆ ಹೆಚ್ಚಿದ್ದು, ಅಭಿಮಾನಿಗಳ ನಿರೀಕ್ಷೆಗೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.

Previous articleಸರ್ಕಾರ ತೊಲಗುವ ತನಕ ಸಮಸ್ಯೆ ಬಗೆಹರಿಯಲ್ಲ: ಇದು ಗ್ಯಾರೆಂಟಿ